ಜನಪದ ಕಲೆಗೆ ಮನಸ್ಸು ಬಾಗುತ್ತದೆ
ಹಾನಗಲ್ಲ: ಜಾನಪದವನ್ನು ನಮ್ಮೊಳಗಿನ ಅಂತರಾತ್ಮದಿಂದ ಬಿಟ್ಟು ಕೊಡಬೇಡಿ, ಜನಪದ ಕಲೆಗೆ ಮನಸ್ಸು ಸಹಜವಾಗಿ ಬಾಗುತ್ತದೆ. ನಾಳಿನ ನಮ್ಮ ಪೀಳಿಗೆಗೆ ಜನಪದ ಸಂಸ್ಕಾರದ ಅಗತ್ಯವಿದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ನುಡಿದರು.
ಹಾನಗಲ್ಲಿನಲ್ಲಿ ಶಿವಯೋಗ ಮಂದಿರದ ಸಂಸ್ಥಾಪಕ ಹಾನಗಲ್ಲ ಲಿಂ. ಕುಮಾರಶಿವಯೋಗಿ 84ನೇ ಪುಣ್ಯ ಸ್ಮರಣೋತ್ಸವದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಧರ್ಮ ಸಂಸ್ಕಾರಗಳು ಮನೆ-ಮನ ಬೆಳಗಬೇಕು. ಕೌಟುಂಬಿಕ ಸಾಮರಸ್ಯ ಕೆಡದಂತೆ ಮನೆಯ ವಾತಾವರಣವಿರಲಿ. ಈ ಎಲ್ಲ ಸಂಸ್ಕಾರಗಳಿಗೆ ಜನಪದ ಸಾಹಿತ್ಯ ಸಂಸ್ಕಾರಗಳು ಸಹಕಾರಿ ಎಂದು ತಿಳಿಸಿದರು. ಮಹಾತ್ಮರ ಜೀವನ ವಿಧಾನವನ್ನು ಅರಿತು ಅನುಸರಿಸಬೇಕು. ನಾಡು ನುಡಿ ಧರ್ಮದ ಆಭಿಮಾನವಿರಬೇಕು ಎಂದರು.
ಸಮಾರಂಭದ ಸಮ್ಮುಖ ವಹಿಸಿ ಮಾತನಾಡಿದ ಕಪ್ಪೋತಗಿರಿ ನಂದಿವೇರಿಮಠದ ಶಿವಕುಮಾರ ಸ್ವಾಮಿಗಳು, ಈ ಸಮಾಜದ ಅಂಧಕಾರ ಬಿಡಿಸುವ ಗುರು ಬೇಕಾಗಿದೆ. ಹಾನಗಲ್ಲ ಕುಮಾರ ಸ್ವಾಮಿಗಳೆಂದರೆ ಒಂದು ಮಂತ್ರವಿದ್ದಂತೆ. ಜಾಗತೀಕರಣ, ಉದಾರೀಕರಣ, ನಾಗರೀಕರಣದ ಹೆಸರಿನಲ್ಲಿ ಹಳ್ಳಿಗಳ ಅಸ್ತಿತ್ವ ಹಾಳಾಗುತ್ತಿದೆ. ಕೃಷಿ ಕಾಯಕಗಳು ಗುಲಾಮಗಿರಿಯಂತಾಗುತ್ತಿರುವುದು ದುರಂತ. ಸರ್ಕಾರಗಳ ತಪ್ಪು ನೀತಿಯಿಂದ ಸಮಾಜ ರೋಗಗ್ರಸ್ಥವಾಗುತ್ತಿದೆ. ಸಭ್ಯತೆ ಸಜ್ಜನಿಕೆಗಳು ಮಾಯವಾಗುತ್ತಿವೆ. ಆಧುನಿಕತೆಯ ಭರಾಟೆಯಲ್ಲಿ ನೈತಿಕತೆ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಅತಿಥಿಯಾಗಿ ಮಾತನಾಡಿದ ಮಾಜಿ ಸಚಿವ ಸಿ.ಎಂ.ಉದಾಸಿ ಇತ್ತೀಚಿನ ದಿನಗಳಲ್ಲಿ ಹಣ ಹಾಗೂ ಅಧಿಕಾರಕ್ಕೆ ಹೆಚ್ಚು ಮಾನ್ಯತೆ ಆರಂಭವಾಗಿ ಮೌಲ್ಯ ಕುಸಿಯುತ್ತಿದೆ. ಮನುಷ್ಯ ಹಾಗೂ ಕುಟುಂಬದ ನಡುವಿನ ಸಂಬಂಧಗಳು ದೂರವಾಗುತ್ತಿವೆ. ಈಗ ಸಕಾರಾತ್ಮಕ ಚಿಂತನೆಗೆ ಒತ್ತು ನೀಡುವ ಅಗತ್ಯವಿದೆ. ವಿದ್ಯಾವಂತರಲ್ಲಿ ಕೃಷಿ ಬಗೆಗೆ ಅನಾದರ ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ನಾಡು ಸಮೃದ್ಧಿಯಿಂದಿರಲು ಕೃಷಿಯನ್ನೂ ಅತಿ ಹೆಚ್ಚು ಪ್ರೀತಿಸುವ, ಅದರಲ್ಲಿ ತೊಡಗಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ಮಾಡಿದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳು, ಅಕ್ಕಿಆಲೂರು ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮಿಗಳು, ಬಿಜಕಲ್ ಮಠದ ಶಿವಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಹುಬ್ಬಳ್ಳಿಯ ಶರಣ ಬಸವರಾಜ ಬಿಸರಳ್ಳಿ, ಹುಬ್ಬಳ್ಳಿ ಮೂರುಸಾವಿರಮಠದ ಅನ್ನಪೂರ್ಣೇಶ್ವರಿ ದಾಸೋಹ ಸಮಿತಿ ಕಾರ್ಯಾಧ್ಯಕ್ಷ, ವಿಜಯಕುಮಾರ ಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಬಾಗಲಕೋಟೆಯ ಗುರಮ್ಮ ಸಂಕಿನ ಅವರ ಜನಪದ ಹಾಡು ಹಾಗೂ ಜನಪದ ಬದುಕಿನ ವಾಸ್ತವ ಸತ್ಯದ ಮಾತುಗಳು ಗಮನ ಸೆಳೆದವು.
ಇದೇ ಸಂದರ್ಭ ಶಿಕ್ಷಕ ಸುಭಾಸ ಹೊಸಮನಿ ಅವರು ಬರೆದ ಜೀವನದ ಆದರ್ಶ ಮೌಲ್ಯಗಳು ಗ್ರಂಥವನ್ನು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಬಿಡುಗಡೆಗೊಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

