ವೈದ್ಯರ ಕೊರತೆ, ಜಿಲ್ಲಾಸ್ಪತ್ರೆಗೇ ಬೇಕಿದೆ ಚಿಕಿತ್ಸೆ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ. 24
ನಿತ್ಯ ಸಾವಿರಾರು ಜನರು ಆರೋಗ್ಯ ಸೇವೆ ಬಯಸಿ ಬರುವ ಇಲ್ಲಿಯ ಜಿಲ್ಲಾಸ್ಪತ್ರೆಯೇ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ. ವೈದ್ಯರು ಸೇರಿದಂತೆ ಮಂಜೂರಾಗಿರುವ 301 ಹುದ್ದೆಗಳ ಪೈಕಿ 78 ಜನ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾಸ್ಪತ್ರೆಗೇ ಚಿಕಿತ್ಸೆ ಬೇಕು ಎಂಬಂತಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಖಾಲಿ ಹುದ್ದೆಗಳದ್ದೇ ಕಾರುಬಾರಾಗಿದ್ದು, ಜನಸಾಮಾನ್ಯರಿಗೆ ಆರೋಗ್ಯ ಸೇವೆ ಇಲ್ಲಿ ಸುಲಭ ಹಾಗೂ ತ್ವರಿತವಾಗಿ ಸಿಗುವುದು ಕಷ್ಟ. ಮೂಲಭೂತ ಸೌಲಭ್ಯಗಳಿದ್ದರೂ ಅಗತ್ಯ ವೈದ್ಯರ ನೇಮಕವಾಗಿಲ್ಲ. ಸ್ಟಾಫ್ ನರ್ಸ್, ಪ್ಯಾರಾಮೆಡಿಕಲ್ ಸಿಬ್ಬಂದಿ, ಕಚೇರಿ ಸಿಬ್ಬಂದಿ ಕೊರತೆಗಳ ಪಟ್ಟಿಯೇ ದೊಡ್ಡದಿದ್ದು, ಈಗಿರುವ ಸಿಬ್ಬಂದಿಯಿಂದ ಸಾವಿರಾರು ಸಂಖ್ಯೆಯಲ್ಲಿ ಬರುವ ರೋಗಿಗಳ ಆರೋಗ್ಯ ವಿಚಾರಿಸಿಕೊಳ್ಳುವುದು, ಚಿಕಿತ್ಸೆ ನೀಡುವುದು ಸಾಧ್ಯವಾಗುತ್ತಿಲ್ಲ. 301 ಹುದ್ದೆಗಳಲ್ಲಿ 223 ಹುದ್ದೆಗಳು ಖಾಲಿಯಿವೆ.
ತಜ್ಞ ವೈದ್ಯರ ಕೊರತೆ:
250 ಹಾಸಿಗೆ ಸಾಮರ್ಥ್ಯದ ಇಲ್ಲಿಯ ಜಿಲ್ಲಾಸ್ಪತ್ರೆಗೆ ಒಟ್ಟು 60 ತಜ್ಞ ವೈದ್ಯರ ಹುದ್ದೆ ಮಂಜೂರಾಗಿದೆ. ಆದರೆ, ಸದ್ಯ 17 ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, 43 ಹುದ್ದೆ ಖಾಲಿಯಿದೆ. ಮೆಡಿಕಲ್ ಸ್ಪೆಶಲಿಸ್ಟ್ 3 ಹುದ್ದೆಗಳಲ್ಲಿ 2, ಸರ್ಜರಿ ಸ್ಪೆಶಲಿಸ್ಟ್ 3 ಹುದ್ದೆಗಳಲ್ಲಿ 2 ಖಾಲಿ. ಗೈನಕಾಲಾಜಿಸ್ಟ್ 6 ಹುದ್ದೆಗಳ ಪೈಕಿ ಇಬ್ಬರು ಇದ್ದಾರೆ. ಹೆರಿಗೆ ಇನ್ನಿತರ ತುರ್ತು ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ಅರವಳಿಕೆ ನೀಡುವ ಅನಸ್ಥೇಶಿಯಾ ತಜ್ಞರ 6 ಹುದ್ದೆಗಳಲ್ಲಿ ಒಬ್ಬರು ಮಾತ್ರ ಇದ್ದಾರೆ. ಇಡೀ ಆಸ್ಪತ್ರೆಗೆ ದಿನದ 24 ಗಂಟೆಗಳ ಕಾಲ ಇವರೇ ಅರವಳಿಕೆ ಮದ್ದು ನೀಡಬೇಕಿದೆ. ಮುಖ್ಯವಾಗಿ ಜನರಲ್ ಡ್ಯೂಟಿಯ 20 ವೈದ್ಯರ ಹುದ್ದೆಗಳಲ್ಲಿ ಎಲ್ಲವೂ ಖಾಲಿಯಿವೆ. ಆಯುಷ್ ವಿಭಾಗದ ಎಲ್ಲ 4 ಹುದ್ದೆ ಖಾಲಿಯಿದೆ. ಫೋರೆನ್ಸಿಕ್ ತಜ್ಞರು, ರೇಡಿಯಾಲಾಜಿಸ್ಟ್ ಸೇರಿದಂತೆ ಎಲ್ಲ ವಿಭಾಗದ ಹುದ್ದೆಗಳೂ ಇಲ್ಲಿ ಖಾಲಿಯೇ ಇವೆ.
ಅರೆಬರೆ ಪ್ಯಾರಾ ಮೆಡಿಕಲ್:
ಜಿಲ್ಲಾಸ್ಪತ್ರೆಗೆ ಒಟ್ಟು 207 ಪ್ಯಾರಾ ಮೆಡಿಕಲ್ ಸಿಬ್ಬಂದಿ ಹುದ್ದೆ ಮಂಜೂರಾಗಿದೆ. ಆದರೆ, ಸದ್ಯ 72 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 135 ಹುದ್ದೆ ಭರ್ತಿಯಾಗದೇ ಉಳಿದಿವೆ. ಮುಖ್ಯವಾಗಿ 100 ಸ್ಟಾಫ್ ನರ್ಸ್ ಹುದ್ದೆಗಳ ಪೈಕಿ ಈಗ 25 ನರ್ಸ್ಗಳು ಕೆಲಸ ಕಾರ್ಯನಿರ್ವಹಿಸುತ್ತಿದ್ದಾರೆ. ಹೊರರೋಗಿ ವಿಭಾಗ, ಬ್ಲಡ್ ಬ್ಯಾಂಕ್ ಇತ್ಯಾದಿ ಆಸ್ಪತ್ರೆ ಕೆಲಸಗಾರರ 30 ಹುದ್ದೆಗಳಲ್ಲಿ 18 ಹುದ್ದೆ ಖಾಲಿ ಇವೆ. ಎಲ್ಲ 20 ಸ್ಯಾನಿಟರಿ ಕೆಲಸಗಾರರ ಹುದ್ದೆ ಖಾಲಿ ಇವೆ. ಸಮಾಲೋಚಕರ 2 ಹುದ್ದೆಯೂ ಖಾಲಿಯಿದ್ದು, ಲ್ಯಾಬೋರೇಟರಿ ಟೆಕ್ನೀಶಿಯನ್ 12 ಹುದ್ದೆಗಳಲ್ಲಿ 8 ಖಾಲಿಯಿವೆ. ಫಾರ್ಮಾಸಿಸ್ಟ್, ಫಿಸಿಯೋಥೆರಪಿಸ್ಟ್ ಇತ್ಯಾದಿ ಎಲ್ಲ ಹುದ್ದೆಗಳು ಖಾಲಿ.. ಖಾಲಿ.
ಸುಲಿಗೆ, ಗುಳಿಗೆ ಚೀಟಿ:
ಆಸ್ಪತ್ರೆಯ ಕೆಲ ವಾರ್ಡುಗಳಲ್ಲಿ ಸ್ವಚ್ಛತೆಗೆ ಗಮನ ನೀಡುತ್ತಿಲ್ಲ. ಇದರಿಂದ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಪಾಡು ಹೇಳತೀರದು. ರೋಗಿಗಳೊಂದಿಗೆ ಬರುವ ಸಂಬಂಧಿಕರೂ ರೋಗ ಹಿಡಿಸಿಕೊಂಡು ಹೋಗುವಂತಾಗಿದೆ. ಅಲ್ಲದೇ ಕೆಲ ವೈದ್ಯರು ಹಾಗೂ ಸ್ಟಾಫ್ ನರ್ಸ್ಗಳ ಸುಲಿಗೆ ಬಗ್ಗೆಯೂ ವ್ಯಾಪಕ ಆರೋಪ ಕೇಳಿ ಬರುತ್ತಿವೆ. ಪ್ರತಿಯೊಂದು ಸೇವೆಗೂ ಮಾಮೂಲಿ ನೀಡದಿದ್ದರೆ ಕೆಲಸ ಆಗುವುದಿಲ್ಲ ಎಂಬ ಮಾಹಿತಿ ಕಳೆದ ವಾರ ಉಪ ಲೋಕಾಯುಕ್ತರು ಭೇಟಿ ನೀಡಿದ್ದ ವೇಳೆ ಬಹಿರಂಗಗೊಂಡಿದೆ. ಔಷಧಿ ಗುಳಿಗೆಗೆ ವೈದ್ಯರು ಚೀಟಿ ಬರೆದುಕೊಟ್ಟು ಹೊರಗಡೆ ಖರೀದಿಸುವಂತೆ ಹೇಳುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.
ಈ ಕುರಿತು ಜಿಲ್ಲಾಸ್ಪತ್ರೆ ಸರ್ಜನ್ ಡಾ. ಬಸವರಾಜ ಅಂಗಡಿ ಅವರನ್ನು ಕೇಳಿದಾಗ, ಆಸ್ಪತ್ರೆಯಲ್ಲಿ ವೈದ್ಯರು ಹುದ್ದೆ ಖಾಲಿಯಿದೆ. ಇದರಿಂದ ಸಮರ್ಪಕ ಆರೋಗ್ಯ ಸೇವೆ ನೀಡಲು ಸಮಸ್ಯೆಯಾಗುತ್ತಿದೆ. ಕೆಲವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದ್ದು, ಇರುವ ಸಿಬ್ಬಂದಿಯಿಂದಲೇ ಉತ್ತಮ ಸೇವೆ ನೀಡಲು ಶ್ರಮಿಸಲಾಗುತ್ತಿದೆ. ಸಿಟಿ ಸ್ಕ್ಯಾನ್ ಪ್ರಸ್ತಾವನೆ ಸಲ್ಲಿಸಲಾಗಿದೆ. ರೋಗಿಗಳಿಂದ ಹಣ ಪಡೆಯುವುದು ಕಂಡುಬಂದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದುತಿಳಿಸಿದ್ದಾರೆ.
207 ಹುದ್ದೆ ಮಂಜೂರು
ಜಿಲ್ಲಾಸ್ಪತ್ರೆಗೆ ಒಟ್ಟು 207 ಪ್ಯಾರಾ ಮೆಡಿಕಲ್ ಸಿಬ್ಬಂದಿ ಹುದ್ದೆ ಮಂಜೂರಾಗಿದೆ. ಆದರೆ, ಸದ್ಯ 72 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 135 ಹುದ್ದೆ ಭರ್ತಿಯಾಗದೇ ಉಳಿದಿವೆ.
ಮುಖ್ಯವಾಗಿ 100 ಸ್ಟಾಫ್ ನರ್ಸ್ ಹುದ್ದೆಗಳ ಪೈಕಿ ಈಗ 25 ನರ್ಸ್ಗಳು ಕೆಲಸ ಕಾರ್ಯನಿರ್ವಹಿಸುತ್ತಿದ್ದಾರೆ. ಹೊರರೋಗಿ ವಿಭಾಗ, ಬ್ಲಡ್ ಬ್ಯಾಂಕ್ ಇತ್ಯಾದಿ ಆಸ್ಪತ್ರೆ ಕೆಲಸಗಾರರ 30 ಹುದ್ದೆಗಳಲ್ಲಿ 18 ಹುದ್ದೆ ಖಾಲಿ ಇವೆ.
ಎಲ್ಲ 20 ಸ್ಯಾನಿಟರಿ ಕೆಲಸಗಾರರ ಹುದ್ದೆ ಖಾಲಿ ಇವೆ. ಸಮಾಲೋಚಕರ 2 ಹುದ್ದೆಯೂ ಖಾಲಿಯಿದ್ದು, ಲ್ಯಾಬೋರೇಟರಿ ಟೆಕ್ನೀಶಿಯನ್ 12 ಹುದ್ದೆಗಳಲ್ಲಿ 8 ಖಾಲಿಯಿವೆ. ಫಾರ್ಮಾಸಿಸ್ಟ್, ಫಿಸಿಯೋಥೆರಪಿಸ್ಟ್ ಇತ್ಯಾದಿ ಎಲ್ಲ ಹುದ್ದೆಗಳು ಖಾಲಿ.. ಖಾಲಿ..
-ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

