ಪರಿಹಾರಕ್ಕೆ ಆಗ್ರಹಿಸಿ ಡಿಸಿ ಕಚೇರಿ ಮುತ್ತಿಗೆ
ಕನ್ನಡಪ್ರಭ ವಾರ್ತೆ, ಹಾವೇರಿ, ನ.20
ಕಳಪೆ ಹತ್ತಿ ಬೀಜ ಬಿತ್ತಿ ಆಗಿರುವ ಬೆಳೆಹಾನಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ನ. 22ರಂದು ಬೈಕ್ ರ್ಯಾಲಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ರೈತರು ಕಷ್ಟಪಟ್ಟು ಸಾಲಶೂಲ ಮಾಡಿ ಕೃಷಿಗೆ ಬಂಡವಾಳ ಹಾಕಿದ್ದು, ಕಳಪೆ ಹತ್ತಿ ಬೀಜದಿಂದಾಗಿ ಕಂಗಾಲಾಗಿದ್ದಾನೆ. ಹಾಕಿದ ಬಂಡವಾಳ ವಾಪಸ್ ಬರದಂತಾಗಿದ್ದು, ಜೀವನ ನಡೆಸುವುದು ಹೇಗೆ ಎಂಬ ಚಿಂತೆ ರೈತರಲ್ಲಿ ಕಾಡತೊಡಗಿದೆ. ಎರಡು ತಿಂಗಳಿಂದ ನಿರಂತರವಾಗಿ ಈ ಕುರಿತು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಹತ್ತಿ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ದುಡಿಯುವ ರೈತರನ್ನು ಸರ್ಕಾರ ಕಡೆಗಣಿಸಿದ್ದು, ಬೀಜ ಕಂಪನಿಗಳ ರಕ್ಷಣೆಗೆ ಅದು ಹೊರಟಿದೆ ಎಂದು ಆರೋಪಿಸಿದರು.
ನೆಪ ಮಾತ್ರಕ್ಕೆ ಈಗ ರೈತರ ಜಮೀನುಗಳಿಗೆ ತಂಡಗಳನ್ನು ಕಳುಹಿಸಿ ವರದಿ ತರಿಸಿಕೊಳ್ಳುವ ನೆಪದಲ್ಲಿ ಕಾಲಹರಣ ಮಾಡುತ್ತಿದೆ. ಬೆಳೆ ನಷ್ಟವಾದ ರೈತರಿಗೆ ಪರಿಹಾರ ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇಂಥ ಅನ್ಯಾಯದ ವಿರುದ್ಧ ನ.22ರಂದು ಹಿರೇಕೇರೂರಿನಿಂದ ಬ್ಯಾಡಗಿ, ಮೂಟೆಬೆನ್ನೂರು ಮೂಲಕ ಸಾವಿರಾರು ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಹಾವೇರಿಯ ಸಿದ್ದಪ್ಪ ಸರ್ಕಲ್ ಬಳಿ ರಸ್ತೆ ತಡೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ಪರಿಹಾರ ನೀಡಿ: ಕಳಪೆ ಹತ್ತಿ ಬೀಜಗಳಿಂದ ಬೆಳೆ ನಷ್ಟ ಹೊಂದಿದ ರೈತರಿಗೆ ತಕ್ಷಣ ಎಕರೆಗೆ 30 ಸಾವಿರ ಪರಿಹಾರ ಕೊಡಬೇಕು. ಸಮೀಕ್ಷಾ ತಂಡ ವಿವಿಧ ಕಂಪನಿ ಬೀಜ ಕಳಪೆಯಾಗಿರುವ ಬಗ್ಗೆ ದೃಢೀಕರಿಸಬೇಕು. ಪ್ರತಿ ತಾಲೂಕಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಪ್ರತಿ ಕ್ವಿಂಟಲ್ ಹತ್ತಿಗೆ 10 ಸಾವಿರ, ಮೆಕ್ಕೆಜೋಳ 2, ಬತ್ತಕ್ಕೆ 2500, ಕಬ್ಬಿಗೆ ಪ್ರತಿ ಟನ್ಗೆ 3 ಸಾವಿರ. ಬೆಲೆ ನಿಗದಿ ಮಾಡಬೇಕು. ರು. 25 ಸಾವಿರ. ಸಾಲ ಮನ್ನಾ ಮಾಡಿದ ಹಣವನ್ನು ಸಹಕಾರ ಸಂಘಗಳಿಗೆ ಬಿಡುಗಡೆ ಮಾಡಬೇಕು.
ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು. ಮೆಕ್ಕೆಜೋಳ ಖರೀದಿಯನ್ನು 25 ಕ್ವಿಂಟಲ್ಗೆ ಸೀಮಿತಗೊಳಿಸದೇ ರೈತರು ಬೆಳೆದ ಎಲ್ಲಾ ಮೆಕ್ಕೆಜೋಳ ಖರೀದಿಸಬೇಕು ಎಂಬಿತ್ಯಾದಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಮಣ್ಣ ಹೇಳಿದರು.
ಅಲ್ಲದೆ, ಕಳಪೆ ಹತ್ತಿ ಬೀಜದಿಂದ ನಷ್ಟಕ್ಕೆ ಪರಿಹಾರ, ಕಬ್ಬು ಬೆಳೆಗಾರರ ಸಮಸ್ಯೆ, ಕಳಸಾ ಬಂಡೂರಿ ಯೋಜನೆ ಜಾರಿ, ತೆಂಗು, ತಂಬಾಕು, ಅಡಕೆ ಬೆಳೆಗಾರರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಹಾಗೂ ಭೂ ಸರ್ವೇಗೆ ಹೆಚ್ಚಿಸಿರುವ ಶುಲ್ಕವನ್ನು ರದ್ದುಪಡಿಸುವಂತೆ ಒತ್ತಾಯಿಸಿ ನ. 25ರಂದು ವಿಧಾನಸಭೆ ಅಧಿವೇಶನದ ಸಂದರ್ಭ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ವಿ. ಹಿರೇಮಠ, ಹಿರೇಕೇರೂರು ತಾಲೂಕಾಧ್ಯಕ್ಷ ಬಸನಗೌಡ ಗಂಗಪ್ಪನವರ, ಗಂಗಣ್ಣ ಎಲಿ, ಸುರೇಶ ಚಲವಾದಿ, ಚಿಕ್ಕಪ್ಪ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

