ಅಹಿಂದ ಶೈಕ್ಷಣಿಕ ಪ್ರವಾಸ ಕುರಿತು ಅಭಿಪ್ರಾಯಗಳು
ವಿದ್ಯಾರ್ಥಿಗಳೆಲ್ಲರೂ ಸಮಾನರು ಎಂದು ಹೇಳುತ್ತ ನಮ್ಮನ್ನು ಜಾತಿ ಆಧಾರದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ನಮ್ಮ ಸಂಸ್ಕೃತಿ, ಪುರಾತನ ದೇವಾಲಯ, ಸ್ಮಾರಕಗಳನ್ನು ವೀಕ್ಷಿಸಿ ಶೈಕ್ಷಣಿಕ ಮಾಹಿತಿ ಅರಿಯುವ ದೃಷ್ಟಿಯಿಂದ ಎಲ್ಲ ಹೈಸ್ಕೂಲ್ ಮಕ್ಕಳಿಗೂ ರಾಜ್ಯ ಪ್ರವಾಸ ಹಮ್ಮಿಕೊಳ್ಳುವುದು ಸೂಕ್ತ.
-ಅಂಕಿತ್, ವಿದ್ಯಾರ್ಥಿ, ಕೆಎಲ್ಇ ಶಾಲೆ
ಒಂದು ಶಾಲೆಯ ಕೆಲವೇ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು ಉಳಿದವರನ್ನು ಬಿಡುವುದರಿಂದ ಅವರಲ್ಲಿ ಕೀಳರಿಮೆ ಬೆಳೆಯಬಹುದು. ಸ್ನೇಹಿತರೊಂದಿಗೆ ಪ್ರವಾಸ ಹೋಗುವಾಗಿನ ಅನುಭವವೇ ಬೇರೆ. ಅದನ್ನು ಕೆಲವರು ಕಳೆದುಕೊಳ್ಳುತ್ತಾರೆ. ನಮ್ಮ ಇತಿಹಾಸವನ್ನು ಅರಿಯಲು ಸಾಧ್ಯವಾಗುವುದಿಲ್ಲ. ಮಕ್ಕಳಲ್ಲಿ ಭೇದಭಾವ ಮಾಡದೇ ಎಲ್ಲರಿಗೂ ರಾಜ್ಯ ದರ್ಶನದ ಅವಕಾಶ ಕಲ್ಪಿಸಬೇಕು.
-ಸಂಪ್ರೀತಾ, ಜೆ.ಪಿ. ರೋಟರಿ ಶಾಲೆ
ರಾಜ್ಯ ದರ್ಶನ ಪ್ರವಾಸ ಕೈಗೊಳ್ಳಲು ಎಲ್ಲ ಹೈಸ್ಕೂಲ್ ಮಕ್ಕಳಿಗೂ ಅವಕಾಶ ನೀಡಬೇಕು. ಇಲ್ಲದಿದ್ದರೆ ಕೆಲವರಿಗೆ ವಿದ್ಯಾರ್ಥಿ ದೆಸೆಯಲ್ಲಿ ಕೈಗೊಳ್ಳುವ ಪ್ರವಾಸ ಮಾಡುವ ಅವಕಾಶದಿಂದ ವಂಚಿತರಾಗುತ್ತಾರೆ. ಇದರಿಂದ ವಂಚಿತ ವಿದ್ಯಾರ್ಥಿಗಳು ಮಾನಸಿಕವಾಗಿ ಕೊರಗುವಂತಾಗುತ್ತದೆ.
-ಅಭಿಷೇಕ್, ಸರ್ ಎಂ.ವಿ. ಶಾಲೆ
ನಾವೆಲ್ಲ ಒಂದೇ ಎಂದು ಭಾವಿಸಿದ್ದ ವಿದ್ಯಾರ್ಥಿಗಳಲ್ಲೇ ಭಿನ್ನಾಭಿಪ್ರಾಯ ಮೂಡುವುದು ನಿಶ್ಚಿತ. ಇಂಥ ಯೋಜನೆಯನ್ನು ಹಮ್ಮಿಕೊಳ್ಳುವಾಗ ಸರ್ಕಾರ ಯೋಚಿಸಬೇಕು. ಮಕ್ಕಳ ಮನಸ್ಸಿಗೆ ನೋವಾಗದಂತೆ ಎಲ್ಲ ಜಾತಿಯ ಮಕ್ಕಳಿಗೂ ಪ್ರವಾಸ ಭಾಗ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಶಾಲಾ ಮಕ್ಕಳಲ್ಲೇ ಜಾತಿ ಗುಂಪು ಸೃಷ್ಟಿಯಾಗಬಹುದು.
-ನವೀನ್, ಕನಕದಾಸ ಪ್ರೌಢಶಾಲೆ
ಸರ್ಕಾರ ಜಾರಿಗೆ ತಂದಿರುವ ಯೋಜನೆಯಿಂದ ವಿದ್ಯಾರ್ಥಿಗಳ ಮಧ್ಯೆಯೇ ಒಡಕು ಮೂಡುವಂತಾಗಿ ಶಾಲಾ ವಾತಾವರಣವೇ ಹದಗೆಡಬಹುದು. ಈವರೆಗೆ ಅನ್ಯೋನ್ಯವಾಗಿ ಇದ್ದವರು ನಂತರ ಬೇರೆಯಾಗಬಹುದು. ಸರ್ಕಾರ ಎಲ್ಲ ಮಕ್ಕಳಿಗೂ ಪ್ರವಾಸಕ್ಕೆ ಅನುವು ಮಾಡಿಕೊಡುವುದು ಒಳಿತು. ಇದರಿಂದ ಜಾತಿ ಸಾಮರಸ್ಯ ಕಾಣಬಹುದು.
-ತಿಪ್ಪಣ್ಣ, ಕನಕ ಗುರುಪೀಠ, ಕಾಗಿನೆಲೆ
ಸರ್ಕಾರದ ಯೋಜನೆಯ ಉದ್ದೇಶ ಎಲ್ಲ ಮಕ್ಕಳು ರಾಜ್ಯದ ಇತಿಹಾಸ ಅರಿಯಬೇಕು ಎಂಬುದಾಗಿದ್ದರೆ ಪ್ರವಾಸ ಕಾರ್ಯಕ್ರಮವನ್ನು ಜಾತಿಗೆ ಸೀಮಿತಗೊಳಿಸಬಾರದು. ವಿದ್ಯಾರ್ಥಿಗಳ ನಡುವೆ ಜಾತಿ, ಶ್ರೀಮಂತಿಕೆಯ ವಿಚಾರವೇ ಇರುವುದಿಲ್ಲ. ಹೀಗಿರುವಾಗ ಈ ಯೋಜನೆಯಿಂದ ಜಾತಿ ವರ್ಗೀಕರಣವಾಗುವುದಾದರೆ ರದ್ದುಗೊಳಿಸುವುದೇ ಉತ್ತಮ. ಇಲ್ಲದಿದ್ದರೆ ಎಲ್ಲರಿಗೂ ವಿಸ್ತರಿಸಬೇಕು.
-ಅರವಿಂದ ಬಿ.ಆರ್.
ಶಾಲೆಯಲ್ಲಿ ನಾವು ಅಲ್ಪಸಂಖ್ಯಾತರು, ಮತ್ತೊಬ್ಬ ಬೇರೆ ಜಾತಿಯವ ಎಂಬ ಭೇದವಿಲ್ಲ. ಹೀಗಿರುವಾಗ ಜಾತಿ ಹೆಸರಿನಲ್ಲಿ ನಮ್ಮನ್ನು ವರ್ಗೀಕರಿಸಿ ಪ್ರವಾಸ ಹಮ್ಮಿಕೊಳ್ಳುವುದು ಸರಿಯಲ್ಲ. ಇದು ನಮಗೂ ಕೀಳರಿಮೆ ತರುತ್ತದೆ. ಪ್ರವಾಸದಿಂದ ವಂಚಿತರಾದವರಿಗೂ ಬೇಸರವಾಗುತ್ತದೆ.
-ಇಲಿಯಾಸ್ ಅಹ್ಮದ್
ಸರ್ಕಾರವೇ ಇಂಥ ಅಸಮಾನತೆ ಪೋಷಿಸುವ ಯೋಜನೆ ಹಮ್ಮಿಕೊಳ್ಳುತ್ತಿರುವುದು ದುರಂತ. ಅಭ್ಯಾಸ, ಬಿಸಿಯೂಟ ಎಲ್ಲವನ್ನೂ ನಾವು ಒಂದಾಗಿ ಮಾಡುತ್ತೇವೆ. ಆದರೆ ಪ್ರವಾಸಕ್ಕೆ ಮಾತ್ರ ಜಾತಿಯನ್ನು ಅಡ್ಡ ತರಲಾಗುತ್ತಿದೆ. ಏಕೆಂಬುದು ಅರ್ಥವಾಗುತ್ತಿಲ್ಲ. ಯಾವ ವಿದ್ಯಾರ್ಥಿಗೂ ನೋವಾಗದಂತೆ ಸರ್ಕಾರ ನೋಡಿಕೊಳ್ಳಬೇಕು.
-ಸಂಜಯ್
ಜಾತ್ಯತೀತತೆ ಬಗ್ಗೆ ಮಾತನಾಡುವವರೇ ಇಂಥ ತಾರತಮ್ಯದ ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಬೇಸರದ ಸಂಗತಿ. ತರಗತಿಯೊಂದರ ಕೆಲ ಮಕ್ಕಳಿಗೆ ಮಾತ್ರ ಪ್ರವಾಸ ಹಮ್ಮಿಕೊಂಡರೆ ಉಳಿದವರು ಏನು ಮಾಡಬೇಕು? ಏನೂ ತಪ್ಪು ಮಾಡದೆ ಕೆಲವನ್ನು ಬಿಡುವುದು ಸರಿಯಲ್ಲ. ಎಲ್ಲ ಮಕ್ಕಳಿಗೆ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರಕ್ಕೆ ಹಣಕಾಸಿನ ತೊಂದರೆ ಎದುರಾದರೆ ಯೋಜನೆಯನ್ನೇ ರದ್ದು ಮಾಡಲಿ. ಇಂಥ ಅಸಮಾನತೆ ಪ್ರವಾಸ ಅಗತ್ಯವಿಲ್ಲ.
-ಗ್ರೀಷ್ಮಾ
ಎಲ್ಲ ಮಕ್ಕಳಿಗೂ ಪ್ರವಾಸ ಯೋಜನೆ ವಿಸ್ತರಿಸುವುದು ಸರ್ಕಾರದಿಂದ ಅಸಾಧ್ಯವಾದರೆ ಮೆರಿಟ್ ಆಧಾರದಲ್ಲಿ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಿ. ಇಲ್ಲದಿದ್ದರೆ ಪ್ರತಿ ವರ್ಷ ಒಂದು ತರಗತಿಯ ಮಕ್ಕಳಿಗೆ ನಾಡಿನ ದರ್ಶನ ಮಾಡಿಸಲಿ. ಅದನ್ನು ಬಿಟ್ಟು ಒಂದು ಜಾತಿ, ಧರ್ಮದ ಅಧಾರದಲ್ಲಿ ಪ್ರವಾಸಕ್ಕೆ ಆಯ್ಕೆಯಾಗುವುದು ಯಾರಿಗೂ ಬೇಕಿಲ್ಲ.
-ಬಷೀರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

