ಹಾವೇರಿ

ಮಾನ್ಸೆಂಟೋ ಗೋವಿನ ಜೋಳ ತಳಿ ಪ್ರಾತ್ಯಕ್ಷಿಕೆ

Published On :

ಹಿರೇಕೆರೂರು: ಹಿಂಗಾರು ಹಾಗೂ ಮುಂಗಾರು ಬಿತ್ತನೆಗಾಗಿ ಮಾನ್ಸೆಂಟೊ ಕಂಪನಿ ಡಿಕಾಲ್ಬ ಡಿಕೆಸಿ 9133 ಹೊಸ ತಳಿಯ ಗೋವಿನಜೋಳ ಬೀಜಗಳನ್ನು ಬಿಡುಗಡೆ ಮಾಡಿದ್ದು, ಎಕರೆಗೆ 35ರಿಂದ 42 ಕ್ವಿಂಟಲ್ ಇಳುವರಿ ನೀಡಲಿದೆ ಎಂದು ಕಂಪನಿಯ ಹುಬ್ಬಳ್ಳಿ ವಿಭಾಗದ ವ್ಯವಸ್ಥಾಪಕ ಕೆ. ದಾನೇಗೌಡ ತಿಳಿಸಿದರು. ಹಿರೇಬೂದಿಹಾಳ ಗ್ರಾಮದ ರೈತ ಹುಸೇನಸಾಬ ಕನವಳ್ಳಿ ಜಮೀನಿನಲ್ಲಿ ಗೋವಿನ ಜೋಳದ ಕಟಾವು ಕಾರ್ಯಕ್ರಮದಲ್ಲಿ, ತಾಲೂಕಿನಲ್ಲಿ 229 ಕ್ವಿಂಟಲ್ ಬೀಜ ವಿತರಿಸಲಾಗಿತ್ತು ಎಂದರು. ವಿತರಕರಾದ ಸಣ್ಣಗೌಡ ಪಾಟೀಲ್, ಗಂಗಾಧರ ಮಾಗನೂರ, ನಟರಾಜ ಹಿರೇಮಠ, ರೈತರಾದ ಕರಬಸಪ್ಪ ಕೊಲ್ಲಾಪುರ, ಬಾಬುಸಾಬ ಕನವಳ್ಳಿ, ಕರಬಸಪ್ಪ ಹುಚ್ಚಣ್ಣನವರ, ಭೀಮನಗೌಡ ಗೌಡ್ರ, ರಾಜು ಹುಚ್ಚಣ್ಣನವರ, ಮಾರಾಟ ಪ್ರತಿನಿಧಿ ಶಿವನಗೌಡ ಶಿವಪ್ಪಳವರ ಇದ್ದರು.
ಏಳು ಕೆರೆಗಳ ಹಸ್ತಾಂತರ
ಹಾವೇರಿ: ಜಲ ಸಂವರ್ಧನೆ ಯೋಜನೆಯಲ್ಲಿ ಅಭಿವೃದ್ಧಿ ಹೊಂದಿದ ಕೆರೆಗಳನ್ನು ಉಸ್ತುವಾರಿ ನಿರ್ವಹಣೆಗಾಗಿ ಸಮುದಾಯಕ್ಕೆ ಹಸ್ತಾಂತರಿಸಲಾಗುತ್ತಿದೆ. ಕೆರೆಗಳ ರಕ್ಷಣೆ ಸಮುದಾಯದ ಹೊಣೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯ್ಕ ಕರೆ ನೀಡಿದರು. ಜಲ ಸಂವರ್ಧನೆ ಯೋಜನಾ ಸಂಘ ಜಿಲ್ಲಾ ಯೋಜನಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ, ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾದ 7 ಕೆರೆಗಳನ್ನು ಬುಧವಾರ ಹಸ್ತಾಂತರಿಸಿದ ಅವರು, ಕೆರೆ ಅಭಿವೃದ್ಧಿ ಸಂಘದವರು ಕೆರೆಗಳ ನಿರಂತರ ನಿರ್ವಹಣೆ ಮಾಡಬೇಕು ಎಂದರು. ಹಾನಗಲ್ ತಾಲೂಕಿನ ಬೈಚವಳ್ಳಿ-ಮಡಗಟ್ಟೆ, ಬಸವನಹೊಂಡ, ಮಂತಗಿ ಗ್ರಾಮದ ದೊಡ್ಡಕೆರೆ, ಶಿಗ್ಗಾಂವಿ ತಾಲೂಕು ಹುಲಸೋಗಿಯ ಗಂಗೇರಿಕೆರೆ, ಹಿರೇಕೆರೆ, ಸವಣೂರು ತಾಲೂಕು ಹತ್ತಿಮತ್ತೂರ, ಈಚಲಯಲ್ಲಾಪುರ ಕೆರೆಗಳ ಸಂಘದ ಪದಾಧಿಕಾರಿಗಳು ಇದ್ದರು. ಜಿಲ್ಲಾ ಅನುಮೋದನಾ ಸಮಿತಿಯ ಉಪಾಧ್ಯಕ್ಷ, ಜಿಪಂ ಸಿಇಒ ಉಮೇಶ ಕುಸುಗಲ್ ಮಾತನಾಡಿ, ಕೆರೆಯಲ್ಲಿ ಮೀನು ಸಾಕುವುದು, ಇತರೆ ಸಂಪನ್ಮೂಲಗಳ ಕ್ರೋಡೀಕರಣದ ಮೂಲಕ ಸಂಘದ ಆದಾಯ ಹೆಚ್ಚಿಸಿಕೊಂಡು, ಸುಸ್ಥಿರವಾಗಿ ಕೆರೆ ನಿರ್ವಹಣೆ ಮಾಡಲು ಸೂಚಿಸಿದರು. ಜಲ ಸಂವರ್ಧನೆ ಯೋಜನಾ ಸಂಘ ಜಿಲ್ಲಾ ಘಟಕದ ಸಮನ್ವಯಾಧಿಕಾರಿ ಎಂ.ಎಸ್. ಬೆರಟ್ಟೋ ಪ್ರಾಸ್ತಾವಿಕ ಮಾತನಾಡಿ, ಎರಡನೇ ಹಂತದಲ್ಲಿ ಅಭಿವೃದ್ಧಿಪಡಿಸಿದ 190 ಕೆರೆಗಳನ್ನು ಸಮುದಾಯಕ್ಕೆ ಹಸ್ತಾಂತರಿಸಲಾಗಿದ್ದು, 10 ಕೆರೆಗಳ ಹಸ್ತಾಂತರ ಬಾಕಿ ಇದೆ ಎಂದರು. ಜಿಲ್ಲಾ ಯೋಜನಾ ಘಟಕದ ಸ.ಕಾ. ಅಭಿಯಂತ ಪಿ.ಬಿ. ಮುಕ್ಕಣ್ಣನವರ ಇದ್ದರು. ಜಿಲ್ಲಾ ಯೋಜನಾ ಘಟಕದ ಕೃಷ್ಣಾಜಿ ಪವಾರ್ ನಿರೂಪಿಸಿದರು.
ಶಾಲೆ ಬಿಟ್ಟ ಮಕ್ಕಳ ಗಣತಿ: ಪೂರ್ವಭಾವಿ ಸಭೆ
ಶಿಗ್ಗಾಂವಿ: ಶಿಗ್ಗಾಂವಿ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ತಹಸೀಲ್ದಾರ್ ಶಕುಂತಲಾ ಎ. ಚೌಗುಲೆ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ ಸಂಬಂಧ ಬ್ಲಾಕ್ ಸಮನ್ವಯ ಸಮಿತಿ ಸಭೆ ನಡೆಸಲಾಯಿತು. ತಾಪಂ ಇಒ ದೇಗಿನಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಲ್. ಭಜಂತ್ರಿ ಭಾಗವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಸಿ.ಪಿ. ಮೂಲಿಮನಿ ಗಣತಿ ಕಾರ್ಯದ ಸಿದ್ಧತೆ ಬಗ್ಗೆ ವಿವರಿಸಿದರು. ಚೌಗುಲೆ ಮಾತನಾಡಿ, ನ. 6 ಮತ್ತು 7ರಂದು ಶಾಲಾ ಸಮೀಕ್ಷೆ, ಐದು ದಿನಗಳವರೆಗೆ ಕುಟುಂಬ ಸಮೀಕ್ಷೆ ಬಗ್ಗೆ ತಾಲೂಕಿನಲ್ಲಿ ಮುಂಚಿತವಾಗಿ ಡಂಗುರ ಸಾರಬೇಕು. ಪ್ರಚಾರ ಮಾಡಿ ಜನಜಾಗೃತಿ ಮೂಡಿಸಬೇಕು. ಗಣತಿ ಕಾರ್ಯಕ್ಕೆ ಸಹಕರಿಸಬೇಕು ಎಂದು ಸೂಚಿಸಿದರು.
ಗ್ರಾಪಂ ಪಿಡಿಒ ಹಾಗೂ ಇತರ ಸಿಬ್ಬಂದಿಗೆ ಗಣತಿ ಕಾರ್ಯಕ್ಕೆ ಸಹಕರಿಸುವಂತೆ ತಿಳಿಸಲಾಗುವುದು ಎಂದು ಇಒ ಹೇಳಿದರು. ಗಣತಿ ಕಾರ್ಯದ ಉಸ್ತುವಾರಿ ನೋಡಲ್ ಅಧಿಕಾರಿ ವಿ.ಎಸ್. ಮಡ್ಲಿಮಠ ಗಣತಿ ಕಾರ್ಯಕ್ಕೆ ನಿಯೋಜಸಿದ ಶಿಕ್ಷಕರು, ಇಲಾಖೆ ಹಾಗೂ ಎನ್‌ಜಿಒಗಳಿಂದ ನಿಯೋಜಿತ ಗಣತಿದಾರರು, ಎಲ್ಲ ಪ್ರಾಥಮಿಕ-ಪ್ರೌಢ ಶಾಲೆ ಮುಖ್ಯಶಿಕ್ಷಕರು ಹಾಗೂ ಮೇಲ್ವಿಚಾರಕರಿಗೆ ಅ. 31ರಂದು ಪಟ್ಟಣದ ಶ್ರೀ ಎಸ್.ಬಿ. ಮಾಮ್ಲೆದೇಸಾಯಿ ಪದವಿಪೂರ್ವ ಕಾಲೇಜಿನಲ್ಲಿ ತರಬೇತಿ ಆಯೋಜಿಸಿದ್ದು, ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದರು.
ಯೋಜನೆ ಅನುಷ್ಠಾನಕ್ಕೆ ಗಣತಿ ಅವಶ್ಯ: ನಾಯಕ
ಬ್ಯಾಡಗಿ: ಸರ್ಕಾರದ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಆರ್ಥಿಕ ಗಣತಿ ಅವಶ್ಯ ಎಂದು ತಹಸೀಲ್ದಾರ್ ಶಿವಶಂಕರ ನಾಯಕ ಹೇಳಿದರು.
ಸ್ಥಳೀಯ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ಸಭಾಭವನದಲ್ಲಿ ತಾಲೂಕಾಡಳಿತ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ 6ನೇ ಆರ್ಥಿಕ ಗಣತಿ ಅಂಗವಾಗಿ ಗಣತಿದಾರರ ಹಾಗೂ ಮೇಲ್ವಿಚಾರಕರಿಗಾಗಿ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರ್ಥಿಕ ಗಣತಿ ಆಧಾರದ ಮೇಲೆ ದೇಶ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಗಣತಿಯಿಂದ ದೇಶದಲ್ಲಿನ ಉದ್ಯಮಗಳು ಹಾಗೂ ದುಡಿಮೆಗಾರರನ್ನು ಗುರ್ತಿಸಲು ಸಾಧ್ಯವಾಗುತ್ತಿದೆ. ಗಣತಿದಾರರು ಹಾಗೂ ಮೇಲ್ವಿಚಾರಕರು ತಮಗೆ ವಹಿಸಿದ ಕರ್ತವ್ಯ ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ತಾಲೂಕಿನಲ್ಲಿ ಆರ್ಥಿಕ ಗಣತಿಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಜಿ.ಬಿ. ವೀರೇಶಕುಮಾರ, ಶಿರಸ್ತೆದಾರ್ ವಿ.ವಿ. ಹರಿಹರ, ಕುಲಕರ್ಣಿ, ಮುಖ್ಯ ತರಬೇತುದಾರ ಡಿ.ಬಿ. ಕುಸಗೂರ, ವಿ.ವಿ. ಮಾತನವರ ಇದ್ದರು.
ಇಂದು ಗ್ರಾಮಸಭೆ
ಶಿಗ್ಗಾಂವಿ: ತಾಲೂಕಿನ ಕೋಣನಕೇರಿ ಗ್ರಾಮ ಪಂಚಾಯಿತಿ ಗ್ರಾಮಸಭೆ ಅ. 31ರಂದು ಬೆಳಗ್ಗೆ 10.30ಕ್ಕೆ ಶಿವಬಾರದ ಹತ್ತಿರದ ವಿಶ್ವ ಬಿಲ್ಡಿಂಗ್ ಆವರಣದಲ್ಲಿ ಜರುಗಲಿದೆ. ಗ್ರಾಪಂ ಅಧ್ಯಕ್ಷ ಉಮೇಶ ವಗ್ಗನವರ ಅಧ್ಯಕ್ಷತೆ ವಹಿಸುವರು. ಗ್ರಾಪಂ ಸದಸ್ಯರು ಹಾಗೂ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು, ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಿ.ಬಿ. ಕಬ್ಬೂರ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಾಲುಬಾಯಿ ಬೇನೆ: ಪರಿಹಾರಕ್ಕೆ ಸೂಚನೆ
ಹಾವೇರಿ: ಕಾಲು-ಬಾಯಿ ಬೇನೆಯಿಂದ ಜಾನುವಾರು ಮರಣ ಹೊಂದಿದ ಸಂದರ್ಭದಲ್ಲಿ ನಕಲಿ ದಾಖಲೆ ಸೃಷ್ಟಿಸುವುದನ್ನು ತಪ್ಪಿಸಲು ಸರ್ಕಾರದ ಮಾರ್ಗಸೂಚಿಯಂತೆ, ಮಹಜರಿ ವರದಿ, ಮೃತಪಟ್ಟ ಪ್ರಾಣಿಯ ಫೋಟೋ, ಮರಣೋತ್ತರ ವರದಿ, ತಾಲೂಕು ಮಟ್ಟದ ಸಮಿತಿಯ ಶಿಫಾರಸು ಮುಂತಾದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪ್ರಸ್ತಾವನೆಗಳನ್ನು ಸವಿವರವಾಗಿ ಪರಿಶೀಲಿಸಿ ಸಲ್ಲಿಸಲು ಜಿಲ್ಲೆಯ ಎಲ್ಲ ಸಹಾಯಕ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಉಪನಿರ್ದೇಶಕ ಡಾ೤ ಎಸ್.ಜಿ. ಕೋನಪುರ ತಿಳಿಸಿದ್ದಾರೆ. ಅಕ್ಟೋಬರ್ ಮೊದಲ ವಾರದಿಂದ ಹಾವೇರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲು-ಬಾಯಿ ರೋಗ ಕಂಡುಬಂದಿದ್ದು, 85 ಗ್ರಾಮಗಳಲ್ಲಿ ತೀವ್ರವಾಗಿದೆ. ಒಟ್ಟು 671 ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಗುರುತಿಸಲಾಗಿದೆ. ಈ ಪೈಕಿ 60 ಜಾನುವಾರುಗಳು ಮೃತಪಟ್ಟಿವೆ. ಜಿಲ್ಲೆಯಾದ್ಯಂತ ಶೇ. 93ರಷ್ಟು ಜಾನುವಾರುಗಳಿಗೆ ರೋಗ ಪ್ರತಿಬಂಧಕ ಲಸಿಕೆ ಹಾಕಲಾಗಿದೆ. ರೋಗ ತಗುಲಿದ ಜಾನುವಾರುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಇಲಾಖೆಯಲ್ಲಿ 1 ಲಕ್ಷಕ್ಕೂ ಅಧಿಕ ಲಸಿಕೆ ದಾಸ್ತಾನಿದ್ದು, ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕೆಂದು ಅವರು ವಿನಂತಿಸಿದ್ದಾರೆ.
ಇಂದು ಸಂಗೀತ
ಹಾನಗಲ್ಲ: ಹಾನಗಲ್ಲಿನ ಬಿ.ಜಿ. ಕಟ್ಟಿ ವಿಚಾರ ವೇದಿಕೆ ದಿ. ಕಟ್ಟಿಯವರ ಸ್ಮರಣಾರ್ಥ ಎರಡನೇಯ ಪುಣ್ಯಸ್ಮರಣೆ ಅಂಗವಾಗಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದು, ಸಂಗೀತ ಶಿಕ್ಷಕ ನರಸಿಂಹ ಕೋಮಾರ ತಂಡ ಕಾರ್ಯಕ್ರಮ ನೀಡಲಿದೆ. ಅ. 31ರಂದು ಸಂಜೆ 6 ಗಂಟೆಗೆ ವಿಠೋಬ ಮಂದಿರದ ಬಳಿ ಇರುವ ಕಟ್ಟಿ ಅವರ ನಿವಾಸದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕಾಲೇಜು ಆರಂಭಕ್ಕೆ ಅರ್ಜಿ
ಹಾವೇರಿ: 2014-15ನೇ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ಪದವಿಪೂರ್ವ ಕಾಲೇಜುಗಳನ್ನು ಪ್ರಾರಂಭಿಸಲು ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಟ್ರಸ್ಟ್‌ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ರು. 30 ಸಾವಿರ ಅರ್ಜಿ ಶುಲ್ಕದೊಂದಿಗೆ ಅರ್ಜಿ ನಮೂನೆ-1 ಭರ್ತಿ ಮಾಡಿ, ನ. 7ರಿಂದ 16ರ ಅವಧಿಯಲ್ಲಿ, ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು-ಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕವನ್ನು ಲೆಕ್ಕ ಶೀರ್ಷಿಕೆ 0202-01-102-1-06ಗೆ ಖಜಾನೆ ಚಲನ್ ಮೂಲಕ ಜಮಾ ಮಾಡಬೇಕು. ಮಾಹಿತಿಗೆ ವೆಬ್‌ಸೈಟ್ ಡಿಡಿಠ://ಢಿಢಿಢಿ.ಠ್ಡಜ.್ಞಛ್ಠ.ಟ್ಝ್ಛಿ.್ಝಟಿ ಸಂಪರ್ಕಿಸಬಹುದೆಂದು ಪಪೂ ವ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.