ವಿಶ್ವಬಂಧುತ್ವ ಸಾರಿದ ತರಳಬಾಳು ಹುಣ್ಣಿಮೆಗೆ ಅದ್ಧೂರಿ ತೆರೆ
ಕನಕದಾಸ ಮಹಾಮಂಟಪ, ಶಿಗ್ಗಾಂವಿ, ಫೆ. 14
ಧಾರ್ಮಿಕ, ಸಾಂಸ್ಕೃತಿಕ, ವೈಚಾರಿಕ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಸಿರಿಗೆರೆಯ ತರಳಬಾಳು ಜಗದ್ಗುರು 1108 ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಿಗ್ಗಾಂವಿಯಲ್ಲಿ 9 ದಿನಗಳ ಕಾಲ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು.
ಶಿಗ್ಗಾಂವಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಶುಕ್ರವಾರ ನಡೆದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಹತ್ತಾರು ಸಾವಿರ ಜನರು ಸಾಕ್ಷಿಯಾದರು. 9 ದಿನಗಳ ಕಾಲ ವೈಚಾರಿಕ ಕ್ರಾಂತಿಯನ್ನು ಹರಡುವ ಮೂಲಕ ತರಳಬಾಳು ಹುಣ್ಣಿಮೆ ಮಹೋತ್ಸವ ನಾಡಹಬ್ಬವಾಗಿ ಮಾರ್ಪಟ್ಟಿತು. ಸಂತ ಶಿಶುನಾಳ ಷರೀಫ ಮಹಾವೇದಿಕೆಯಲ್ಲಿ 9 ದಿನಗಳ ಕಾಲ ನಾಡಿನ ಪ್ರಖ್ಯಾತ ಚಿಂತಕರು, ಸಾಹಿತಿಗಳು, ವಿಮರ್ಶಕರು, ರಾಜಕಾರಣಿಗಳು, ಕಲಾವಿದರು ಈ ಮಹೋತ್ಸವದಲ್ಲಿ ಪಾಲ್ಗೊಂಡು ವೈಚಾರಿಕ ಜ್ಯೋತಿ ಪ್ರಜ್ವಲಿಸುವಂತೆ ಮಾಡಿದರು. ನಡೆದಾಡುವ ವಿಶ್ವವಿದ್ಯಾಲಯ ಎಂಬಂತೆ ಹುಣ್ಣಿಮೆ ಕಾರ್ಯಕ್ರಮ ನಡೆಯಿತು.
ಸಾಂಸ್ಕೃತಿಕ ಚಲನಶೀಲತೆ: ಸಮಕಾಲೀನ ವಿಚಾರಗಳೊಂದಿಗೆ ಸಂವಾದಿಯಾಗುತ್ತಲೇ ಬಸವಣ್ಣನ ಸಮಕಾಲೀನ ಮರುಳುಸಿದ್ಧರ ಆಶಯಗಳೊಂದಿಗೆ ಸಮಾಜವನ್ನು ಮುಖಾಮುಖಿಯಾಗಿಸುವ ಪ್ರಯತ್ನವಾದ ತರಳಬಾಳು ಹುಣ್ಣಿಮೆ ಕೇವಲ ಸಿರಿಗೆರೆ ಮಠದ ಧಾರ್ಮಿಕ ಆಚರಣೆಯಾಗಿ ಉಳಿಯದೇ ನಾಡಿನ ಸಾಂಸ್ಕೃತಿಕ ಚಲನಶೀಲತೆಗೆ ಇಂಬು ನೀಡುವ ಕಮ್ಮಟ ಎನಿಸಿತು. ನೈತಿಕತೆ, ಸಮಾನತೆ, ಕಾಯಕ ತತ್ವದಡಿಯಲ್ಲಿ ಧರ್ಮಾಚರಣೆ ಸಾಗಬೇಕು ಎಂಬ ಉದ್ದೇಶದಿಂದ ಮಾಘ ಶುದ್ಧ ಪೂರ್ಣಿಮೆಯ ದಿನ ವಿಶ್ವಬಂಧು ಮರುಳುಸಿದ್ಧರು ತಮ್ಮ ಶಿಷ್ಯ ತೆಲುಗುಬಾಳ ಸಿದ್ಧರನ್ನು ಸದ್ಧರ್ಮ ಪೀಠದಲ್ಲಿ ಕೂರಿಸಿ ಅವರನ್ನು ಹರಸಿದ ಮಂತ್ರವಾದ 'ತರಳ, ನೀ ಬಾಳು' ಎಂಬಂತೆ ಶಿಗ್ಗಾಂವಿಯಲ್ಲೂ ಜನರ ಬಾಳು ಹಸನಾಗುವ ಉದ್ದೇಶದಿಂದ ಸಿರಿಗೆರೆಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಹುಣ್ಣಿಮೆ ಕಾರ್ಯಕ್ರಮ ಜನರನ್ನು ವೈಚಾರಿಕ ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಯಿತು. ಬಸವಾದಿ ಶರಣರ ತತ್ವ, ವಿಚಾರಗಳ ಚಿಂತನ ಮಂಥನದೊಂದಿಗೆ ವಿಶ್ವಮಾನವರಾಗಿ ಬಾಳಬೇಕು ಎನ್ನುವ ಮಹಾನ್ ತತ್ವದ ಪಾಲನೆ ಮತ್ತು ಅನುಷ್ಠಾನಗೊಳಿಸುವ ಸಂಕಲ್ಪ ತೊಡಲು ಕಾರ್ಯಕ್ರಮ ಸಾವಿರಾರು ಜನರಿಗೆ ಪ್ರೇರಣೆ ನೀಡಿತು. ಪ್ರತಿದಿನ ಸಂಜೆ 6.30ಕ್ಕೆ ಸರಿಯಾಗಿ ಆರಂಭವಾಗುತ್ತಿದ್ದ ಕಾರ್ಯಕ್ರಮ ತಡರಾತ್ರಿವರೆಗೂ ನಡೆಯಿತು. ಆಧುನಿಕತೆಯ ಇಂದಿನ ದಿನಗಳಲ್ಲೂ ನಿತ್ಯ 25 ಸಾವಿರಕ್ಕೂ ಹೆಚ್ಚು ಜನರು ಕುಳಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ. ಕೊನೆಯ ದಿನವಾದ ಶುಕ್ರವಾರ 50 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡು ಸಿರಿಗೆರೆಶ್ರೀಗಳ ಆಶೀರ್ವಚನ ಪಡೆದು ಪುನೀತರಾದರು. ಕೊನೆಯ ದಿನವಾದ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಹುಣ್ಣಿಮೆ ಕಾರ್ಯಕ್ರಮದ ಶ್ರೇಷ್ಠತೆಯನ್ನು ಎತ್ತಿ ತೋರಿಸುವಂತಿತ್ತು. ತರಳಬಾಳು ಹುಣ್ಣಿಮೆ ನಾಡ ಹಬ್ಬವಾಗಿ ಮಾರ್ಪಟ್ಟು, ಜನರನ್ನು ವೈಚಾರಿಕ ಚಿಂತನೆಗೆ ಹಚ್ಚುವಂತೆ ಮಾಡಿ ಶ್ರೇಷ್ಠತೆ ಮೆರೆಯಿತು.
-ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

