ಬಾಲ್ಯವಿವಾಹ ಪದ್ಧತಿ ದೇಶದ ದುರಂತ
ಹಾನಗಲ್ಲ: ಬಾಲ್ಯವಿವಾಹ ನಿಷೇಧದ ಕಾನೂನು ಕಠಿಣವಾಗಿದ್ದರೂ ಅಜ್ಞಾನದಿಂದಾಗಿ ಸಾರ್ವಜನಿಕರು ಸಮಾಜ ವಿರೋಧಿಯಾಗಿ ಬಾಲ್ಯವಿವಾಹಕ್ಕೆ ಅವಕಾಶ ನೀಡುತ್ತಿರುವುದು ಈ ದೇಶದ ದುರಂತವಾಗಿದೆ ಎಂದು ಹಾನಗಲ್ಲ ತಾಲೂಕು ವೈದ್ಯಾಧಿಕಾರಿ ಡಾ. ರಾಜೇಂದ್ರ ಗೊಡ್ಡೆಮ್ಮಿ ಖೇದ ವ್ಯಕ್ತಪಡಿಸಿದರು.
ಹಾನಗಲ್ಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ಬಾಲ್ಯ ವಿವಾಹ ನಿಷೇಧ ಕುರಿತ ವಿಚಾರ ಸಂಕಿರಣ ಹಾಗೂ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ವಿಷಯದಲ್ಲಿ ಸರ್ಕಾರ ಹೆಚ್ಚು ಕಾಳಜಿ ವಹಿಸಿ ಸಮಾಜದಲ್ಲಿ ಮೌಢ್ಯ ತೊಲಗಿಸಲು ಮುಂದಾಗಿದೆ. ವಿವಾಹದ ವಿಷಯದಲ್ಲಿ ಆರೋಗ್ಯಕ್ಕೆ ತೊಂದರೆಯಾಗದಂತೆ ಹಾಗೂ ಸಾಮಾಜಿಕವಾಗಿ ಅನಾನುಕೂಲವಾಗದಂತೆ ವಿವಾಹ ವಯಸ್ಸನ್ನು ಸರ್ಕಾರ ನಿಗದಿ ಮಾಡಿದೆ. ಆದಾಗ್ಯೂ ಬಾಲ್ಯವಿವಾಹ ನಡೆಯುತ್ತಿರುವುದು ದುರಂತದ ಸಂಗತಿ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ, ಬಾಲ್ಯ ವಿವಾಹದಿಂದ ಮಕ್ಕಳ ಓದಿಗೆ ಬ್ರೇಕ್ ಹಾಕಲಾಗುತ್ತದೆ. ಮಕ್ಕಳ ಕನಸನ್ನು ಕೊಲ್ಲಬೇಕಾಗುತ್ತದೆ. ಎಚ್ಚರ ತಪ್ಪಿದರೆ ಬಂಧುಗಳನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅನಕ್ಷರತೆ, ಅಜ್ಞಾನದ ಪರಿಣಾಮವಾಗಿ ಭವಿಷ್ಯ ರೂಪಿಸಬೇಕಾದ ಮಕ್ಕಳ ಬದುಕನ್ನು ಕೊಲ್ಲುವುದು ಬೇಡ. ಇದರಿಂದ ಕೌಟುಂಬಿಕ ಅಭಿವೃದ್ಧಿಗೂ ಹಿನ್ನಡೆ ಖಚಿತ. ಇಂತಹ ಕಷ್ಟಗಳಿಗೆ ಆಹ್ವಾನ ನೀಡುವ ಬದಲು ಬಾಲ್ಯವಿವಾಹಕ್ಕೆ ಧಿಕ್ಕಾರ ಹೇಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಆರ್. ಶೆಟ್ಟರ್, ಮಕ್ಕಳ ಮಾರಾಟದ ದೊಡ್ಡ ಜಾಲಗಳು ದೇಶಾದ್ಯಂತ ಕಾನೂನಿನ ಕಣ್ಣಿಗೆ ಸಿಕ್ಕಿ ಬೀಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಸರ್ಕಾರ ಬೀದಿ ನಾಟಕ, ಹಾಡುಗಳು, ಭಿತ್ತಿಚಿತ್ರಗಳ ಮೂಲಕ ಬಾಲ್ಯ ವಿವಾಹದಂತಹ ಸಮಾಜ ವಿರೋಧಿ ಚಟುವಟಿಕೆ ತಿರಸ್ಕರಿಸುವಂತೆ ಜಾಗೃತಿ ಮೂಡಿಸಿದರೂ ಸಮಾಜ ಜಾಣಕುರುಡು ನೀತಿ ಅನುಸರಿಸುತ್ತರುವುದು ಖೇದದ ಸಂಗತಿ. ಅಂಗನವಾಡಿಗೆ ಬರುವ ಮಕ್ಕಳು ಮಾಂಗಲ್ಯ ಕಟ್ಟಿಕೊಂಡು ಬಂದಿರುವ ಸಂಗತಿಗಳು ಹೃದಯ ವಿದ್ರಾವಕವಾದವುಗಳು ಎಂದರು.
ಇದೇ ಸಂದರ್ಭದಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಭಾಷಣ ಸ್ಪರ್ಧೆಯಲ್ಲಿ ಹಾನಗಲ್ಲಿನ ದಯಾನಂದ ಭಾರತಿ ಪ್ರೌಢಶಾಲೆಯ ಶ್ರೀನಿಧಿ ಬಂಕಾಪುರ (ಪ್ರಥಮ), ರೋಶನಿ ಪ್ರೌಢಶಾಲೆಯ ಮೇಘಾ ಮಠದ (ದ್ವಿತೀಯ), ದಯಾನಂದ ಭಾರತಿ ಪ್ರೌಢಶಾಲೆಯ ಪಿ. ಚಂದನಕುಮಾರ (ತೃತೀಯ) ಸ್ಥಾನ ಗಳಿಸಿದರು. ಸುದೀಪ ತಳಗೇರಿ, ಭರತ ಬಂಗಾರಿ, ದೀಪಾ ಚನ್ನಗೌಡರ, ಶ್ರೀನಿವಾಸ ಗಾಜಿಪುರ, ಪ್ರವೀಣ ವಾಲ್ಮಿಕಿ, ಮಲ್ಲೇಶ ಗೊಲ್ಲರ, ಲಕ್ಷ್ಮೀ ಹಾವೇರಿ, ಅಲ್ಫಿಯಾಜ ಕಮ್ಮಾರ, ಅರುಣ ಮುಚ್ಚಂಡಿ ಬಾಲ್ಯ ವಿವಾಹ ವಿರೋಧಿ ಕಳಕಳಿ ಮಾತುಗಳನ್ನಾಡಿ ಸೈ ಎನಿಸಿಕೊಂಡರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿಯರಾದ ಬಿ. ರಾಜೇಶ್ವರಿ, ಶಿವಲೀಲಾ ಕ್ಯಾಡಿ, ಹಿರೇಮಠ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

