ಹಾವೇರಿ

ಗ್ಯಾಸ್ ತುಟ್ಟಿ: ನೀರೆಯರ ಆಕ್ರೋಶ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 8
ಅಡುಗೆ ಅನಿಲ ಸಿಲಿಂಡರ್ ಹಾಗೂ ಆಟೋ ಗ್ಯಾಸ್ ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ಮಾಡಲಾಯಿತು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಮಹಿಳೆಯರು ನಗರದ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಅಲ್ಲೇ ಕಟ್ಟಿಗೆ ಒಲೆ ಇಟ್ಟು ಅಡುಗೆ ತಯಾರಿಸಿದರು. ಪುರಸಿದ್ದೇಶ್ವರ ದೇವಸ್ಥಾನ ಬಳಿಯಿಂದ ಹೊರಟ ಮೆರವಣಿಗೆ ಎಂಜಿ ರಸ್ತೆ ಮೂಲಕ ಸಿದ್ದಪ್ಪ ವೃತ್ತದ ವರೆಗೆ ನಡೆಯಿತು. ಗ್ಯಾಸ್ ಸಿಲಿಂಡರ್ ಅನ್ನು ಬೈಸಿಕಲ್ ಮೇಲಿಟ್ಟು ಮೆರವಣಿಗೆ ಮಾಡಲಾಯಿತು. ಮೂವರು ಮಹಿಳೆಯರು ಕಣ್ಣು, ಬಾಯಿ, ಕಿವಿಗೆ ಬಟ್ಟೆ ಕಟ್ಟಿಕೊಂಡು ಕೇಂದ್ರ ಸರ್ಕಾರದ ಕಾರ್ಯವೈಖರಿ ಟೀಕಿಸಿದರು.
ಹೊಟ್ಟೆಯ ಮೇಲೆ ಬರೆ: ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ಕರಬಸಮ್ಮ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ಮಹಿಳಾ ಹಾಗೂ ಯುವ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಡುಗೆ ಅನಿಲ ದರದಲ್ಲಿ ರು. 220 ಏರಿಕೆಯಾಗಿದ್ದು ಹಾಗೂ ಆಟೋ ಗ್ಯಾಸ್ ದರದಲ್ಲಿ ಕೆಜಿಗೆ ರು. 11.30 ಏರಿಕೆಯಾಗಿದೆ. ಬಡ ಹಾಗೂ ಮಧ್ಯಮ ವರ್ಗದವರ ಹೊಟ್ಟೆಯ ಮೇಲೆ ಕಾಂಗ್ರೆಸ್ ಸರ್ಕಾರ ಬರೆ ಎಳೆದಿದೆ. ತೈಲ ಕಂಪನಿಗಳ ಮಾಫಿಯಾಕ್ಕೆ ಹೆದರಿ, ಅವರ ಆಮಿಷಕ್ಕೆ ಒಳಗಾಗಿ ಕೇಂದ್ರ ಇಂಧನ ಸಚಿವ ಹಾಗೂ ಪ್ರಧಾನ ಮಂತ್ರಿಯವರು ಬಡ ಹಾಗೂ ಮಧ್ಯಮ ವರ್ಗದವರ ಜೀವನದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ಸಬ್ಸಿಡಿ ಹಣವನ್ನು ನೇರವಾಗಿ ಖಾತೆಗೆ ಸಂದಾಯ ಮಾಡುವ ಕೇಂದ್ರದ ಈ ಉದ್ದೇಶ ಸಾಮಾನ್ಯ ಜನರಿಗೆ ಅರ್ಥವಾಗದಂತೆ ದರ ಹೆಚ್ಚಿಸಿರುವುದು ಹೇಡಿತನ ಎಂದು ಆರೋಪಿಸಿದರು.
ಜನರೇ ಪಾಠ ಕಲಿಸ್ತಾರೆ: ಶಹರ ಘಟಕದ ಅಧ್ಯಕ್ಷೆ ಜ್ಯೋತಿ ಸಾತೇನಹಳ್ಳಿ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಐದು ವರ್ಷಗಳಲ್ಲಿ ಕೇವಲ 3 ಬಾರಿ ಇಂಧನ ಬೆಲೆ ಹೆಚ್ಚಿಸಲಾಗಿತ್ತು. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 30ಕ್ಕಿಂತ ಹೆಚ್ಚು ಬಾರಿ ತೈಲ ಹಾಗೂ ಅನಿಲ ಬೆಲೆಯನ್ನು ಹೆಚ್ಚಿಸಿದೆ. ಜನರೇ ಇವರಿಗೆ ಪಾಠ ಕಲಿಸಲಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಭೋಜರಾಜ ಕರೂದಿ, ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ, ಯುವ ಮೋಚಾ ಅಧ್ಯಕ್ಷ ಪ್ರದೀಪ ಮಳ್ಳೂರ, ವೀರೇಶ ಜಾಲವಾಡಗಿ, ವೆಂಕಟೇಶ ದೈವಜ್ಞ, ಮೌಲಾಲಿ ಪಲ್ಲೇದ, ಸುರೇಶ ಕುರ್ಡೇಕರ, ಗೀತಾ ಜುಜಗಾಂವ, ನಜಮಬಿ ನದಾಫ್, ಶಾಂತಾ ಗುಂಡೇ, ಗ್ರಾಮೀಣ ಘಟಕದ ಅಧ್ಯಕ್ಷೆ ನೀಲಮ್ಮ ಭಜಂತ್ರಿ, ಲಕ್ಷ್ಮವ್ವ ಕುರಿ, ಪ್ರೇಮಮ್ಮ ಹುಲ್ಲೂರ, ದಿಲ್ಶಾದ್ ಪಠಾಣ, ಚಂಬಕ್ಕ, ಸಾವಿತ್ರಿ, ಚನ್ನಬಸಮ್ಮ, ವಿಜಯಲಕ್ಷ್ಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.