ಹಾವೇರಿ

ಬಿಜೆಪಿಯಿಂದ ಸ್ವಾರ್ಥ ಸಾಧನೆ

Published On :

ಶಿಗ್ಗಾಂವಿ:  ರಾಜ್ಯದ ಜನರು ಐದು ವರ್ಷ ಕೊಟ್ಟಿದ್ದ ಅಧಿಕಾರವನ್ನು ತಮ್ಮ ಸ್ವಾರ್ಥ, ಭ್ರಷ್ಟಾಚಾರಕ್ಕಾಗಿ ಉಪಯೋಗಿಸಿಕೊಂಡ ಬಿಜೆಪಿ ಮುಖಂಡರು, ಈ ಚುನಾವಣೆಯಲ್ಲಿ ಹಿಂದುತ್ವವನ್ನು ಪ್ರತಿಪಾದಿಸಿ, ಉದ್ರಿಕ್ತ ಭಾಷಣಗೈದು ಮತ ಕೇಳುತ್ತಿರುವುದು ನಾಚಿಕೆಗೇಡು ಎಂದು ವಿಪ ಸದಸ್ಯ ಕಾಂಗ್ರೆಸ್ ಮುಖಂಡ ಶ್ರೀನಿವಾಸ ಮಾನೆ ಟೀಕಿಸಿದರು.
ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ನಡೆದ ಮರಾಠ ಸಮಾಜದ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾನೆ, ತಮ್ಮ ಸ್ವಾರ್ಥಕ್ಕಾಗಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಹಾಳು ಮಾಡಿದ ಬಿಜೆಪಿ, ಚುನಾಚಣೆ ಬಂದಾಗ ಅಭಿವೃದ್ಧಿ ಸೋಗು ಹಾಕಿಕೊಂಡು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದೆ. ಭ್ರಷ್ಟಾಚಾರ ಮಾಡಿ, ಜೈಲುವಾಸ ಅನುಭವಿಸಿದ ಮುಖಂಡರು ಯಾರು ಎಂಬುದು ಜನತಾ ನ್ಯಾಯಾಲಯದಲ್ಲಿ ಚರ್ಚೆಯಾಗಲಿ ಎಂದು ಮಾನೆ ಎಚ್ಚರಿಸಿದರು.
ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ. ಪ್ರಜ್ಞಾವಂತ ಮತದಾರರು ಇದನ್ನು ತಪ್ಪಿಸಲು ಧಾರವಾಡ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ಮತ ಕೊಡಿ. ನಿಮ್ಮ ಸೇವಕನಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.
ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಕಾಂಗ್ರೆಸ್ ನೂರಾರು ವರ್ಷದ ಇತಿಹಾಸ ಹೊಂದಿದೆ. ಮೋದಿ ಮುಂದಿಟ್ಟುಕೊಂಡು ಮತಯಾಚಿಸುವ ಬಿಜೆಪಿ ಮುಖಂಡರ ಅಧಿಕಾರಕ್ಕೆ ಬರುವ ಕನಸು ನನಸಾಗುವುದಿಲ್ಲ ಎಂದರು. ಮಾಜಿ ಶಾಸಕ ಸೈಯ್ಯದ್ ಅಜ್ಜಂಪೀರ ಖಾದ್ರಿ ಮಾತನಾಡಿ, ಧಾರವಾಡ ಕ್ಷೇತ್ರದಿಂದ ಎರಡು ಬಾರಿ ಲೋಕಸಭೆಗೆ ಚುನಾಯಿತರಾದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ, ಅಭಿವೃದ್ಧಿಯಲ್ಲಿ ಶಿಗ್ಗಾಂವಿ ಕ್ಷೇತ್ರವನ್ನು ಕಡೆಗಣಿಸಿದ್ದಾರೆ ಎಂದು ದೂರಿದರು. ಈ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪರ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೋಜಿ, ಯಲ್ಲಪ್ಪ ಕಿತ್ತೂರ, ಮಾನಪ್ಪ ಕಮ್ಮಾರ, ಬಾಬಾ ತರೀನ, ಎ.ಸಿ. ಜಮಾದಾರ, ಹನುಮಂತಪ್ಪ ಗಣಪ್ಪನವರ.  ಮಹಾದೇವಪ್ಪ ಗಣಪ್ಪನವರ, ಚಂದ್ರು ಕಮ್ಮಾರ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.