ಹಾವೇರಿ

ಜೆಡಿಎಸ್ ಕಾರ್ಯಕರ್ತರ ಹೊಡೆದಾಟ

Published On :

ರೋಣ: ಹಾವೇರಿ ಲೋಕಸಭೆ ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಶುಕ್ರವಾರ ಪಟ್ಟಣದಲ್ಲಿ ಪ್ರಚಾರಕ್ಕೆ ಆಗಮಿಸಿದ ವೇಳೆ ಅದೇ ಪಕ್ಷದ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಸ್ಥಳೀಯ ಮುಖಂಡರಾದ ಉಮೇಶ ಮಲ್ಲಾಪುರ, ನಿಂಗಪ್ಪ ನವಲಗುಂದ, ಮಹಾದೇವಪ್ಪ ನವಲಗುಂದ, ಜಿಲ್ಲಾ ಉಪಾಧ್ಯಕ್ಷ ಸಂಗಮೇಶ ಮಂಗಳೂರು ಇತರರು ಜೆಡಿಎಸ್ ಅಭ್ಯರ್ಥಿ ರವಿ ಮೆಣಸಿನಕಾಯಿ ಅವರ ವಾಹನ ಅಡ್ಡಗಟ್ಟಿ, ನೀವು ಪ್ರಚಾರಕ್ಕೆ ಬರುವ ಕುರಿತು ಸ್ಥಳೀಯ ಮುಖಂಡರಿಗೆ ಏಕೆ ತಿಳಿಸಿಲ್ಲ. ನಿಮಗೆ ಇಲ್ಲಿ ಪ್ರಚಾರ ಮಾಡಲು ಬಿಡಲ್ಲ ಎಂದು ಪಟ್ಟು ಹಿಡಿದು ವಾಹನದ ಮುಂದೆ ಕುಳಿತರು. ಆಗ ಕೆಲ ಮುಖಂಡರು ಸಮಾಧಾನ ಮಾಡಲು ಮುಂದಾದರು. ಸ್ಥಳೀಯ ಮುಖಂಡರು ಇದಕ್ಕೆಲ್ಲ ಜೆಡಿಎಸ್ ರಾಜ್ಯ ಸಂಸದೀಯ ಮಂಡಳಿಯ ಸದಸ್ಯ ಗಜೇಂದ್ರಗಡದ ಡಾ. ವಿಶ್ವನಾಥ ಬ್ರಹ್ಮಣ ಅವರೇ ಹೊಣೆಗಾರರಾಗಿದ್ದಾರೆ ಎಂದು ಆರೋಪಿಸಿದರು.
ಹೊಡೆದಾಡಿದ ಕಾರ್ಯಕರ್ತರು: ಪ್ರಚಾರ ಮಾಡುತ್ತಾ ಪಟ್ಟಣದ ಅಂಬೇಡ್ಕರ್‌ನಗರ ಹತ್ತಿರ ಬರುತ್ತಿದಂತೆ ಮತ್ತೆ ಕೆರಳಿದ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಸಂಗಮೇಶ ಅವರ ಕೆಲ ಬೆಂಬಲಿಗರು ಡಾ. ವಿಶ್ವನಾಥ ಬ್ರಹ್ಮಣ ಅವರನ್ನು ತರಾಟೆಗೆ ತೆಗೆದುಕೊಂಡು ಪರಸ್ಪರ ಅಂಗಿ ಜಗ್ಗಾಟ ನಡೆಸಿ ಹೊಡೆದಾಡಿಕೊಂಡರು. ಇದರಿಂದಾಗಿ ಕಾರ್ಯಕರ್ತರು, ಅಭಿಮಾನಿಗಳು ಕಾಲ್ಕಿತ್ತರು. ಇದನ್ನು ಜೆಡಿಎಸ್ ಅಭ್ಯರ್ಥಿ ನೋಡುತ್ತಾ ನಿಂತಿದ್ದರು.
ಠಾಣೆಗೆ: ಬಡಿದಾಡಿಕೊಂಡ ಜೆಡಿಎಸ್ ಕಾರ್ಯಕರ್ತರ 2 ಗುಂಪು ಠಾಣೆ ಮೆಟ್ಟಿಲೇರಿದರು. ಪರಸ್ಪರ  ದೂರು ಸಲ್ಲಿಸಿದರು. ಕೆಲ ಮುಖಂಡರು ಬುದ್ಧಿ ಹೇಳುವ ಯತ್ನ ನಡೆಸಿದರು. ಸುದ್ದಿಗಾರರು ಪ್ರಶ್ನೆಗೆ ಉತ್ತರಿಸಿ ರಾಜ್ಯ ಸಂಸದೀಯ ಮಂಡಳಿ ಸದಸ್ಯ ಡಾ. ವಿಶ್ವನಾಥ ಬ್ರಹ್ಮಣ, ನಾನು ರೋಣಕ್ಕೆ ಬರುವ ಕುರಿತು ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ ತಿಳಿಸಿದ್ದೇನೆ. ಇದು ಕುತಂತ್ರವಾಗಿದೆ. ತಾಲೂಕು ಅಧ್ಯಕ್ಷ ಎಂ.ಎಂ. ಕುಲಕರ್ಣಿ, ಮಕ್ತುಂ ಸಾಗರ, ಉಮೇಶ ಮಲ್ಲಾಪುರ, ಸುರೇಶ ಕಳಕಣ್ಣವರ ಇತರರು ನನ್ನನ್ನು ಹಣಕ್ಕಾಗಿ ಒತ್ತಾಯಿಸಿದ್ದರು. ಅದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ನನ್ನ ಮೇಲೆ ಹಲ್ಲೆಗೆ ಪ್ರೇರೇಪಿಸಿದ್ದಾರೆ. ಅವರ ಮಾತನ್ನು ಕೇಳಿ ಜಿಲ್ಲಾ ಉಪಾಧ್ಯಕ್ಷ ಸಂಗಮೇಶ ಮಂಗಳೂರು, ಮಗ ಆನಂದ ಮಂಗಳೂರು ಮತ್ತು ಬೆಂಬಲಿಗರೊಂದಿಗೆ ಜಗಳ ತೆಗೆದು ಅಂಗಿ ಹರಿದು ಬಡಿದಿದ್ದಾರೆ ಎಂದರು. ಇದರಲ್ಲಿ ಅಭ್ಯರ್ಥಿ ರವಿ ತಪ್ಪಿಲ್ಲ. ಡಾ. ವಿಶ್ವನಾಥ ಬ್ರಹ್ಮಣ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಈ ಭಾಗದಲ್ಲಿ ಜೆಡಿಎಸ್ ಕಟ್ಟಿದ ನಮ್ಮನ್ನು ತುಳಿಯಲು ಈ ರೀತಿ ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾ ಮತ್ತು ರಾಜ್ಯ ಅಧ್ಯಕ್ಷರ ಗಮನಕ್ಕೆ ತರಲಾಗುವುದು ಎಂದು ಮುಖಂಡರಾದ ಮಹಾದೇವಪ್ಪ ನವಲಗುಂದ, ಉಮೇಶ ಮಲ್ಲಾಪುರ, ನಿಂಗಪ್ಪ ನವಲಗುಂದ, ಜಿಲ್ಲಾ ಉಪಾಧ್ಯಕ್ಷ ಸಂಗಮೇಶ ಮಂಗಳೂರು 'ಕನ್ನಡಪ್ರಭ'ಕ್ಕೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.