ಸ್ಮಶಾನ, ಕೆರೆ ಅತಿಕ್ರಮ ತೆರವು
ಬ್ಯಾಡಗಿ: ಸ್ಮಶಾನ, ಕೆರೆ, ಹುಲ್ಲುಗಾವಲು ಮುಂತಾದ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿದ್ದರೆ ಕೂಡಲೇ ಸ್ವಇಚ್ಛೆಯಿಂದ ತೆರವುಗೊಳಿಸಬೇಕು. ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಹಸೀಲ್ದಾರ್ ಶಿವಶಂಕರ ನಾಯಕ್ ಎಚ್ಚರಿಸಿದರು.
ಶುಕ್ರವಾರ ತಾಲೂಕಿನ ಬನ್ನಿಹಳ್ಳಿ, ಕಳಗೊಂಡ ಮುಂತಾದ ಗ್ರಾಮಗಳಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಂದಾಯ ಇಲಾಖೆಯ ಆಸ್ತಿಗಳನ್ನು ಮರು ಸ್ವಾಧೀನ ಮಾಡಿಕೊಳ್ಳಲಾಗುತ್ತಿದ್ದು, ಇದಕ್ಕಾಗಿ 4ರಿಂದ 5 ಜೆಸಿಬಿ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಸಾರ್ವಜನಿಕರ ಉಪಯೋಗಕ್ಕೆ ನೀಡಿದ್ದ ಸ್ಮಶಾನ, ಕೆರೆ, ಸರ್ಕಾರಿ ಹುಲ್ಲುಗಾವಲು ಪ್ರದೇಶಗಳನ್ನೇ ಕೆಲವರು ಅತಿಕ್ರಮಿಸಿ, ಕೃಷಿ ಭೂಮಿಯನ್ನಾಗಿ ಮಾಡಿಕೊಂಡಿದ್ದಾರೆ. ತೆರವು ಕಾರ್ಯಕ್ಕೆ ಮುಂದಾದರೆ ಸರ್ಕಾರಕ್ಕೆ ಸವಾಲೆಸೆಯುವ ಮಟ್ಟಿಗೆ ಪ್ರಭಾವ ಬೀರುತ್ತಿದ್ದಾರೆ. ಅತಿಕ್ರಮಣ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಕೆಲವೇ ದಿನಗಳಲ್ಲಿ ತಾಲೂಕಿನ ಎಲ್ಲ ಕಡೆಗೂ ಕಾರ್ಯಾಚರಣೆ ವಿಸ್ತರಿಸಲಾಗುವುದು ಎಂದರು.
ಸರ್ಕಾರಿ ಜಾಗಗಳನ್ನು ಹದ್ದುಬಸ್ತು ಮಾಡಲು ಮೋಜಣಿ ಅಧಿಕಾರಿಗಳನ್ನು ನಿಯೋಜಿಸಿದ್ದು, ಸಾರ್ವಜನಿಕರಿಗೆ ಉತ್ತರಿಸಲು ಸಿದ್ಧರಾಗಿದ್ದೇವೆ. ಬನ್ನಿಹಳ್ಳಿ ಗ್ರಾಮದ ರಿ.ಸ.ನಂ. 100ರಲ್ಲಿ 2 ಎಕರೆ 16 ಗುಂಟೆ ಸ್ಮಶಾನ ಒತ್ತುವರಿ, ರಿಸನಂ. 21ರಲ್ಲಿ 4 ಎಕರೆ ಕೆರೆ ಒತ್ತುವರಿ, ಕಳಗೊಂಡ ಗ್ರಾಮದ ರಿಸನಂ. 101ರಲ್ಲಿ ಬರುವ 3.30 ಎಕರೆ ಪ್ರದೇಶ ಕರೆ ಒತ್ತುವರಿ, ಇಂಗಳಗೊಂದಿ ಗ್ರಾಮದ ರಿಸನಂ. 77ರಲ್ಲಿ ಬರುವ 7.4 ಎಕರೆ ಸರ್ಕಾರಿ ಹುಲ್ಲುಗಾವಲು ಪ್ರದೇಶವನ್ನು ತೆರವುಗೊಳಿಸಿದ್ದೇವೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಘಾಳಪೂಜಿ ಗ್ರಾಮದ ಸರ್ಕಾರಿ ಹುಲ್ಲುಗಾವಲು ಪ್ರದೇಶಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು ನ್ಯಾಯಾಲಯದ ನಿರ್ದೇಶನದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು. ಉಪತಹಸೀಲ್ದಾರ್ಗಳಾದ ಬಿ.ಎಸ್. ಕೊಪ್ಪದ, ಜಿ.ಎನ್. ಶೆಟ್ಟರ, ಕಂದಾಯ ನಿರೀಕ್ಷಕ ಆರ್.ವೈ. ಭೋಗಾರ ಇದ್ದರು. ಕಾಗಿನೆಲೆ ಪಿಎಸ್ಐ ಹಾಗೂ ಸಿಬ್ಬಂದಿ ಸೂಕ್ತ ಭದ್ರತೆ ಒದಗಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

