ಹಾವೇರಿ

ಸ್ವಯಂಚಾಲಿತ ಎಲೆಕ್ಟ್ರಾನಿಕ್ ವೇಬ್ರಿಡ್ಜ್ ಕಲ್ಪಿಸಿ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಫೆ. 27
ಚಿಕ್ಕಬಾಸೂರು ಗ್ರಾಮದಲ್ಲಿರುವ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಆವರಣದಲ್ಲಿ 50 ಮೆಟ್ರಿಕ್ ಟನ್ ಸಾಮರ್ಥ್ಯದ ಸ್ವಯಂಚಾಲಿತ ಎಲೆಕ್ಟ್ರಾನಿಕ್ ವೇಬ್ರಿಡ್ಜ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕು ರೈತಸಂಘದ ಕಾರ್ಯಕರ್ತರು ಎಪಿಎಂಸಿ ಅಧ್ಯಕ್ಷ ಜಗದೀಶ ಕಣಗಲಬಾವಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ಚಿಕ್ಕಬಾಸೂರ ಗ್ರಾಮ ತಾಲೂಕಿನಲ್ಲಿಯೇ ಪ್ರಮುಖ ವ್ಯಾಪಾರಿ ಕೇಂದ್ರವಾಗಿದೆಯಲ್ಲದೇ ಗ್ರಾಮದ ಸುತ್ತಲ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳಾದ ಹತ್ತಿ, ಗೋವಿನಜೋಳ, ಮೆಣಸಿನಕಾಯಿ, ಅಡಕೆ, ಬಾಳೆ, ಬತ್ತ, ಕಬ್ಬು, ಶುಂಠಿ, ತರಕಾರಿ ಸೇರಿದಂತೆ ಪ್ರಮುಖ ಬೀಜೋತ್ಪಾದನೆ ಕೇಂದ್ರವಾಗಿದೆ ಎಂದರು.
50 ಮೆಟ್ರಿಕ್ ಟನ್ ಸಾಮರ್ಥ್ಯದ ಯಂತ್ರ ಕಲ್ಪಿಸಿ: ಗ್ರಾಮವು ತಾಲೂಕು ಕೇಂದ್ರ ಸ್ಥಳದಿಂದ ಸುಮಾರು 29 ಕಿ.ಮೀ. ಅಂತರದಲ್ಲಿದ್ದು ಯಾವುದೇ ವೇಬ್ರಿಡ್ಜ್ ಸೌಲಭ್ಯಗಳಿಲ್ಲ. ಬೆಳೆದಿರುವ ಬೆಳೆ ತೂಕಕ್ಕಾಗಿ ಬ್ಯಾಡಗಿ, ಹಾವೇರಿ ಪಟ್ಟಣಗಳನ್ನೇ ನೆಚ್ಚಬೇಕಾಗಿದೆ. ಇದರಿಂದ ವ್ಯಾಪಾರಸ್ಥರು ಸೇರಿದಂತೆ ರೈತರು ತೂಕಕ್ಕಾಗಿ ದಿನವಿಡೀ ಅಲೆಯಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಕೃಷಿಕರ ಅನುಕೂಲಕ್ಕಾಗಿ ಕೂಡಲೇ ಎಪಿಎಂಸಿಯಿಂದ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಆವರಣದಲ್ಲಿ 50 ಮೆಟ್ರಿಕ್ ಟನ್ ಸಾಮರ್ಥ್ಯದ ಸ್ವಯಂಚಾಲಿತ ಎಲೆಕ್ಟ್ರಾನಿಕ್ ವೇಬ್ರಿಡ್ಜ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು.
ಉಜ್ಜಪ್ಪ ಚಿಕ್ಕಳ್ಳಿ ಮಾತನಾಡಿ, ಚಿಕ್ಕಬಾಸೂರ ಗ್ರಾಮವು ಹಾನಗಲ್ಲ ಮತ್ತು ಹಿರೆಕೇರೂರು ತಾಲೂಕಿನ ಬಹಳಷ್ಟು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಎರಡೂ ತಾಲೂಕಿನ ರೈತರು ಹಾಗೂ ವ್ಯಾಪಾರಸ್ಥರು ಒಂದಿಲ್ಲೊಂದು ಕಾರಣಗಳಿಗೆ ಚಿಕ್ಕಬಾಸೂರ ಗ್ರಾಮವನ್ನೇ ಅವಲಂಬಿಸಿದ್ದಾರೆ. ಜಿಲ್ಲಾ ಕೇಂದ್ರ ಹಾವೇರಿಯಿಂದ ಬ್ಯಾಡಗಿ, ಹಾನಗಲ್ಲ ಹಾಗೂ ಹಿರೇಕೆರೂರು ತಾಲೂಕುಗಳಿಗೆ ಸಂಪರ್ಕಿಸುವ ಜಿಲ್ಲಾ ಮಖ್ಯರಸ್ತೆ ಗ್ರಾಮದಲ್ಲಿಯೇ ಹಾಯ್ದು ಹೋಗಿದ್ದು, ಬೀರೂರು-ಸಮ್ಮಸಗಿ ಮತ್ತು ರಾಜ್ಯ ಹೆದ್ದಾರಿಯೂ ಗ್ರಾಮದಿಂದ ಕೇವಲ 3 ಕಿ.ಮೀ. ಅಂತರದಲ್ಲಿದೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ವೇಬ್ರಿಡ್ಜ್‌ನ ಅವಶ್ಯಕತೆಯಿದೆ ಎಂದರು.
ಈಶ್ವರ ಅಜಗೊಂಡ್ರ ಮಾತನಾಡಿ, ಕಟಾವಾದ ಕಬ್ಬು ಕಾರ್ಖಾನೆ ತಲುಪುವಷ್ಟರಲ್ಲಿ ಸುಮಾರು 5ರಿಂದ 6 ಕ್ವಿಂಟಲ್ ತೂಕ ಕಡಿಮೆಯಾಗಲಿದೆ. ಲೋಡ್ ಮಾಡಿದ ಕೂಡಲೇ ತೂಕ ಮಾಡಿಸಿದಲ್ಲಿ ರೈತ ನಷ್ಟದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಆದರೆ, ವೇಬ್ರಿಡ್ಜ್ ಇಲ್ಲದೇ ಕಬ್ಬು ಬೆಳೆಗಾರರು ನಷ್ಟ ಅನುಭವಿಸಬೇಕಾಗಿದೆ. ಇದರಂತೆ ಬಹುತೇಕ ಹಸಿ ಪದಾರ್ಥಗಳ ನಷ್ಟದಿಂದ ರೈತರ ಗೋಳು ಹೊರತಾಗಿಲ್ಲ ಎಂದರು.
ಅಧ್ಯಕ್ಷ ಜಗದೀಶ ಕಣಗಲಬಾವಿ ಮನವಿ ಸ್ವೀಕರಿಸಿ ಮಾತನಾಡಿ, ರೈತರ ಹಿತಾಸಕ್ತಿ ಕಾಪಾಡಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬದ್ಧವಾಗಿದ್ದು, ಮನವಿ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಎಪಿಎಂಸಿ ಆಡಳಿತ ಮಂಡಳಿ ರೈತರ ಮನವಿಗೆ ಸ್ಪಂದಿಸಿ ಶೀಘ್ರ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ 50 ಮೆಟ್ರಿಕ್ ಟನ್ ಸಾಮರ್ಥ್ಯದ ಸ್ವಯಂಚಾಲಿತ ಎಲೆಕ್ಟ್ರಾನಿಕ್ ವೇಬ್ರಿಡ್ಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು.
ರೈತರಾದ ಶಿದ್ರಾಮಪ್ಪ ಚನ್ನಗೌಡ್ರ, ಬಸವರಾಜ ಬಾಳಂಬೀಡ, ಫಕ್ಕೀರೇಶ ಅಜಗೊಂಡರ, ಶಿವನಗೌಡ್ರ ಏಳುಕೊಳಗದ, ಸಿದ್ರಾಮಯ್ಯ ಹಿರೇಮಠ, ನಾಗರಾಜ ಹರಟೇರ, ಶಿದ್ರಾಮಣ್ಣ ಪುಣೇದಹಳ್ಳಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.