ಹಾವೇರಿ

ಮುಷ್ಕರಕ್ಕಿಳಿದ್ರೆ ಶುಲ್ಕ ಮರುಪಾವತಿ ಇಲ್ಲ!

Published On :

 ನಾರಾಯಣ ಹೆಗಡೆ
ಹಾವೇರಿ: ಬಿಸಿಎಂ ವಿದ್ಯಾರ್ಥಿಗಳು ಇನ್ಮುಂದೆ ಮುಷ್ಕರದಲ್ಲಿ ಪಾಲ್ಗೊಂಡರೆ ಕಾಲೇಜು ಪ್ರವೇಶದ ಸಂದರ್ಭದಲ್ಲಿ ಭರಿಸಿದ್ದ ಶುಲ್ಕ ಮರುಪಾವತಿಯಾಗದು. ಅಷ್ಟೇ ಅಲ್ಲ, ಸೌಲಭ್ಯ ಪಡೆಯಲು ನಿಗದಿಪಡಿಸಿದಷ್ಟು ಅಂಕಗಳನ್ನು ಪಡೆಯಬೇಕೆಂಬ ಷರತ್ತು ಹಾಕಲಾಗಿದ್ದು, ಆಧಾರ್ ಕಾರ್ಡ್ ಕೂಡ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಸೌಲಭ್ಯ ಪಡೆಯಲು ಸರ್ಕಾರ ಹಲವು ಷರತ್ತುಗಳನ್ನು ಹಾಕಿದೆ. ಶೈಕ್ಷಣಿಕ ಪ್ರಗತಿ ತೃಪ್ತಿಕರವಾಗಿರಬೇಕು. ತರಗತಿಗೆ ಪದೇಪದೆ ಗೈರು ಹಾಜರಾಗಬಾರದು. ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಬೇಕು. ಪ್ರಥಮ ಬಾರಿಗೆ ಸೌಲಭ್ಯ ಪಡೆಯುವ ಪ್ರವರ್ಗ-1ರ ವಿದ್ಯಾರ್ಥಿ ಹಿಂದಿನ ವಾರ್ಷಿಕ ಪರೀಕ್ಷೆಯಲ್ಲಿ ಶೇ.40 ಹಾಗೂ ನವೀಕರಣ ವಿದ್ಯಾರ್ಥಿಯಾಗಿದ್ದಲ್ಲಿ ಶೇ.50ರಷ್ಟು ಅಂಕ ಗಳಿಸಿರಬೇಕು. ಪ್ರವರ್ಗ-2ಎ, 3ಎ ಹಾಗೂ 3ಬಿ ವಿದ್ಯಾರ್ಥಿಗಳಾದರೆ ಪ್ರಥಮ ವರ್ಷ ಶೇ.50 ಅಂಕ ಗಳಿಸಿರಬೇಕು. ನವೀಕರಣವಾಗಿದ್ದರೆ ಶೇ.60 ಹಾಗೂ ಶೇ.70ರಷ್ಟು ಅಂಕ ಗಳಿಸಿರಬೇಕು. ನಗದು ವರ್ಗಾವಣೆ ಸೌಲಭ್ಯದಡಿ ಸರ್ಕಾರದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವಿದ್ಯಾರ್ಥಿಗಳು ಪಾವತಿಸಿದ ಹೆಚ್ಚುವರಿ ಶುಲ್ಕವನ್ನು ವರ್ಗಾಯಿಸಲಿದೆ. ಅದಕ್ಕಾಗಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.


ಇದೊಂದು ಅಪ್ರಜಾತಾಂತ್ರಿಕ ಫ್ಯಾಸಿಸ್ಟ್ ದಾಳಿಯಾಗಿದ್ದು ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಆದೇಶ ಶುಲ್ಕ ವಿನಾಯಿತಿಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ವಿದ್ಯಾರ್ಥಿಯೊಬ್ಬ ಶುಲ್ಕ ಭರಿಸುವ ವೇಳೆಗೆ ಶುಲ್ಕ ವಿನಾಯಿತಿ ಸಿಗಬೇಕೇ ಹೊರತು ಮುಗಿದ ನಂತರ ಮುಂದೆಂದೋ ಅವನ ಬ್ಯಾಂಕ್ ಖಾತೆಗೆ ಹಣ ಪಾವತಿಸುವುದು ಅಸಂಬದ್ಧ ನಿರ್ಧಾರವಾಗಿದೆ.
ಟಿ ರಾಜಶೇಖರ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ ಆರ್ಗನೈಸೇಶನ್ (ಐಐಡಿಎಸ್ಒ) ರಾಜ್ಯಾಧ್ಯಕ್ಷ



ಮುಷ್ಕರದಲ್ಲಿ ಪಾಲ್ಗೊಂಡರೂ ಕಟ್
ವಿಶೇಷ ಎಂದರೆ, ಮುಷ್ಕರದಲ್ಲಿ ವಿದ್ಯಾರ್ಥಿ ಪಾಲ್ಗೊಂಡರೂ ಈ ಎಲ್ಲ ಸೌಲಭ್ಯ ನೀಡಬಾರದು ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಿದೆ. ಮುಷ್ಕರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಯಿಂದ ಅರ್ಜಿಯನ್ನೇ ಪಡೆಯಬಾರದು. ಒಂದು ವೇಳೆ ಅರ್ಜಿ ಸಲ್ಲಿಸಿ ಸೌಲಭ್ಯ ಮಂಜೂರಾದರೂ ಅದನ್ನು ರದ್ದುಪಡಿಸಬೇಕು ಎಂದು ಸೂಚಿಸಲಾಗಿದೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು ಇನ್ನು ಪ್ರತಿಭಟನೆ ಹಕ್ಕನ್ನೂ ಕಳೆದುಕೊಳ್ಳಲಿದ್ದಾರೆ. ನಗದು ಮರುಪಾವತಿಗೆ 2013-14ನೇ ಸಾಲಿನಲ್ಲಿ ಧಾರವಾಡ, ಮೈಸೂರು, ತುಮಕೂರು ಜಿಲ್ಲೆಗಳಿಗೆ ಮಾತ್ರ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದ್ದು, 2014-15ನೇ ಸಾಲಿನಲ್ಲಿ ಎಲ್ಲ ಜಿಲ್ಲೆಯ ವಿದ್ಯಾರ್ಥಿಗಳಿಗೂ ಇದು ಅನ್ವಯವಾಗಲಿದೆ.


ಪ್ರಶ್ನಿಸಿದರೆ ಕಾನೂನುಬಾಹಿರ
ಈ ಆದೇಶದಿಂದ ಲಕ್ಷಾಂತರ ಬಡ ವಿದ್ಯಾರ್ಥಿಗಳಿಂದ ಶುಲ್ಕ ವಿನಾಯಿತಿ ಸೌಲಭ್ಯ ಕಸಿದುಕೊಳ್ಳಲು ಸರ್ಕಾರ ಹೂಡಿರುವ ತಂತ್ರ ಎಂಬ ಆರೋಪ ಕೇಳಿಬರುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.70ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಅನುತ್ತೀರ್ಣರಾಗುವುದು ಸಾಮಾನ್ಯವಾಗಿದ್ದು, ಅವರೆಲ್ಲರೂ ಶುಲ್ಕ ವಿನಾಯಿತಿಯಿಂದ ಇನ್ಮುಂದೆ ವಂಚಿತರಾಗುವುದು ನಿಶ್ಚಿತ. ಕಾಲೇಜುಗಳಲ್ಲಿ ಮೂಲಸೌಕರ್ಯದ ಕೊರತೆ, ಏಕಾಏಕಿ ಶುಲ್ಕ ದುಪ್ಪಟ್ಟು ಆಗುವುದು, ಮೌಲ್ಯಮಾಪನದಲ್ಲಿ ಲೋಪದೋಷಗಳು, ಭ್ರಷ್ಟಾಚಾರ, ಉಪನ್ಯಾಸಕರ ವರ್ತನೆ ಯಾವುದನ್ನೂ ವಿದ್ಯಾರ್ಥಿಗಳು ಪ್ರಶ್ನಿಸುವುದು ಈ ಆದೇಶದ ಪ್ರಕಾರ ಕಾನೂನುಬಾಹಿರವಾಗಲಿದೆ. ಅದನ್ನು ಮುಷ್ಕರ ಎಂದು ಪರಿಗಣಿಸಿ ಶುಲ್ಕ ಮರುಪಾವತಿ ಸೌಲಭ್ಯದಿಂದ ದೂರವಿಡುವ ಅಪಾಯವಿದೆ.


ಪೂರ್ಣ ಶುಲ್ಕ
ಭರಿಸಬೇಕು
ಸರ್ಕಾರದ ಆದೇಶದ ಪ್ರಕಾರ ಬಿಸಿಎಂ ವಿದ್ಯಾರ್ಥಿಗಳಿಗೆ ಇದುವರೆಗೆ ನೀಡಲಾಗುತ್ತಿದ್ದ ಶುಲ್ಕ ವಿನಾಯಿತಿ ಇನ್ಮುಂದೆ ರದ್ದಾಗಲಿದ್ದು, ಅವರು ಪೂರ್ಣ ಶುಲ್ಕ ಪಾವತಿಸುವ ಪರಿಸ್ಥಿತಿ ಉಂಟಾಗಲಿದೆ. ಹಲವು ನಿಯಮಗಳನ್ನು ಅಳವಡಿಸಿ ವಿದ್ಯಾರ್ಥಿಗಳು ಪಾವತಿಸಿದ ಹೆಚ್ಚುವರಿ ಶುಲ್ಕವನ್ನು ನಗದು ವರ್ಗಾವಣೆ ಸೌಲಭ್ಯದಡಿ ಅವರ ಬ್ಯಾಂಕ್ ಖಾತೆಗೆ ಮರುಪಾವತಿಸಲಿದೆ. ಇದರಿಂದ ಹಿಂದುಳಿದ ಬಡ ವಿದ್ಯಾರ್ಥಿಗಳು ಕಾಲೇಜು ಪ್ರವೇಶ ಸಂದರ್ಭದಲ್ಲೇ ಪೂರ್ಣ ಶುಲ್ಕ ಪಾವತಿಸಬೇಕಾಗುತ್ತದೆ. ಇದರಿಂದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಗುರಿಯನ್ನೇ ಚಿವುಟಿ ಹಾಕುವ ಅಪಾಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.