ಹಾವೇರಿ

ನಿತ್ಯ ರಸ್ತೆಯಲ್ಲೇ ಸಂತೆ ನಗರಸಭೆಗಿಲ್ಲ ಚಿಂತೆ!

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 9
ಇಕ್ಕಟ್ಟಾದ ಜಾಗ, ರಸ್ತೆ ಅತಿಕ್ರಮಿಸಿಕೊಂಡು ನಡೆಯುತ್ತಿರುವ ತರಕಾರಿ ವ್ಯಾಪಾರ, ಸ್ವಚ್ಛತೆಗೆ ಇಲ್ಲದ ಆದ್ಯತೆ, ಮಳೆ ಬಂದರೆ ನೀರಿನ ಮಧ್ಯೆಯೇ ವಹಿವಾಟು, ಜನರಿಗಿಂತ ಜಾನುವಾರುಗಳ ಸಂಖ್ಯೆಯೇ ಹೆಚ್ಚು, ಕೊಳೆತ ತರಕಾರಿ ಎತ್ತುವವರೂ ಇಲ್ಲದೆ ಗಬ್ಬು ವಾಸನೆ...
ನಿಮ್ಮ ಊಹೆಯಂತೆ ಖಂಡಿತವಾಗಿ ಇದು ಇಲ್ಲಿಯ ತರಕಾರಿ ಮಾರುಕಟ್ಟೆಯ ಸ್ಥಿತಿ. ನಗರಸಭೆಯಿಂದ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಮಾಡಿದ್ದರೂ ಅದನ್ನು ಹರಾಜು ಹಾಕದೇ ಖಾಲಿ ಇಟ್ಟುಕೊಂಡಿದ್ದು ಇದಕ್ಕೆ ಕಾರಣ. ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿ ಅಲ್ಲಿಗೆ ವ್ಯಾಪಾರಸ್ಥರನ್ನು ಸ್ಥಳಾಂತರಿಸದೇ ಇರುವುದರಿಂದ ರಸ್ತೆಬದಿಯಲ್ಲೇ ವಹಿವಾಟು ನಡೆಯುತ್ತಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಸಂತೆ ಮಾಡುವಂತಾಗಿದೆ. ಸಂತೆ ಮಳಿಗೆಗಳು ಒಂದು ಕಡೆ ಖಾಲಿ ಹೊಡೆಯುತ್ತಿದ್ದರೆ, ಇತ್ತ ರಸ್ತೆಗೇ ವ್ಯಾಪಾರ ಬಂದು ಕುಳಿತಿದೆ.
ನಗರಸಭೆ ನಿರ್ಲಕ್ಷ್ಯ
ನಗರಸಭೆ ಲಕ್ಷಾಂತರ ಹಣ ಖರ್ಚು ಮಾಡಿ ನಗರದಲ್ಲಿ ಮಾರುಕಟ್ಟೆ ನಿರ್ಮಿಸಿ ಅದಕ್ಕೆ ಲಾಲ್ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ ಎಂಬ ಹೆಸರಿಟ್ಟಿದೆ. ಪ್ರತಿ ಗುರುವಾರ ಅಲ್ಲಿ ಸಂತೆ ನಡೆಯುತ್ತದೆ. ನಿತ್ಯವೂ ಅದೇ ರಸ್ತೆಯ ಪಕ್ಕದಲ್ಲಿ ತರಕಾರಿ ವ್ಯಾಪಾರ ಮಾಮೂಲಾಗಿ ನಡೆದಿರುತ್ತದೆ. ಆದರೆ ರೈತ ಸಂತೆ ಎಂದು ನಗರಸಭೆ ಲಕ್ಷಾಂತರ ಖರ್ಚು ಮಾಡಿ ತರಕಾರಿ ವ್ಯಾಪಾರಕ್ಕೆ ಕಟ್ಟೆ, ಇಡಲು ಸ್ಥಳ, ಸಾರ್ವಜನಿಕರಿಗೆ ಸಂತೆ ಮಾಡಲು ಅನುಕೂಲವಾಗುವಂತೆ ಸಂತೆ ಕಟ್ಟೆ ನಿರ್ಮಾಣ ಮಾಡಿದೆ. ಆದರೆ 2002ರ ಬಳಿಕ ಮಾರುಕಟ್ಟೆ ಹರಾಜು ಪ್ರಕ್ರಿಯೆಯೇ ನಡೆದಿಲ್ಲ. 12 ವರ್ಷಗಳಿಂದ ಹರಾಜು ಮಾಡದೇ ಇರುವುದು ನಗರಸಭೆ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ಆದಾಯಕ್ಕೂ ಕೊಕ್ಕೆ ಬೀಳುವ ಜತೆಗೆ, ರಸ್ತೆ ಮಧ್ಯದಲ್ಲೇ ಸಂತೆ ನಡೆಯಲು ನಗರಸಭೆಯೇ ಬೆಂಬಲ ನೀಡಿದಂತಾಗಿದೆ.
ರಸ್ತೆಯೇ ಮಾರುಕಟ್ಟೆ
ತರಕಾರಿ ಮಾರುಕಟ್ಟೆಗೆ ವ್ಯಾಪಾರಸ್ಥರನ್ನು ಸ್ಥಳಾಂತರಿಸದ ಕಾರಣ ವ್ಯಾಪಾರ ರಸ್ತೆಯಲ್ಲೇ ನಡೆಯುತ್ತಿದೆ. ರಸ್ತೆ ಪಕ್ಕದಲ್ಲಿ ಅಂಗಡಿಕಾರರು ತಾಡಪತ್ರೆ ಹಾಕಿಕೊಂಡು ಕಾಯಿಪಲ್ಲೆ ಮಾರಾಟ ಮಾಡುತ್ತಿದ್ದು, ದಿನದಿಂದ ದಿನಕ್ಕೆ ರಸ್ತೆ ಇಕ್ಕಟ್ಟಾಗುತ್ತಿದೆ. ನಗರಸಭೆ ಕಟ್ಟುನಿಟ್ಟು ಮಾಡದ್ದರಿಂದ ಮಾರುಕಟ್ಟೆ ಪ್ರದೇಶ ಬಿಟ್ಟು ರಸ್ತೆಬದಿಯೇ ವ್ಯಾಪಾರಕ್ಕೆ ಅನುಕೂಲವಾಗಿದೆ. ಮಾರುಕಟ್ಟೆಯಲ್ಲಿ ಕುಳಿತರೆ ಯಾರೂ ಜನ ಬರುವುದಿಲ್ಲ ಎಂಬುದು ವ್ಯಾಪಾರಸ್ಥರ ವಾದ. ಎಲ್ಲ ವ್ಯಾಪಾರಸ್ಥರನ್ನು ಮಾರುಕಟ್ಟೆಗೆ ಸ್ಥಳಾಂತರಿಸಿದರೆ ಮಾತ್ರ ಎಲ್ಲರಿಗೂ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಮೂಗು ಮುಚ್ಚಿಕೊಂಡೇ ಹೋಗಬೇಕಾಗುತ್ತದೆ.
ಮಳೆಗಾಲದಲ್ಲಿ ಕೆರೆ
ರಸ್ತೆ ಮಧ್ಯದಲ್ಲೇ ತರಕಾರಿ ಮಾರುಕಟ್ಟೆ ನಡೆಯುವುದರಿಂದ ಮಳೆಗಾಲದಲ್ಲಿ ನೀರು ತುಂಬಿ ಮಾರಕಟ್ಟೆ ಪ್ರವೇಶಿಸುವುದೇ ದುಸ್ತರವಾಗುತ್ತದೆ. ಅಂಗಡಿಗಳನ್ನು ಲೀಸ್ ಮೇಲೂ ಕೊಡದ್ದರಿಂದ ವರ್ತಕರೂ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಹಾಗೂ ಕಸಕಡ್ಡಿಯಿಂದ ಚರಂಡಿ ಮುಚ್ಚಿರುವುದರಿಂದ ಮಳೆ ನೀರು ಹರಿದು ಹೋಗದೆ ರಸ್ತೆಯಲ್ಲೇ ಹರಿಯುತ್ತದೆ. ಗ್ರಾಹಕ ಪರದಾಡುವಂತಾಗಿದೆ. ಎಲ್ಲ ಬಣ್ಣ ಮಸಿ ನುಂಗಿತು ಎಂಬಂತೆ ನಗರಸಭೆ ನಗರದ ಸೌಂದರ್ಯಕ್ಕೆ ಶ್ರಮಿಸುತ್ತಿದ್ದರೆ ಇಲ್ಲಿಯ ಮಾರುಕಟ್ಟೆ ಕೊಳಚೆಯಂತಾಗಿ ಹಂದಿಗಳ ತಾಣವಾಗುತ್ತಿದೆ. ರಸ್ತೆ ಮೇಲೆಯೇ ವ್ಯಾಪಾರ ನಡೆಯುತ್ತಿರುವುದರಿಂದ ಸಾರ್ವಜನಿಕ ಸಂಚಾರಕ್ಕೂ ವ್ಯತ್ಯಯವಾಗುತ್ತಿದೆ.

ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.