ಹಾವೇರಿ

ಅನುಮತಿ: ಸಿಇಒ ಅಮಾನತಿಗೆ ಆಗ್ರಹ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 19
ಜಿಲ್ಲಾ ಉಸ್ತುವಾರಿ ಸಚಿವರ ಪತ್ರಕ್ಕೆ ಕ್ಯಾರೇ ಎನ್ನದೇ ಮಧ್ಯಾಹ್ನದ ಬಿಸಿಯೂಟ ಆಹಾರ ಪೂರೈಕೆ ಮಾಡಲು ಆದರ್ಶ ಎಜ್ಯುಕೇಶನ್ ರೂರಲ್ ಸೊಸೈಟಿಗೆ ಅನುಮತಿ ನೀಡಿದ ಅಂದಿನ ಸಿಇಒ ಅಮಾನತು ಮಾಡುವಂತೆ ಪಾಲಕರು ಆಗ್ರಹಿಸಿದ ಘಟನೆ ಮಂಗಳವಾರ ಪ್ರತಿಭಟನೆ ಬಳಿಕ ನಡೆದ ಅಧಿಕಾರಿಗಳ ಮತ್ತು ಪಾಲಕರ ಸಭೆಯಲ್ಲಿ ಕೇಳಿ ಬಂದವು.
ಸಭೆಯನ್ನುದ್ದೇಶಿಸಿ ಮಂಜುನಾಥ ಭೋವಿ ಮಾತನಾಡಿ, ಇತ್ತೀಚೆಗೆ ಬಿಹಾರ್‌ದಲ್ಲಿ ಜರುಗಿದ ವಿಷಪೂರಿತ ಆಹಾರ ಪೂರೈಕೆ ಘಟನೆ ಜನಮಾನಸದಿಂದ ದೂರವಾಗುವ ಮುನ್ನವೇ ವಿದ್ಯಾರ್ಥಿಗಳೇ ರೋಡಿಗಿಳಿದು ಪ್ರತಿಭಟನೆ ನಡೆಸುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರು.
ಶಿಕ್ಷಕರು ಊಟ ಮಾಡಿದ ಬಳಿಕವೇ ಮಕ್ಕಳಿಗೆ ವಿತರಿಸಬೇಕೆಂಬ ನಿಯಮವಿದ್ದರೂ ಯಾವುದೇ ಶಾಲೆಗಳಲ್ಲಿ ಪಾಲಿಸದಿರುವುದು ದುರಂತ ಇದರಿಂದ ಸರ್ಕಾರದ ಯೋಜನೆಗಳ ವೈಫಲ್ಯಕ್ಕೆ ಅಧಿಕಾರಿಗಳೇ ಅಪ್ರತ್ಯಕ್ಷವಾಗಿ ಕಾರಣ ಎಂದು ಆರೋಪಿಸಿದರು.
ನಿಸ್ಸಾರ್ ಅಹ್ಮದ್ ಹಾವನೂರ ಮಾತನಾಡಿ, ಮಕ್ಕಳ ಆರೋಗ್ಯದೊಂದಿಗೆ ಚಲ್ಲಾಟ ನಡೆಸುವುದು ಶಿಕ್ಷಕರಿಗೆ ತರವಲ್ಲ. ಹಿಂದಿನ ಸರ್ಕಾರದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಆದರ್ಶ ಏಜ್ಯುಕೇಶನ್ ರೂರಲ್ ಸೊಸೈಟಿಗೆ ಗುತ್ತಿಗೆ ನೀಡದಂತೆ ಪತ್ರ ನೀಡಿದ್ದರೂ ಕ್ಯಾರೇ ಎನ್ನದ ಸಿಇಒ ಏಕಪಕ್ಷೀಯವಾಗಿ ನಿರ್ಧರಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ತಹಸೀಲ್ದಾರ್ ಶಿವಶಂಕರ್ ನಾಯಕ್, ಘಟನೆಯಿಂದ ಮನಸ್ಸಿಗೆ ನೋವಾಗಿದೆ ಉತ್ತಮ ಊಟ ನೀಡ ಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕೆ ಬದ್ಧವಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುವ ಭರವಸೆ ನೀಡಿದರು.
ಡಿಡಿಪಿಐ ಎಸ್.ಬಿ. ಕೊಡ್ಲಿ, ಆಹಾರ ಪೂರೈಸಲು ಆದರ್ಶ ಏಜ್ಯುಕೇಶನ್ ರೂರಲ್ ಸೊಸೈಟಿಗೆ ನೀಡಿರುವ ಅನುಮತಿಯನ್ನು ಇಂದಿನಿಂದಲೇ ರದ್ದುಗೊಳಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಅಲ್ಲದೇ ಖಾಸಗಿ ಶಿಕ್ಷಣ ಸಂಸ್ಥೆಗಳೇ ಖುದ್ದಾಗಿ ಬಿಸಿಯೂಟ ಪೂರೈಸಲು ಕ್ರಮ ಜರುಗಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಪಂ ಸದಸ್ಯರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಂಕ್ರಣ್ಣ ಮಾತನವರ, ಬಾಲಚಂದ್ರಗೌಡ ಪಾಟೀಲ, ಟಿಇಒ ಎಸ್.ಆರ್. ಪಾಟೀಲ, ಗಂಗಣ್ಣ ಎಲಿ, ಬಸವರಾಜ ಸಂಕಣ್ಣನವರ, ವೀರಭದ್ರ ಗೌಡ ಹೊಮ್ಮರಡಿ, ಚಂದ್ರಣ್ಣ ಶೆಟ್ಟರ್, ಪುರಸಭೆ ಸದಸ್ಯ ಮುನಾಫ್ ಎರೇಶೀಮಿ, ಬಿ.ಎಚ್. ಕಲ್ಮಠ, ಮಂಜುನಾಥ ಕೋಡಿಹಳ್ಳಿ, ನಾಗರಾಜ ಹಾವನೂರ, ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.