ಜಾನಪದಕ್ಕೆ ರಾಮೇಗೌಡರದ್ದು ವಿಶಿಷ್ಟ ಕೊಡುಗೆ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ನ. 20
ತಾಲೂಕಿನ ಗೋಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ ಜಾನಪದ ಕ್ಷೇತ್ರಕ್ಕೆ ಡಾ. ರಾಗೌ ಅವರ ಕೊಡುಗೆ ಎಂಬ ವಿಷಯದ ಕುರಿತು ಈಚೆಗೆ ವಿಚಾರ ಸಂಕಿರಣ ಜರುಗಿತು.
ಪಾಂಡವಪುರದ ಪ್ರಾಧ್ಯಾಪಕ ಡಾ. ಬೋರೇಗೌಡ ಚಿಕ್ಕಮರಳಿ ರಾಗೌ ಅವರ ಜಾನಪದ ತಾತ್ವಿಕ ಚಿಂತನೆಗಳು ಕುರಿತು ವಿಶೇಷ ಉಪನ್ಯಾಸ ನೀಡಿ, ಜನಪದ ಕಥೆಗಳನ್ನು ಸಂಗ್ರಹಿಸಿ ಅವುಗಳ ಆಶಯದ ಆಧಾರದ ಮೇಲೆ ವರ್ಗೀಕರಣ, ವಿಶ್ಲೇಷಣೆ ಇತ್ಯಾದಿ ತಾತ್ವಿಕತೆ, ವೈಜ್ಞಾನಿಕತೆಯನ್ನು ದೊರಕಿಸಿಕೊಟ್ಟ ನಾಡಿನ ಕೆಲವೇ ಕೆಲವು ವಿರಳ ತಜ್ಞರಲ್ಲಿ ರಾಗೌ ಅವರು ಒಬ್ಬರು ಎಂದು ತಿಳಿಸಿದರು.
ತಮ್ಮ ಮಹತ್ವದ ಕೃತಿಗಳ ಮೂಲಕ ಸೈದ್ಧಾಂತಿಕ ಸ್ವರೂಪವನ್ನು ನಿರ್ಧರಿಸಿದ ರಾಗೌ ಅವರು ಜಾನಪದಕ್ಕೆ ವಿಶಿಷ್ಟ ಕೊಡುಗೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ಭಾರತಿ ನಗರದ ಪ್ರಾಧ್ಯಾಪಕ ಡಾ. ಮ. ರಾಮಕೃಷ್ಣ, ರಾಗೌ ಅವರ ಜಾನಪದ ಕ್ಷೇತ್ರಕಾರ್ಯ ಮತ್ತು ಸಂಗ್ರಹಗಳು ವಿಷಯದ ಕುರಿತು ಮಾತನಾಡಿ, ಸಂಸ್ಕೃತಿ ಅಧ್ಯಯನಕ್ಕೆ ಮೂಲ ಆಕರಗಳೆನಿಸಿದ ಜನಪದರ ಜ್ಞಾನವನ್ನು ತಮ್ಮ ಅಪಾರವಾದ ಕ್ಷೇತ್ರ ಕಾರ್ಯದ ಮೂಲಕ ಸಂಗ್ರಹಿಸಿ ಕನ್ನಡ ಜಾನಪದ ಕ್ಷೇತ್ರಕ್ಕೆ ಅನನ್ಯ ಸೇವೆಯನ್ನು ನೀಡಿದವರು ಡಾ. ರಾಮೇಗೌಡ ಎಂದರು.
ಕನ್ನಡ ಜಾನಪದ ಸಂದರ್ಭ ಮತ್ತು ರಾಗೌ ಎಂಬ ವಿಷಯ ಕುರಿತು ಮೈಸೂರಿನ ಪ್ರಾಧ್ಯಾಪಕ ಡಾ. ಪಿ. ಬೆಟ್ಟೇಗೌಡ ಮಾತನಾಡಿ, ಪಾಶ್ಚಾತ್ಯ ವಿದ್ವಾಂಸರಾದ ಫ್ಲೀಟ್ ಮತ್ತು ಕಿಟ್ಟೆಲ್ ಅವರು ಲಾವಣಿ ಮತ್ತು ಗಾದೆಗಳ ಸಂಗ್ರಹದ ಮೂಲಕ ಕನ್ನಡ ಜಾನಪದ ಕ್ಷೇತ್ರದ ಆರಂಭಿಕ ಬೆಳವಣಿಗೆಗೆ ಕಾರಣರಾದವರು. ಮುಂದೆ ಜಾನಪದ ಸಂಗ್ರಹದಂತಹ ಕೆಲಸ-ಕಾರ್ಯದಲ್ಲಿ ಅತ್ಯಂತ ಶ್ರಮ, ಶ್ರದ್ಧೆಯಿಂದ ತೊಡಗಿಸಿಕೊಂಡ ರಾಗೌ ಯುವ ವಿದ್ವಾಂಸರಿಗೆ ಮೇಲ್ಪಂಕ್ತಿ ಹಾಕಿಕೊಟ್ಟರು ಎಂದು ತಿಳಿಸಿದರು.
ಜಾನಪದ ವಿದ್ವಾಂಸರಾದ ಡಾ. ರಾಮೇಗೌಡ, ಕುಲಸಚಿವ ಡಾ. ಡಿ.ಬಿ. ನಾಯಕ, ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ, ಹಿರಿಯ ಸಂಶೋಧನಾ ಅಧಿಕಾರಿ ಡಾ. ಕೆ. ಪ್ರೇಮಕುಮಾರ, ಎಂಬಿಎ ವಿಭಾಗದ ಮುಖ್ಯಸ್ಥ ಹಾಗೂ ಡೀನ್ ಪ್ರೊ. ಎಂ. ಚಂದ್ರ ಪೂಜಾರಿ ಇತರರು ಇದ್ದರು.
--
ನಿರಂತರ ಕಲಿಕೆಯೇ ಸರ್ಕಾರದ ಗುರಿ: ಯು.ಬಿ. ಬಣಕಾರ
ಹಿರೇಕೆರೂರು: ಶಾಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವ ಮೂಲಕ ಮಕ್ಕಳ ನಿರಂತರ ಕಲಿಕೆಯೇ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ರಟ್ಟಿಹಳ್ಳಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನೂತನ ಕೊಠಡಿ ಉದ್ಘಾಟನೆ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರ್ಕಾರದ ವಿನೂತನ ಯೋಜನೆಗಳನ್ನು ಸಮರ್ಪಕ ಬಳಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನೆರವಾಗಲು ಶಿಕ್ಷಕ, ಪಾಲಕರ ಪಾತ್ರ ಮುಖ್ಯವಾಗಿದೆ. ಸರ್ಕಾರ ಹೆಣ್ಣು ಮಕ್ಕಳಿಗಾಗಿ ಪದವಿಪೂರ್ವ ಶಿಕ್ಷಣದ ವರೆಗೆ ಉಚಿತ ಶಿಕ್ಷಣ ನೀಡುತ್ತಿದ್ದು, ಹೆಣ್ಣು ಮಕ್ಕಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಶಾಲಾ ಸಮಿತಿ ಅಧ್ಯಕ್ಷ ಎಂ.ಎಂ. ಚಿಕ್ಕೇರೂರು ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಶಾಂತಮ್ಮ ಹಾದಿಮನಿ, ತಾಪಂ ಅಧ್ಯಕ್ಷೆ ರೇಣುಕಾ ಚಲವಾದಿ, ಚಂದ್ರಪ್ಪ ಅಪ್ಪಣ್ಣನವರ, ತಾಪಂ ಸದಸ್ಯೆ ಪ್ರಭಾವತಿ ಕುಲಕರ್ಣಿ, ರಿಯಾಜ್ ನರಗುಂದಕರ, ಹುಸೇನಮಿಯಾ ಜಡದಿ, ಮಕ್ಬೂಲ್ ಚಿಕ್ಕೇರೂರು, ಎಂ.ಆರ್. ಮಕಾನದಾರ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

