ಹಾವೇರಿ

ನೌಕರರ ಸಂಘದಲ್ಲಿ ಹಣ ದುರುಪಯೋಗ

Published On :

ಹಾನಗಲ್ಲ: ರಾಜ್ಯ ಸರ್ಕಾರಿ ನೌಕರರ ಪತ್ತಿನ ಸಹಕಾರಿ ಸಂಘದ ಹಾನಗಲ್ಲ ತಾಲೂಕು ಘಟಕದ ರು. 52 ಲಕ್ಷ ದುರುಪಯೋಗದ ಆಪಾದನೆಗೆ ಗುರಿಯಾಗಿದ್ದು, ಸಂಘದ ಕಾರ್ಯದರ್ಶಿ ತಲೆ ಮರೆಸಿಕೊಂಡಿದ್ದು ಒಂದಾದರೆ, ದುರುಪಯೋಗ ನಡೆದ ಅವಧಿಯ ಸಂಘದ ಅಧ್ಯಕ್ಷ ಇದು ತನಗೆ ಸಂಬಂಧವಿಲ್ಲವೆಂದು ನಿರಾಕರಿಸಿರುವ ಸಂಗತಿ ಠೇವಣಿದಾರರ ಸಂಕಟಕ್ಕೆ ಕಾರಣವಾಗಿದೆ ಎಂದು ಸಂಘದ ಹಾಲಿ ಅಧ್ಯಕ್ಷ ಡಿ. ಚಂದ್ರಶೇಖರ್ ತಿಳಿಸಿದರು.
ಶುಕ್ರವಾರ ಹಾನಗಲ್ಲಿನ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಅವರು, 13 ವರ್ಷಗಳ ಆಚೆ, ಸರ್ಕಾರಿ ನೌಕರರ ಹಿತಕ್ಕಾಗಿ ಕಟ್ಟಿ ಬೆಳೆಸಿದ ಹಾನಗಲ್ಲ ತಾಲೂಕು ರಾಜ್ಯ ಸರ್ಕಾರಿ ನೌಕರರ ಪತ್ತಿನ ಸಹಕಾರಿ ಸಂಘ, 2003ರಿಂದ 2012ರ ವರೆಗಿನ ಅವಧಿಯಲ್ಲಿ ರು. 52 ಲಕ್ಷ ದುರುಪಯೋಗ ನಡೆಸಿ ಜಾಣ ಕುರುಡು ನೀತಿ ಅನುಸರಿಸಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ವಿಚಾರಣೆಗಾಗಿ ಮನವಿ ಮಾಡಿದಾಗ ಇಷ್ಟು ದೊಡ್ಡ ಮೊತ್ತದ ಹಣ ದುರುಪಯೋಗ ಬೆಳಕಿಗೆ ಬಂದಿದೆ ಎಂದು ತಿಳಿಸಿದ ಅವರು, ಈ ದುರುಪಯೋಗದ ಅವಧಿಯಲ್ಲಿ ಕಾರ್ಯದರ್ಶಿ ಎಸ್.ಎಂ. ಹಳ್ಳಿಕೊಪ್ಪದಮಠ ಹಾಗೂ ಅಧ್ಯಕ್ಷ ಎಸ್.ಪಿ. ಮುದೇನೂರಮಠ ಈ ದುರುಪಯೋಗದ ನೇರ ಹೊಣೆಗಾರರಾಗಿದ್ದಾರೆ. ಈಗ ಸಂಘದಲ್ಲಿ ಕೇವಲ ರು. 2.5 ಲಕ್ಷ ಮಾತ್ರ ಶಿಲ್ಕು ಇದೆ.  ರು. 4 ಲಕ್ಷ ಸಾಲಗಾರರಿಂದ ಬರಬೇಕಾದ ಹಣವಿದೆ.
ಈ ಅವಧಿಯಲ್ಲಿ 26 ಸದಸ್ಯರ ರು. 20 ಲಕ್ಷ ಮುದ್ಧತಿ ಠೇವು, ನಾಲ್ಕು ಜನರ ರು. 13 ಸಾವಿರ ಭಾಗ್ಯಲಕ್ಷ್ಮೀ ಠೇವು, ಇಬ್ಬರ ರು. 63 ಸಾವಿರ ನಿರಂತರ ಠೇವು, 38 ಜನರ ರು. 4.70 ಲಕ್ಷ ಸಾಲ ಸೇರಿದಂತೆ ವಿವಿಧ ಖಾತೆಗಳಿಂದ ರು. 52 ಲಕ್ಷ ದುರುಪಯೋಗವಾಗಿದೆ. ದುರುಪಯೋಗದಲ್ಲಿ ಆಗಿನ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ನಿರ್ದೇಶಕರ ಗಮನಕ್ಕೆ ಆಡಳಿತದ ವ್ಯವಹಾರಗಳನ್ನು ತರದೆ ತಾವು ಹಣ ದುರುಪಯೋಗಕ್ಕೆ ಮುಂದಾಗಿದ್ದಾರೆ. ಈಗ ಈ ವ್ಯವಹಾರ ತಮಗೆ ಸಂಬಂಧವಿಲ್ಲದ್ದು ಎಂದು ಎಸ್.ಪಿ. ಮುದೇನೂರಮಠ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಠೇವಣಿ ಇಟ್ಟವರ ಹಣಕ್ಕೆ ಸರಿಯಾದ ದಾಖಲೆಗಳನ್ನು ನೀಡಿದ್ದಾರೆ. ಆದರೆ, ಕೆಲವೇ ದಿನಗಳಲ್ಲಿ ಇಟ್ಟ ಠೇವಣಿಗಳನ್ನು ಖೊಟ್ಟಿ ಸಹಿ ಹಾಗೂ ಅವ್ಯವಹಾರದ ಮೂಲಕ ಹಣವನ್ನು ಬ್ಯಾಂಕಿನಿಂದ ತೆಗೆದು ದುರುಪಯೋಗಪಡಿಸಿಕೊಂಡಿದ್ದಾರೆ. ಇನ್ನು ಕೆಲವರು ಇಟ್ಟ ಠೇವಣಿಗೆ ದಾಖಲೆ ನೀಡಿದರೂ ಅದು ಬ್ಯಾಂಕಿನ ವ್ಯವಹಾರದಲ್ಲಿ ನಮೂದಾಗಿರುವುದಿಲ್ಲ. ಇದು ಮೇಲ್ನೋಟಕ್ಕೆ ಹಣ ದುರುಪಯೋಗ ಎಂಬುದನ್ನು ಅರಿತು, ಒಬ್ಬ ನಿರ್ದೇಶಕನಾಗಿ ಅಂದು ಪ್ರಶ್ನಿಸಿದಾಗ ಅಂದಿನ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳು ಸಕಾರಾತ್ಮಕವಾಗಿ ಮಾಹಿತಿ ನೀಡದ ಕಾರಣ ಅಂದೆ ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ಹಾಲಿ ಅಧ್ಯಕ್ಷ ಡಿ. ಚಂದ್ರಶೇಖರ್ ತಿಳಿಸಿದರು.
60 ಜನರ ಠೇವಣಿ ಹಣ ವಾಪಾಸು ನೀಡುವುದು ಅಂದಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳದ್ದೇ ಜವಾಬ್ದಾರಿ ಎಂದು ಅವರು ಕಟ್ಟುನಿಟ್ಟಾಗಿ ತಿಳಿಸಿದರು. ಇದಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ಈ ದುರುಪಯೋಗಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ನ್ಯಾಯಾಲಯ ಮೋರೆ ಹೋಗಿದ್ದಾರೆ. ಅಚ್ಚರಿ ಸಂಗತಿ ಎಂದರೆ ಬ್ಯಾಂಕಿನಲ್ಲಿ ಯಾವುದೇ ಠೇವಣಿ ಇಡಲಾರದ ಅಥವಾ ಖಾತೆಯಲ್ಲಿ ಹಣ ಇಡಲಾರದ ವ್ಯಕ್ತಿಯೊಬ್ಬರಿಗೆ 2.3 ಲಕ್ಷ ಬೆನಾಮಿಯಾಗಿ ನೀಡಿರುವುದು ಬ್ಯಾಂಕಿನ ಅವ್ಯವಹಾರದ ಸ್ಪಷ್ಟ ನಿದರ್ಶನವಾಗಿದೆ ಎಂದು ತಿಳಿಸಿದರು.
ಇದು ಸರ್ಕಾರಿ ನೌಕರರಲ್ಲದೆ ಕೃಷಿಕರು, ವ್ಯಾಪಾರಸ್ಥರು, ನಿವೃತ್ತ ನೌಕರರು ಈ ಬ್ಯಾಂಕ್ ಮೇಲಿನ ವಿಶ್ವಾಸದಿಂದ ತೊಡಗಿಸಿದ ಹಣ ದುರುಪಯೋಗಕ್ಕೆ ಅವಕಾಶವಾಗಿರುವುದು ವಿಷಾದದ ಸಂಗತಿ. ಇದಕ್ಕೆ ಕಾನೂನು ಕ್ರಮ ಜರುಗಿಸಿ ಸಂಬಂಧಪಟ್ಟವರ ಹಣ ಮರು ಪಾವತಿವರೆಗೂ ಹೋರಾಡಲು ಸಿದ್ಧ ಎಂದು ಚಂದ್ರಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಡಾ. ಆನಂದ ನಾಯ್ಕ, ಶಕುಂತಲಾ ಮೊರಬ, ಎಲ್.ಪಿ. ಭಜಂತ್ರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.