ಮೋದಿ ಕೋಮುವಾದಿ ಮುಖವಾಣಿ
ಕನ್ನಡಪ್ರಭ ವಾರ್ತೆ, ಹಾವೇರಿ, ಏ. 15
ನರೇಂದ್ರ ಮೋದಿ ಕೋಮುವಾದಿ ಪಕ್ಷದ ಮುಖವಾಣಿಯಾಗಿದ್ದಾರೆ. ಜನ ಅವರನ್ನು ಪ್ರಧಾನಿ ಎಂದು ಒಪ್ಪಿಕೊಳ್ಳಲು ತಯಾರಿಲ್ಲದ್ದರಿಂದ ಅವರು ಪ್ರಧಾನಿಯಾಗಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಹಾವೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ಗುಜರಾತ್ ಅಭಿವೃದ್ಧಿ ಕುರಿತು ಇದುವರೆಗೆ ಅವರು ಹೇಳಿದ್ದೆಲ್ಲ ಸುಳ್ಳು. ಮೊನ್ನೆವರೆಗೆ ಬ್ರಹ್ಮಚಾರಿ ಎಂದು ಹೇಳಿಕೊಳ್ಳುತ್ತಿದ್ದ ಮೋದಿ, ಈಗ ಮದುವೆಯಾಗಿರುವುದಾಗಿ ಹೇಳುವ ಮೂಲಕ ತಾನು ಸುಳ್ಳು ಹೇಳಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಗಂಭೀರ ಅಪರಾಧವನ್ನೂ ಮಾಡಿದ್ದಾರೆ. ಆದ್ದರಿಂದ ಅವರಿಗೆ ಪ್ರಧಾನಿಯಾಗುವ ಅರ್ಹತೆಯೇ ಇಲ್ಲ ಎಂದು ಹೇಳಿದರು.
ಮೋದಿಯದು ಕೃತಕ ಗಾಳಿ: ರಾಜ್ಯದಲ್ಲಿ ಮೋದಿ ಅಲೆ ಇದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ 28 ಕ್ಷೇತ್ರಗಳಲ್ಲಿ ಎಲ್ಲಿಯೂ ಮೋದಿ ಅಲೆ ಅಥವಾ ಪ್ರಭಾವ ಇಲ್ಲ. ಇದೆಲ್ಲ ಕೃತಕ ಗಾಳಿಯಷ್ಟೇ. ಮೋದಿ ವೈಭವೀಕರಿಸುವ ಪ್ರಯತ್ನ ಬಿಜೆಪಿಯಿಂದ ನಡೆಯುತ್ತಿದೆ. 12 ವರ್ಷ ಗುಜರಾತ್ ಸಿಎಂ ಆಗಿದ್ದರೂ ಅಲ್ಲಿಯೇ ಅಭಿವೃದ್ಧಿ ಮಾಡಲು ಸಾಧ್ಯವಾಗದ ವ್ಯಕ್ತಿಯಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಅಭಿವೃದ್ಧಿಯಾಗಿದ್ದರೆ ಶಿಶು ಮರಣದಲ್ಲಿ ಗುಜರಾತ್ ನಂ. 1 ಆಗುತ್ತಿರಲಿಲ್ಲ. ಕೈಗಾರಿಕಾ ಬೆಳವಣಿಗೆಯಲ್ಲೂ ಗುಜರಾತಿಗಿಂತ ಕರ್ನಾಟಕ ಮುಂದಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣವೂ ಗುಜರಾತ್ನಲ್ಲಿ ಹೆಚ್ಚಿದೆ. ಗುಜರಾತ್ ಮಾದರಿ ಅಭಿವೃದ್ಧಿ ಎಂದರೆ ಇದೇನಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮುಂದಿನ 4 ವರ್ಷ ನಾನೇ ಸಿಎಂ: ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್ ಹೇಳಿದ್ದಾರೆ. ಅವರು ತಮ್ಮ ಕ್ಷೇತ್ರದಲ್ಲಿ ಸೋಲುವುದು ನಿಶ್ಚಿತ. ಮುಂದಿನ 4 ವರ್ಷಗಳ ಕಾಲ ನಾನೇ ಸಿಎಂ ಎಂದು ಅನಂತಕುಮಾರ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು. ಶಿವಕುಮಾರ ಉದಾಸಿ ಅವರಿಗೆ ಮತ ಕೇಳುವ ನೈತಿಕತೆಯೇ ಇಲ್ಲ. ಅದಕ್ಕಾಗಿಯೇ ಮೋದಿಗೆ ಮತ ಕೊಡಿ ಎಂದು ಹೇಳುತ್ತಿದ್ದಾರೆ. ಹಾಗಾದರೆ ಕಳೆದ 5 ವರ್ಷದಲ್ಲಿ ಏನು ಮಾಡಿದ್ದೀರಿ? ಭ್ರಷ್ಟಾಚಾರದಿಂದ ಪಡೆದ ಪಾಪದ ಹಣವನ್ನು ಚುನಾವಣೆಯಲ್ಲಿ ಖರ್ಚು ಮಾಡುತ್ತಿದ್ದಾರೆ. ಕಳೆದ ಬಾರಿ ಸಲೀಂ ಅಹ್ಮದ್ ಸೋತಿದ್ದರು. ಆಗ ಕ್ಷೇತ್ರದಲ್ಲಿ ಸನ್ನಿವೇಶ ಬೇರೆಯಿತ್ತು. ಆದರೆ ಈಗ ಏಳು ಕಾಂಗ್ರೆಸ್ ಶಾಸಕರಿದ್ದಾರೆ. ಆದ್ದರಿಂದ ಸಲೀಂ ಗೆಲುವು ನಿಶ್ಚಿತ ಎಂದರು. ಅಭ್ಯರ್ಥಿ ಸಲೀಂ ಅಹ್ಮದ್, ಸಚಿವ ಎಚ್.ಕೆ. ಪಾಟೀಲ, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಶಾಸಕರಾದ ರುದ್ರಪ್ಪ ಲಮಾಣಿ, ಮನೋಹರ ತಹಶೀಲ್ದಾರ, ಕೆ.ಬಿ. ಕೋಳಿವಾಡ, ಬಸವರಾಜ ಶಿವಣ್ಣನವರ, ಮಾಜಿ ಸಂಸದ ಐ.ಜಿ. ಸನದಿ, ನಟಿ ಭಾವನಾ, ಬಿ.ಸಿ. ಪಾಟೀಲ, ಡಿ.ಎಚ್. ಬನ್ನಿಕೋಡ ಇತರರು ಇದ್ದರು.
ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇವೆ: ಇಬ್ರಾಹಿಂ
ಹಾವೇರಿ: ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದೆ. ಅದಕ್ಕಾಗಿ ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಕೇಳಲು ಬಂದಿದ್ದೇವೆ. ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿ ಕಾರ್ಯ ಮುಂದುವರಿಸಲು ಸಹಕರಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು.
ಇಲ್ಲಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಸಲೀಂ ಅಹ್ಮದ್ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿಯವರು ಗುಜರಾತ್ ಮಾದರಿ ಅಭಿವೃದ್ಧಿ ಎಂದು ಹೇಳುತ್ತಾರೆ. ಅಭಿವೃದ್ಧಿಯಾಗಿದ್ದರೆ ಅಲ್ಲಿಯ ಜನ ಇಲ್ಲಿ ಪಾನಿಪುರಿ, ಐಸ್ ಕ್ರೀಂ ಮಾರುತ್ತಿರಲಿಲ್ಲ. ಅಲ್ಲಿ ಉದ್ಯೋಗ ಇಲ್ಲದ್ದರಿಂದ ಗುಜರಾತಿಗಳು ಇಲ್ಲಿಗೆ ಬಂದಿದ್ದಾರೆ. ಆದರೆ, ನಮ್ಮವರು ಯಾರೂ ಗುಜರಾತಿಗೆ ಕೆಲಸಕ್ಕೆ ಹೋಗಿಲ್ಲ. ಸರ್ಕಾರ ಹೇಗೆ ನಡೆಸಬೇಕು ಎಂಬುದನ್ನು ಸಿದ್ದರಾಮಯ್ಯನವರಿಂದ ಕಲಿಯಬೇಕು.
15 ದಿನ ರಜೆ ಹಾಕಿ ಮೋದಿ ಇಲ್ಲಿಗೆ ಬಂದು ಸಿದ್ದರಾಮಯ್ಯನವರಿಂದ ಆಡಳಿತ ಕಲಿಯಲಿ. ಮೋದಿ ಅವರು ಸಿದ್ದರಾಮಯ್ಯನವರನ್ನು ಹಗುರವಾಗಿ ಪರಿಗಣಿಸಿದಂತಿದೆ. ಟಗರು ಹೇಗೆ ಗುದ್ದುತ್ತದೆ ಎಂಬುದನ್ನು ಬಳ್ಳಾರಿ ರೆಡ್ಡಿಗಳು, ಯಡಿಯೂರಪ್ಪ ಅವರನ್ನು ಕೇಳಿ ತಿಳಿದುಕೊಳ್ಳಲಿ ಎಂದು ವ್ಯಂಗ್ಯವಾಡಿದರು. ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ದೇಶದ ಸಂಸ್ಕೃತಿಯನ್ನು ಅಗೌರವಿಸಿದ ಮೋದಿ ಅವರಿಗೆ ಪ್ರಧಾನಿಯಾಗುವ ಅರ್ಹತೆಯಿಲ್ಲ.
ಮೋದಿ ಮಹಾನ್ ಸುಳ್ಳುಗಾರ ಎಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ಸಾಧನೆ ಮಾಡಿ ಕಾಂಗ್ರೆಸ್ ಜನರಲ್ಲಿ ಮತ ಕೇಳುತ್ತದೆ. ಆದರೆ, ಬಿಜೆಪಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದರು.
ಅಭ್ಯರ್ಥಿ ಸಲೀಂ ಅಹ್ಮದ್, ಶಾಸಕ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಬಿ.ಸಿ. ಪಾಟೀಲ ಮಾತನಾಡಿದರು. ಶಾಸಕ ಮನೋಹರ ತಹಸೀಲ್ದಾರ್ ಸ್ವಾಗತಿಸಿದರು. ಸಿ.ಎ. ಇಬ್ರಾಹಿಂ, ಶಾಸಕ ಕೆ.ಬಿ. ಕೋಳಿವಾಡ, ಮಾಜಿ ಸಂಸದ ಐ.ಜಿ. ಸನದಿ, ನಟಿ ಭಾವನಾ, ಡಿ.ಎಚ್. ಬನ್ನಿಕೋಡ, ಎಸ್.ಎನ್. ಪಾಟೀಲ ಸೇರಿದಂತೆ ಅನೇಕ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

