ನರಕವಾಗುತ್ತಿದೆ ಹಾವೇರಿ ನಗರ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 9
ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂಬ ವಿಶೇಷತೆಗೆ ಪಾತ್ರವಾಗಿರುವ ಹಾವೇರಿ ಈಗ ಕೊಳಚೆ ಹಾಗೂ ತುಂಬಿ ತುಳುಕುತ್ತಿರುವ ಕಸದ ತೊಟ್ಟಿಯಾಗಿ ಪರಿವರ್ತನೆಯಾಗಿದೆ.
ಕಸದಿಂದ ಹೆಬ್ಬಾಗಿಲು ಕಾಣದ ಪರಿಸ್ಥಿತಿ ಬಂದಿದ್ದು, ಜಿಲ್ಲಾ ಕೇಂದ್ರವೀಗ ನರಕ ಸದೃಶ್ಯವಾಗುತ್ತಿದೆ. ಇಲ್ಲಿ ನಗರಸಭೆ ಇದ್ದೂ ಇಲ್ಲದಂತಾಗಿದೆ.
ಹಾವೇರಿ ನಗರದಲ್ಲಿ ಒಮ್ಮೆ ಸುತ್ತು ಹಾಕಿದರೆ, ಈ ಮಾತು ಅಕ್ಷರಶಃ ಸತ್ಯ ಎಂಬುದು ಸಾಬೀತಾಗುತ್ತದೆ. ತುಂಬಿ ತುಳುಕುತ್ತಿರುವ ಕಸದ ತೊಟ್ಟಿಗಳು, ಚರಂಡಿ ತುಂಬಿ ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆಯಿಂದಾಗಿ ಹಾವೇರಿ ಹದಗೆಟ್ಟಿದೆ. ಕೊಳಚೆ, ರಾಶಿ ರಾಶಿಯಾಗಿ ಕಸ ಬಿದ್ದಿದ್ದರೂ ಅದನ್ನು ತೆಗೆಯುವ ಗೋಜಿಗೆ ನಗರಸಭೆ ಮುಂದಾಗುತ್ತಿಲ್ಲ. ಇದರ ವಿರುದ್ಧ ಧ್ವನಿ ಎತ್ತದೇ ಇದೆಲ್ಲ ಮಾಮೂಲು ಎನ್ನುವ ರೀತಿಯಲ್ಲಿ ಇಲ್ಲಿನ ಜನಪ್ರತಿನಿಧಿಗಳು, ಜನರು ಮೂಗು ಮುಚ್ಚಿಕೊಂಡೇ ಸಾಗುತ್ತಿದ್ದಾರೆ. ಅಧಿಕಾರಿಗಳು ಈ ಪರಿಸ್ಥಿತಿಗೆ ಎಷ್ಟು ಒಗ್ಗಿದ್ದಾರೆ ಎಂದರೆ ಯಾರು ಹೇಳಿದರೂ ಅವರಿಗೆ ಚಿಂತೆಯೇ ಇಲ್ಲ. ಸ್ವತಃ ಶಾಸಕರೇ ಹೇಳಿದರೂ ಕ್ಯಾರೇ ಎನ್ನುತ್ತಿಲ್ಲ.
ತುಂಬಿರುವ ಚರಂಡಿ: ನಗರದ ಯಾವುದೇ ವಾರ್ಡ್‌ಗೆ ಭೇಟಿ ನೀಡಿದರೂ ಅಲ್ಲಿ ಕಸದ ರಾಶಿ, ಹಂದಿಗಳು ಸ್ವಾಗತಿಸಲು ಸಿದ್ಧವಾಗಿರುತ್ತವೆ. ಚರಂಡಿ ತುಂಬಿ ರಸ್ತೆ ಮೇಲೆ ಕೊಳಚೆ ಹರಿಯುತ್ತಿರುತ್ತದೆ. ಈ ಕೊಳಚೆಯನ್ನು ದಾಟಿಕೊಂಡೇ ಜನರು ನಡೆದಾಡುತ್ತಾರೆ. ಅಷ್ಟೇ ಅಲ್ಲ, ಬಹುತೇಕ ಎಲ್ಲ ವಾರ್ಡ್‌ಗಳಲ್ಲಿರುವ ಕಸದ ತೊಟ್ಟಿಗಳು ತುಂಬಿ ಅದೆಷ್ಟೋ ದಿನಗಳಾಗಿದ್ದು, ಹೊರಚೆಲ್ಲಿದ ಕಸದ ರಾಶಿಯಲ್ಲಿ ಹಂದಿಗಳು ಹುಡುಕಾಟ ನಡೆಸಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತದೆ. ತರಕಾರಿ ಮಾರುಕಟ್ಟೆ ಪ್ರದೇಶ, ಶಿವಾಜಿನಗರ, ಬಸ್ತಿ ಓಣಿ, ಪುರದ ಓಣಿ, ಎಂಜಿ ರಸ್ತೆ, ಜಯನಗರ, ಶಿವಬಸವ ನಗರಗಳಲ್ಲಿ ಕಸ, ಕೊಳಚೆ ಕಣ್ಣಿಗೆ ರಾಚುತ್ತದೆ. ಇದನ್ನು ನೋಡಿದರೆ ಇಲ್ಲಿ ನಗರಸಭೆ ಇದೆಯೋ, ಇದ್ದರೆ ಅದು ಏನು ಮಾಡುತ್ತಿದೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಕೊಳಚೆಯಲ್ಲೇ ಆಹಾರ: ನಗರದ ಅನೇಕ ಕಡೆಗಳಲ್ಲಿ ರಸ್ತೆ ಬದಿಯೇ ಗೂಡಂಗಡಿಗಳನ್ನಿಟ್ಟುಕೊಂಡು ಸಿದ್ಧ ಆಹಾರಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಗೂಡಂಗಡಿಗಳು ಕೊಳಚೆ ತುಂಬಿರುವ ಗಟಾರ್ ಮೇಲೆಯೇ ಇದ್ದು, ಅಲ್ಲಿಯೇ ಎಗ್ ರೈಸ್, ಮಿರ್ಚಿ ಸೇರಿದಂತೆ ಇತರ ಆಹಾರ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಇಲ್ಲಿ ಕೊಳಚೆ ತುಂಬಿರುವ ರಸ್ತೆಯಲ್ಲಿಯೇ ಜನರೂ ತಿನ್ನುತ್ತಾರೆ. ನಗರಸಭೆ ಮಾತ್ರ ಜನರ ಆರೋಗ್ಯ, ನಗರದ ನೈರ್ಮಲ್ಯ ತಮ್ಮ ಜವಾಬ್ದಾರಿ ಅಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ.
ಹಂದಿಗಳ ಕಾಟ: ಕಾಲುವೆಗಳಲ್ಲಿನ ಕೊಳಚೆಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸದೆ ಇರುವುದರಿಂದ ಹಾಗೂ ಕಸದ ತೊಟ್ಟಿಗಳಲ್ಲಿನ ಕಸ ಸಕಾಲಕ್ಕೆ ಸಾಗಿಸದೆ ಇರುವುದರಿಂದ ಹಂದಿಗಳ ಹಿಂಡೇ ಇಲ್ಲಿ ಓಡಾಡುತ್ತಿರುತ್ತದೆ. ಹಂದಿಗಳು ನಗರದಲ್ಲಿ ಹೆಚ್ಚಾಗಿದ್ದು, ಜನ ಕಿರಿಕಿರಿ ಅನುಭವಿಸುವಂತಾಗಿದೆ. ಹಂದಿ ನಿರ್ಮೂಲನೆ ಮಾಡುವುದಾಗಿ ಅನೇಕ ತಿಂಗಳಿಂದ ಹೇಳುತ್ತಲೇ ನಗರಸಭೆ ಕಾಲ ನೂಕುತ್ತಿದೆ.
ಲಕ್ಷಾಂತರ ಹಣ ವೆಚ್ಚ: ನಗರಸಭೆ ನಗರದ ಸ್ವಚ್ಛತೆಗಾಗಿ ಪ್ರತಿ ತಿಂಗಳು ಸುಮಾರು ರು. 11 ಲಕ್ಷ ಖರ್ಚು ಮಾಡುತ್ತಿದೆ. ಆದರೆ, ನೈರ್ಮಲ್ಯ ಮಾತ್ರ ನಗರದಿಂದ ಬಹಳ ದೂರವೇ ಉಳಿದಿರುವುದು ವಿಪರ್ಯಾಸ.
ನಗರಸಭೆ 60 ಪೌರಕಾರ್ಮಿಕರನ್ನು ಹೊಂದಿದ್ದರೂ ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲವಂತೆ. ಹೀಗೆಂದು ಸ್ವತಃ ನಗರಸಭೆ ಸದಸ್ಯರೇ ಆರೋಪಿಸುತ್ತಿದ್ದಾರೆ. ಪ್ರತಿ ತಿಂಗಳು ಹಣ ಮಾತ್ರ ಖರ್ಚಾಗುತ್ತಿದ್ದು, ಕಸ ವಿಲೇವಾರಿ ಮಾತ್ರ ಆಗುತ್ತಿಲ್ಲ ಎಂಬುದು ಎಲ್ಲರ ಆರೋಪ. ಪೌರಕಾರ್ಮಿಕರಿಂದ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿಸಿಕೊಳ್ಳುವುದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ನಗರ ಗಬ್ಬು ನಾರುವಂತಾಗಿದೆ. ಜನರಿಂದ ನಾವು ಉಗಿಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂಬ ಅಸಹಾಯಕತೆಯನ್ನು ನಗರಸಭೆ ಅಧ್ಯಕ್ಷ ಐ.ಯು. ಪಠಾಣ, ಶಾಸಕ ರುದ್ರಪ್ಪ ಲಮಾಣಿ, ಸದಸ್ಯ ಸಂಜೀವ ನೀರಲಗಿ ಸೇರಿದಂತೆ ಎಲ್ಲ ಸದಸ್ಯರ ದೂರಾಗಿದೆ.
ಇನ್ನು ಜನರು ಸಮಸ್ಯೆ ಹೇಳಿದರೆ ನಗರಸಭೆ ಸ್ಪಂದಿಸುತ್ತದೆ ಎಂದು ಹೇಳುವಂತೆಯೇ ಇಲ್ಲ. ಹೀಗಿದ್ದ ಮೇಲೆ ನಗರ ನೈರ್ಮಲ್ಯ ಅಸಾಧ್ಯದ ಮಾತು. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುವರೇ ಎನ್ನುವುದನ್ನು ಕಾದುನೋಡಬೇಕಿದೆ.
ವೀರೇಶ ಮಡ್ಲೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

