ಹಾವೇರಿ

ಹಾವೇರಿ ಕ್ಷೇತ್ರ: ಶೇ. 68 ಮತದಾನ

Published On :

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಜರುಗಿದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದ್ದು, ಸುಮಾರು ಶೇ. 68ರಷ್ಟು ಮತದಾನವಾಗಿದೆ.
ಹಾವೇರಿ ಹಾಗೂ ಗದಗ ಜಿಲ್ಲೆಯನ್ನು ಒಳಗೊಂಡ ಹಾವೇರಿ ಲೋಕಸಭಾ ಕ್ಷೇತ್ರದ ಒಟ್ಟು 1876 ಮತಗಟ್ಟೆಗಳಲ್ಲಿ ಗುರುವಾರ ಸಣ್ಣಪುಟ್ಟ ತಾಂತ್ರಿಕ ತೊಂದರೆ ಹೊರತುಪಡಿಸಿದರೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು. ಬೆಳಗ್ಗೆ 7 ಗಂಟೆಗೆ ಎಲ್ಲ
ಮತಗಟ್ಟೆಗಳಲ್ಲಿ ಮತದಾನ ಆರಂಭವಾಯಿತು. ಬ್ಯಾಡಗಿ, ರಾಣಿಬೆನ್ನೂರು ಸೇರಿದಂತೆ ನಾಲ್ಕಾರು ಮತಗಟ್ಟೆಗಳಲ್ಲಿ ಮತಯಂತ್ರದಲ್ಲಿನ ತಾಂತ್ರಿಕ ದೋಷದಿಂದ ಮತದಾನಕ್ಕೆ 10 ನಿಮಿಷಗಳಷ್ಟು ವಿಳಂಬವಾಯಿತು. ನಂತರ ನಿರಾತಂಕವಾಗಿ ಸಾಗಿದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆವರೆಗೂ ಅಡಚಣೆ ಇಲ್ಲದೇ ನಡೆಯಿತು.
ಆರಂಭದಲ್ಲಿ ನೀರಸ: ಬೆಳಗ್ಗೆ ಮತದಾನ ಪ್ರಕ್ರಿಯೆ ನೀರಸವಾಗಿತ್ತು. ಕೆಲ ಯುವ ಮತದಾರರು ಬೆಳಗ್ಗೆಯೇ ಉತ್ಸಾಹದಿಂದ ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು. 9 ಗಂಟೆವರೆಗೂ ಮತಗಟ್ಟೆಗೆ ಹೆಚ್ಚಿನ ಜನರು ಬರಲಿಲ್ಲ. ನಂತರ ಬಿಸಿಲು ಏರುತ್ತಿದ್ದಂತೆ ಮತದಾನ ಪ್ರಮಾಣವೂ ಏರತೊಡಗಿತು. ಬೆಳಗ್ಗೆ  9 ಗಂಟೆ ವೇಳೆಗೆ ಶೇ.5.6ರಷ್ಟು ಮತದಾನವಾಯಿತು. 11 ಗಂಟೆ ವೇಳೆಗೆ ಶೇ.16.31 ರಷ್ಟು ಮತದಾನವಾಯಿತು. 1 ಗಂಟೆ ವೇಳೆಗೆ ಈ ಪ್ರಮಾಣ ಶೇ. 33.3 ರಷ್ಟು ಆಗಿತ್ತು. ಮಧ್ಯಾಹ್ನ 1 ಗಂಟೆಯಿಂದ 4 ಗಂಟೆವರೆಗೂ ಮತ್ತೆ ಮತದಾರರು ಮತಗಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರಲಿಲ್ಲ. 4 ಗಂಟೆ ವೇಳೆಗೆ ಶೇ. 49ರಷ್ಟಾಗಿತ್ತು. ನಂತರ ತುರುಸಿನಿಂದ ಮತದಾನ ನಡೆದು 5 ಗಂಟೆ ವೇಳೆಗೆ ಶೇ. 61.26ರಷ್ಟು ಮತದಾನವಾಯಿತು. ಅಂತಿಮವಾಗಿ ಸುಮಾರು ಶೇ.68 ರಷ್ಟು ಮತದಾನವಾಗಿ, ದಾಖಲೆ ಪ್ರಮಾಣದಲ್ಲಿ ಮತದಾನವಾಯಿತು. ಶೇಕಡಾವಾರು ಪ್ರಮಾಣದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾಗುವ ಸಾಧ್ಯತೆಯಿದೆ. ಗುರುವಾರ ರಾತ್ರಿವರೆಗೂ ಮತಗಟ್ಟೆಗಳಿಂದ ಮತದಾನದ ನಿಖರ ಮಾಹಿತಿ ಪಡೆಯುವ ಕಾರ್ಯ ನಡೆದಿದೆ.
ಡಿಮಸ್ಟರಿಂಗ್: ಹಾವೇರಿ ಜಿಲ್ಲೆಯ 5 ಹಾಗೂ ಗದಗ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ ಸಂಜೆ 6 ಗಂಟೆಗೆ ಮತದಾನ ಮುಗಿದ ಬಳಿಕ ಆಯಾ ತಾಲೂಕು ಕೇಂದ್ರಕ್ಕೆ ಮತಯಂತ್ರಗಳನ್ನು ಪೊಲೀಸ್ ಭದ್ರತೆಯಲ್ಲಿ ಸಾಗಿಸಲಾಯಿತು. ಡಿಮಸ್ಟರಿಂಗ್ ಕಾರ್ಯ ರಾತ್ರಿವರೆಗೂ ನಡೆಯಿತು. ನಂತರ ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಎಲ್ಲ ಮತಯಂತ್ರಗಳನ್ನು ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸ್ಟ್ರಾಂಗ್ ರೂಮ್‌ನಲ್ಲಿ ಅಭ್ಯರ್ಥಿಗಳ ಸಮ್ಮುಖದಲ್ಲಿ ಇಟ್ಟು, ಶೀಲ್ ಮಾಡಲಾಯಿತು.
ಸ್ವೀಪ್ ಜಾಗೃತಿ ಪರಿಣಾಮ: ಈ ಬಾರಿ ಮತದಾನ ಜಾಗೃತಿಗಾಗಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಮತದಾನ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2009ರ ಚುನಾವಣೆಯಲ್ಲಿ ಶೇ. 63.59ರಷ್ಟು ಮತದಾನವಾಗಿತ್ತು. ಈ ಬಾರಿ ಸ್ವೀಪ್ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗಿತ್ತು. ಜಾಥಾ, ರಂಗೋಲಿ ಸ್ಪರ್ಧೆ, ಬೀದಿ ನಾಟಕ, ಮಾನವ ಸರಪಳಿ ಮೂಲಕ ಎಲ್ಲ ಗ್ರಾಮಗಳಲ್ಲಿ ಜಾಗೃತಿ   ಮೂಡಿಸಲಾಗಿತ್ತು. ಇದರ ಪರಿಣಾಮವಾಗಿ ಜನರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದರಿಂದ ಶೇಕಡಾವಾರು ಮತದಾನದಲ್ಲೂ ಏರಿಕೆ ಕಂಡಿದೆ.
ಬಿಗಿ ಪೊಲೀಸ್ ಭದ್ರತೆ: ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ಮತಗಟ್ಟೆಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಿದ್ದರಿಂದ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.