ಹಾವೇರಿ

ವ್ಯವಸ್ಥಿತ ಮಸ್ಟರಿಂಗ್: ಮತಗಟ್ಟೆಗೆ ತೆರಳಿದ ಸಿಬ್ಬಂದಿ

Published On :

ಹಾವೇರಿ: ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ವ್ಯವಸ್ಥಿತವಾಗಿ ಮಸ್ಟರಿಂಗ್ ಕಾರ್ಯ ನಡೆದಿದ್ದು, ಮತಯಂತ್ರ ಹಾಗೂ ಚುನಾವಣಾ ಸಾಮಗ್ರಿಗಳೊಂದಿಗೆ ನಿಯೋಜನೆಗೊಂಡ ಸಿಬ್ಬಂದಿ ಮತಗಟ್ಟೆಗೆ ತೆರಳಿದರು.
ಕ್ಷೇತ್ರ ವ್ಯಾಪ್ತಿಯ ಹಾವೇರಿಯ ಜಿ.ಎಚ್. ಕಾಲೇಜು, ಬ್ಯಾಡಗಿಯ ಬಿಎಸ್ ಹೈಸ್ಕೂಲ್, ಹಿರೇಕೆರೂರಿನ ತಂಬಾಕದ ಪಿಯು ಕಾಲೇಜು, ರಾಣಿಬೆನ್ನೂರಿನ ರಾಜರಾಜೇಶ್ವರಿ ಪಿಯು ಕಾಲೇಜು, ಹಾನಗಲ್ಲದ ಎನ್‌ಸಿಜೆಸಿ ಕಾಲೇಜು, ಗದಗದ ಜಗದ್ಗುರು ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು, ರೋಣದ ಸರ್ಕಾರಿ ಪಿಯು ಕಾಲೇಜು ಹಾಗೂ ಶಿರಹಟ್ಟಿಯ ಎಫ್.ಎಂ. ದಬಾಲಿ ಪಿಯು ಕಾಲೇಜಿನಲ್ಲಿ ಬುಧವಾರ ಮಸ್ಟರಿಂಗ್ ಪ್ರಕ್ರಿಯೆ ನಡೆಯಿತು. ಆಯಾ ಮತಗಟ್ಟೆಗೆ ನಿಯೋಜಿತರಾಗಿರುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಸ್ಟರಿಂಗ್ ಕೇಂದ್ರದಲ್ಲಿ ಬ್ಯಾಲೆಟ್ ಯೂನಿಟ್, ಕಂಟ್ರೋಲ್ ಯೂನಿಟ್, ಮತದಾರರ ಪಟ್ಟಿ, ಶಾಯಿ ಸೇರಿದಂತೆ ಮತದಾನ ಕಾರ್ಯಕ್ಕೆ ಒದಗಿಸಲಾದ ಸಾಮಗ್ರಿ ಪಡೆದರು. ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾದ ಪ್ರಕ್ರಿಯೆ ಮಧ್ಯಾಹ್ನದವರೆಗೂ ನಡೆಯಿತು. ವಿವಿಧ ಮಾರ್ಗಗಳಿಗೆ ತೆರಳುವ ವಾಹನದಲ್ಲಿ ಮತಗಟ್ಟೆ ಸಿಬ್ಬಂದಿ ಸಂಜೆ ವೇಳೆಗೆ ತಲುಪಿ ವರದಿ ಮಾಡಿಕೊಂಡಿದ್ದಾರೆ. ಹಾವೇರಿಯ ಜಿಎಚ್ ಕಾಲೇಜಿನ ಮಸ್ಟರಿಂಗ್ ಕೇಂದ್ರದಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಅಗತ್ಯ ಚುನಾವಣಾ ಸಾಮಗ್ರಿಗಳೊಂದಿಗೆ ತಮ್ಮ ಮತಗಟ್ಟೆಗಳಿಗೆ ತೆರಳಿದರು.
1876 ಮತಗಟ್ಟೆ: ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ 238, ಗದಗ ಕ್ಷೇತ್ರದಲ್ಲಿ 205, ರೋಣ ಕ್ಷೇತ್ರದಲ್ಲಿ 258, ಹಾನಗಲ್ಲ ಕ್ಷೇತ್ರದಲ್ಲಿ 228, ಹಾವೇರಿ ಕ್ಷೇತ್ರದಲ್ಲಿ 252, ಬ್ಯಾಡಗಿ ಕ್ಷೇತ್ರದಲ್ಲಿ 230, ಹಿರೇಕೆರೂರು ಕ್ಷೇತ್ರದಲ್ಲಿ 219 ಹಾಗೂ ರಾಣಿಬೆನ್ನೂರು ಕ್ಷೇತ್ರದಲ್ಲಿ 246 ಸೇರಿ ಒಟ್ಟು 1876 ಮತಗಟ್ಟೆ ಸ್ಥಾಪಿಸಲಾಗಿದೆ. ಮತಗಟ್ಟೆ ಸಿಬ್ಬಂದಿಗೆ 201 ಹಾಗೂ ಇವಿಎಂ ಸಾಗಾಣಿಕೆಗೆ 11 ಸೇರಿ ಒಟ್ಟು 212 ಸಾರಿಗೆ ಸಂಸ್ಥೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸೆಕ್ಟರ್ ಅಧಿಕಾರಿಗಳಿಗೆ 143, ಎಂಸಿಸಿ ತಂಡದವರಿಗೆ 21,  ಫ್ಲಾಯಿಂಗ್ ಸ್ಕ್ವಾಡ್ ತಂಡದವರಿಗೆ 17 ಹಾಗೂ ಪೊಲೀಸ್ ಬಂದೋಬಸ್ತ್‌ಗಾಗಿ 195 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ 8 ವಿಧಾನಸಭಾ ಕ್ಷೇತ್ರಗಳ ಮತದಾನದ ನಂತರ, ಮತಯಂತ್ರಗಳನ್ನು ಆಯಾ ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನಗಳಲ್ಲಿ ನಿಗದಿಪಡಿಸಿದ ಡಿ-ಮಸ್ಟರಿಂಗ್ ಕೇಂದ್ರಗಳಲ್ಲಿ ಪಡೆದು, ಸೂಕ್ತ ಬಂದೋಬಸ್ತ್‌ನೊಂದಿಗೆ ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಿಗದಿಪಡಿಸಿದ ಸ್ಟ್ರಾಂಗ್ ರೂಮ್‌ಗೆ ಸಾಗಿಸಲಾಗುತ್ತದೆ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತಯಂತ್ರಗಳನ್ನು ಇಟ್ಟು, ಸ್ಟ್ರಾಂಗ್ ರೂಂಗೆ ಶೀಲ್ ಮಾಡಲಾಗುತ್ತದೆ. ಮತ ಎಣಿಕೆ ದಿನಾಂಕದವರೆಗೆ ಸ್ಟ್ರಾಂಗ್ ರೂಮ್ ಕಟ್ಟಡವನ್ನು 24 ಗಂಟೆಗಳ ಕಾಲ ಸೂಕ್ತ ಭದ್ರತೆಯಲ್ಲಿ ಇಡಲು ಸೂಕ್ತ ಏರ್ಪಾಡು ಮಾಡಲಾಗಿದೆ. ಮತದಾನವು ಮುಕ್ತ ಹಾಗೂ ಶಾಂತಿಯುತವಾಗಿ ಜರುಗಿಸಬೇಕಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ವಿವಿಧ ಪ್ರಕರಣಗಳಲಿ ಗುರುತಿಸಲ್ಪಟ್ಟ ವ್ಯಕ್ತಿಗಳಲ್ಲಿ 20 ಜನರ ಮೇಲೆ ಪ್ರಕರಣ ದಾಖಲಿಸಿ ಮುಂಜಾಗ್ರತಾ ಕ್ರಮ ಕೈಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಇಲ್ಲಿವರೆಗೆ 496 ಆಯುಧಗಳನ್ನು ಡಿಪಾಜಿಟ್ ಮಾಡಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.