ಚುನಾವಣಾ ಕಣದಿಂದ ನರೇಂದ್ರ ಮೋದಿ ದೂರ ಸರಿಯಬೇಕು: ಎಚ್ಕೆ
ಹಾವೇರಿ: ಧರ್ಮಪತ್ನಿ ಹೆಸರನ್ನೇ ಮುಚ್ಚಿಡುವ ಮೂಲಕ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಭಾರತೀಯ ಕೌಟುಂಬಿಕ ಸಂಸ್ಕೃತಿಗೆ ಅಗೌರವ ತೋರಿಸಿದ್ದಾರೆ. ಕಾನೂನಾತ್ಮಕವಾಗಿಯೂ ತಪ್ಪೆಸಗಿರುವ ಮೋದಿ ಚುನಾವಣಾ ರಾಜಕೀಯದಿಂದಲೇ ದೂರ ಸರಿಯಬೇಕು. ಅಲ್ಲದೆ, ಈ ಬಗ್ಗೆ ದೇಶದ ಜನತೆಗೆ ಅವರು ಉತ್ತರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಆಗ್ರಹಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಕುಟುಂಬ ವ್ಯವಸ್ಥೆಗೆ ಎಲ್ಲೆಡೆ ಗೌರವವಿದೆ. ಮರ್ಯಾದಾ ಪುರುಷ ರಾಮನ ಬಗ್ಗೆ, ರಾಮ ಮಂದಿರ ನಿರ್ಮಾಣ ಮಾಡುವ ವಿಷಯ ಇಟ್ಟುಕೊಂಡು ಪ್ರಚಾರ ಮಾಡುತ್ತಿರುವ ಬಿಜೆಪಿಯವರು ಇದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಕುಟುಂಬಸ್ಥರಾಗಿ ಒಂದು ರಾಜ್ಯದ ಉನ್ನತ ಸ್ಥಾನ ಅಲಂಕರಿಸಿರುವ ಮೋದಿ 12 ವರ್ಷಗಳ ಕಾಲ ಜನರಿಗೆ ಸುಳ್ಳು ಹೇಳಿದ್ದಾರೆ. ಇಂಥ ವ್ಯಕ್ತಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಬಿಂಬಿಸಿದೆ. ಆದ್ದರಿಂದ ಮೋದಿ ಈಗ ನೈತಿಕವಾಗಿ ತಪ್ಪೆಸಗಿದ್ದಾರೆ. ಮತ ಕೇಳುವ ನೈತಿಕತೆ ಅವರು ಕಳೆದುಕೊಂಡಿದ್ದು, ಚುನಾವಣಾ ಕಣದಿಂದ ದೂರ ಸರಿಯಬೇಕು. ಏ. 13ರಂದು ರಾಜ್ಯಕ್ಕೆ ಮೋದಿ ಆಗಮಿಸುತ್ತಿದ್ದು, ಆ ಸಂದರ್ಭ ದೇಶದ ಜನತೆಗೆ ತಮ್ಮ ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು: ಬಿಜೆಪಿಯಿಂದ ಪ್ರಜಾಪ್ರಭುತ್ವದ ಸ್ವರೂಪವನ್ನೇ ಬುಡಮೇಲು ಮಾಡುವ ಯತ್ನ ನಡೆಯುತ್ತಿದೆ. ಅಮೆರಿಕ ಮಾದರಿಯಲ್ಲಿ ಬಿಜೆಪಿಯವರು ಏಕ ವ್ಯಕ್ತಿಯನ್ನು ಬಿಂಬಿಸಿ ಮತ ಕೇಳುತ್ತಿದೆ. ಇದು ಪ್ರಜಾಪ್ರಭುತ್ವ, ಸಂಸದೀಯ ಪದ್ಧತಿಗೆ ಅಗೌರವ ತೋರಿದಂತೆ. ಇದೇ ಬಿಜೆಪಿಯವರ ರಾಜಕೀಯದ ಮೂಲ ಉದ್ದೇಶವಾಗಿದ್ದರೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬದಲಿಸುತ್ತೇವೆ ಎಂದು ಹೇಳಬೇಕಿತ್ತು. ಬಿಜೆಪಿಯವರು ಅಮೆರಿಕ ಪದ್ಧತಿಯಲ್ಲಿ ಪ್ರಚಾರ ನಡೆಸುತ್ತಿದ್ದು, ಈ ಕುರಿತು ಬಿಜೆಪಿ ತನ್ನ ನಿಲುವನ್ನು ಜನತೆಗೆ ತಿಳಿಸಬೇಕು. ವಿದೇಶಿ ಪ್ರಚಾರ ವ್ಯವಸ್ಥೆ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಬಿಜೆಪಿಯಿಂದ ಆಗುತ್ತಿದೆ. ಆದರೆ, ಜನ ಜಾಗೃತರಾಗಿದ್ದಾರೆ ಎಂದರು. ಪ್ರಮುಖರಾದ ಕೊಟ್ರೇಶಪ್ಪ ಬಸೇಗಣ್ಣಿ, ಡಿ. ಬಸವರಾಜ, ಎಸ್.ಎಫ್.ಎನ್. ಗಾಜಿಗೌಡ್ರ, ಸಂಜೀವಕುಮಾರ ನೀರಲಗಿ, ಸತೀಶ್ ದೇಶಪಾಂಡೆ, ರಮೇಶ ಕಡಕೋಳ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

