ಹಾವೇರಿ

ಜೀತದಾಳುಗಳ ಶೋಷಣೆಗೆ ಖಂಡನೆ

Published On :

ಶಿಗ್ಗಾಂವಿ: ಒಡಿಶಾದಲ್ಲಿ ಡಿ. 15ರಂದು ಇಬ್ಬರು ದಲಿತ ಜೀತದಾಳುಗಳ ಕೈ ಕತ್ತರಿಸಿ, ಅವರ ಕುಟುಂಬಗಳಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಖಂಡಿಸಿ, ತಹಸೀಲ್ದಾರ್ ಎಸ್.ಎ. ಚೌಗುಲೆ ಮುಖಾಂತರ ರಾಜ್ಯ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಹಾವೇರಿಯಲ್ಲಿ 257 ಸೇರಿ, ರಾಜ್ಯದಲ್ಲಿ ಒಟ್ಟು 7646 ಮಂದಿ ಇಂದಿಗೂ ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಜಿತದಾಳುಗಳ ಬಿಡುಗಡೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಅವರ ಬಿಡುಗಡೆ ಹಾಗೂ ಪುನರ್ವಸತಿಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಒಡಿಶಾ ಘಟನೆ ಇಲ್ಲಿ ಮರುಕಳಿಸುವ ಮುನ್ನ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಜೀವಿಕ ಜಿಲ್ಲಾ ಸಂಚಾಲಕ ತಿಪ್ಪಣ್ಣ ಎಸ್. ಕ್ಯಾಲಕೊಂಡ, ತಾಲೂಕು ಸಂಚಾಲಕ ಸುರೇಶ ಹರಿಜನ, ಹನುಮಂತಪ್ಪ ಗುಳೇದ, ಎಲ್ಲಪ್ಪ ಎಚ್. ಹರಿಜನ ಇದ್ದರು.

ಜಾನಪದ ಕಲೆ, ಸಾಹಿತ್ಯಗಳು ಸಮಾಜದ ಉಸಿರು: ಅಡಿವೆಪ್ಪ
ಬ್ಯಾಡಗಿ: ಜಾನಪದ ಕಲೆ ಹಾಗೂ ಸಾಹಿತ್ಯ ಸ್ವಸ್ಥ ಸಮಾಜದ ಉಸಿರು. ಅವುಗಳನ್ನು ಮರೆಯುತ್ತಿರುವ ಸಮಾಜ ಸಾಂಸ್ಕೃತಿಕ ನೆಲೆಗಟ್ಟನ್ನು ಕಳೆದುಕೊಳ್ಳುತ್ತಿದೆ ಎಂದು ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಡಿವೆಪ್ಪ ಕುರಿಯವರ ವಿಷಾದಿಸಿದರು.
ಸ್ಥಳೀಯ ಎಸ್‌ಎಸ್‌ಪಿಎನ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ರಸಗ್ರಹಣ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಸುಭದ್ರ ಸಮಾಜಕ್ಕೆ ಜಾನಪದ ನೆಲೆ ಉತ್ತಮ ಅಡಿಪಾಯ. ಇತ್ತೀಚೆಗೆ ಜಾನಪದ ಕಲೆ ಹಾಗೂ ಸಾಹಿತ್ಯ ತನ್ನ ನೈಜತೆ ಕಳೆದುಕೊಳ್ಳುತ್ತಿದೆ. ದೊಡ್ಡಾಟ, ಸಣ್ಣಾಟ, ಪಾರಿಜಾತ, ಬೀಸುವ, ಕುಟ್ಟುವ, ಬೀಗರ, ಹಂತೀ, ಗೀಗೀ ಪದಗಳು ಆಧುನಿಕತೆಯ ಬಿರುಗಾಳಿಗೆ ಸಿಲುಕಿ ನಲಗುತ್ತಿವೆ. ಇವುಗಳನ್ನು ಉಳಿಸಿಕೊಳ್ಳುವುದು ಅಗತ್ಯ. ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಈ ನಿಟ್ಟಿನಲ್ಲಿ ಸರ್ಕಾರ ಮುಂದಡಿ ಇಟ್ಟಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ, ಜನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಅವರಿಂದ ಮಕ್ಕಳಿಗೆ ತರಬೇತಿಯನ್ನು ಕೊಡಿಸಿದರೆ, ಜನಪದ ಕಲೆಗಳು ಜೀವಂತವಾಗಿರಲು ಸಾಧ್ಯ, ವಯೋವೃದ್ಧ ಕಲಾವಿದರಿಂದ ಜಾನಪದ ಸಾಹಿತ್ಯವನ್ನು ಸಂಗ್ರಹಿಸುವ ಕಾರ್ಯವಾಗಬೇಕಿದೆ ಎಂದರು.
ಅಧ್ಯಕ್ಷತೆಯನ್ನು ಉಪಪ್ರಾಚಾರ್ಯ ಎಂ.ಕೆ. ಹೊಸಮನಿ ವಹಿಸಿದ್ದರು, ರೇವಣೆಪ್ಪ ಹಾವನೂರ, ಬಿ.ಎಫ್. ದೊಡ್ಮನಿ, ರೇಣುಕಾ ಮರದ, ಗೌರಮ್ಮ ಅಂಕಲಕೋಟಿ, ಎಚ್.ಜಿ. ಸುಮಂಗಲಾ, ಡಿ.ಎನ್. ಸವಿತಾ, ಕವಿತಾ ಹೊರಟ್ಟಿ, ಸುಭಾಸ್ ಎಲಿ, ವೆಂಕಟೇಶ ಇದ್ದರು. ಪಿ.ಎಫ್. ಕರಿಯಣ್ಣನವರ ಸ್ವಾಗತಿಸಿದರು. ವಿ.ಬಿ. ಕುರುಬರ ವಂದಿಸಿದರು. ಅನ್ನಪೂರ್ಣಾ ಕರ್ಜಗಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.