ಕೃಷಿಯನ್ನೂ ಕೈಗಾರಿಕೆ ಎಂದು ಪರಿಗಣಿಸಿ: ಬೇವಿನಹಳ್ಳಿ ಕರೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ನ. 18
ಸರ್ಕಾರಗಳು ಕೃಷಿಯನ್ನೂ ಕೈಗಾರಿಕೆ ಎಂದು ಪರಿಗಣಿಸಿ, ಸವಲತ್ತು ನೀಡಲು ಮುಂದಾದರೆ ಮಾತ್ರ ನಿರುದ್ಯೋ ಗ ಸಮಸ್ಯೆ ನಿವಾರಣೆ ಸಾಧ್ಯವೆಂದು ರಾಜ್ಯ ರೈತ ಸಂಘದ ಸಂಚಾಲಕ ಕೆ. ಬೇವಿನಹಳ್ಳಿ ಮಹೇಶ ಹೇಳಿದರು.
ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ತಾಲೂಕಿನ ಹೂಲಿಕಟ್ಟಿಯಲ್ಲಿ ರೈತ ಸಂಘದ ಗ್ರಾಮ ಶಾಖೆ ಉದ್ಘಾಟಿಸಿದ ಅವರು, ಉದ್ಯೋಗಾವಕಾಶ ಹೆಚ್ಚುತ್ತದೆ ಎಂಬ ನೆಪದಲ್ಲಿ ಸರ್ಕಾರಗಳು ಕೈಗಾರಿಕೋದ್ಯಮಿಗಳಿಗೆ ಉಚಿತವಾಗಿ ಹಾಗೂ ಅತ್ಯಂತ ಕಡಿಮೆ ದರದಲ್ಲಿ ಭೂಮಿ, ನೀರು, ವಿದ್ಯುತ್, ರಸ್ತೆ-ಸಂಚಾರ ವ್ಯವಸ್ಥೆ ಹಾಗೂ ತೆರಿಗೆ ವಿನಾಯ್ತಿ ನೀಡುತ್ತಿದೆ. ಅನಕ್ಷರಸ್ಥರಾದರೂ ದೇಶದ ಬೆನ್ನೆಲುಬೆಂಬ ಖ್ಯಾತಿಗೆ ಪಾತ್ರರಾಗಿರುವ ರೈತರಿಗೇಕೆ ಸೌಲಭ್ಯ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ರೈತರ ಉತ್ಪನ್ನಗಳಿಗೆ ಸರ್ಕಾರ ಯೋಗ್ಯ ಬೆಲೆ, ಉತ್ತಮ ಮಾರುಕಟ್ಟೆ ಒದಗಿಸಬೇಕು. ತಾಲೂಕು ಕೇಂದ್ರಗಳಲ್ಲಿರುವ ಎಪಿಎಂಸಿಗಳು ರೈತರನ್ನು ಆಕರ್ಷಿಸುವಲ್ಲಿ ವಿಫಲವಾಗಿದ್ದು, ಗ್ರಾಪಂ ಅಥವಾ ಹೋಬಳಿ ಮಟ್ಟದಲ್ಲಿ ವ್ಯವಸಾಯ ಸೇವಾ ಸಹಕಾರಿ ಮಂಡಳಿ ಆರಂಭಿಸಬೇಕು. ದಿನವಿಡೀ ತ್ರಿ-ಪೇಸ್ ವಿದ್ಯುತ್ ಪೂರೈಸಬೇಕು. ಕಳಪೆ ಬೀಜ ವಿತರಿಸಿರುವ ಕಂಪನಿಗಳ ಮಾಲಿಕರ ವಿರುದ್ಧ ಸರ್ಕಾರ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕೆಂದು ಕೆ. ಬೇವಿನಹಳ್ಳಿ ಮಹೇಶ ಆಗ್ರಹಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಪರಮೇಶ ಚಿನ್ನಣ್ಣನವರ ರೈತ ಸಂಘದ ನಾಮಫಲಕ ಅನಾವರಣಗೊಳಿಸಿದರು. ಹೇಮನಗೌಡ ಕೆಂಚನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಹರಿಹರ ತಾಲೂಕು ರೈತ ಸಂಘದ ಅಧ್ಯಕ್ಷ ಮೆಣಸಿನಹಾಳ ರುದ್ರಗೌಡ್ರ, ಪ್ರಧಾನ ಕಾರ್ಯದರ್ಶಿ ರಾಜನಹಳ್ಳಿ ಪರಶುರಾಮ, ಜಿಲ್ಲಾ ಮುಖಂಡರಾದ ತಮ್ಮಣ್ಣ ಮುದುಕಣ್ಣನವರ, ಶಿವನಹಳ್ಳಿ ಹನುಮಂತಪ್ಪ, ಭೀಮಪ್ಪ ಕುಡುಪಲಿ, ಶೇಖರಗೌಡ ಸಣ್ಣಹಾಲನಗೌಡ್ರ, ವೀರಭದ್ರಪ್ಪ ಉಜ್ಜನಗೌಡ್ರ, ಶೇಖಪ್ಪ ಕೊಟ್ರಪ್ಪನವರ, ರೇವಣಶಿದಪ್ಪ ಬಣಕಾರ, ನಿಂಗಪ್ಪ ಉಜ್ಜರ, ಮಲ್ಲಪ್ಪ ಉಜ್ಜರ, ಹನುಮಂತಪ್ಪ ಹೊಸಳ್ಳಿ, ಮಂಜಪ್ಪ ದುಗ್ಗತ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

