ಕೆಜೆಪಿ ವಿಲೀನ: ಬಿ.ಸಿ. ಪಾಟೀಲಗೆ ಶಾಸಕ ಯು.ಬಿ. ಬಣಕಾರ ತಿರುಗೇಟು
ಹಿರೇಕೆರೂರು: ಬಿಜೆಪಿಯಲ್ಲಿ ಕೆಜೆಪಿ ವಿಲೀನವಾಗಿ ಜನತೆಗೆ ಅನ್ಯಾಯ ಮಾಡಿದ್ದಾರೆ ಎಂಬ ಮಾಜಿ ಶಾಸಕ ಬಿ.ಸಿ. ಪಾಟೀಲರ ಹೇಳಿಕೆಗೆ ಹಾಲಿ ಶಾಸಕ ಯು.ಬಿ. ಬಣಕಾರ ತಿರುಗೇಟು ನೀಡಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಣಕಾರ, ನಮ್ಮ ನಾಯಕ ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ಮರಳಿದ್ದರಿಂದ ನಾವೂ ಬಿಜೆಪಿ ಸೇರಿದೆವು. ಇದರಿಂದ ಬಿ.ಸಿ. ಪಾಟೀಲರು ಹತಾಶರಾಗಿದ್ದಾರೆ. ಕಳೆದ ಬಾರಿ ಬಿಜೆಪಿ-ಕೆಜೆಪಿ ಮತ ವಿಭಜನೆಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ, ಎರಡು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿ.ಸಿ. ಪಾಟೀಲರು ಸೋತರು. ಬಿಜೆಪಿ, ಕೆಜೆಪಿ ವಿಲೀನವಾಗಿದ್ದರಿಂದ ಅವರ ಆಟ ಏನೂ ನಡೆಯುವುದಿಲ್ಲ ಎಂದರು.
ನಾವು ಪಕ್ಷಾಂತರ ಮಾಡಿದ್ದೇವೆಂದು ಹೇಳುವ ಬಿ.ಸಿ. ಪಾಟೀಲರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ. 2008ರಲ್ಲಿ ತಮಗೆ ಬಿಜೆಪಿ ಟಿಕೆಟ್ ಸಿಗದಂತೆ ಕುತಂತ್ರ ಮಾಡಿ, ಪಕ್ಷೇತರರಾಗಿ ಸ್ಪರ್ಧಿಸುವಂತೆ ಮಾಡಿದರು.
ಸಿಗದೆ ಅವರು ಪಕ್ಷೇತರರಾಗಿ ಕಣಕ್ಕೆ ಇಳಿಯಲಿಲ್ಲವೇ? ಆಗ ತಾನು ಬಿಜೆಪಿಯಿಂದಲೇ ಸ್ಪರ್ಧಿಸಿದ್ದರೆ ಬಿ.ಸಿ. ಪಾಟೀಲರು ಗೆಲ್ಲುತ್ತಿದ್ದರೇ? ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮಾಡುವ ಉದ್ದೇಶದಿಂದ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಮಾಡಲಾಗಿದೆ. ಈ ನಿರ್ಧಾರವನ್ನು ತಾಲೂಕಿನ ಜನತೆಯೂ ಬೆಂಬಲಿಸಿದ್ದಾರೆ. ಬಿ.ಸಿ. ಪಾಟೀಲರಿಗೆ ನನ್ನ ರಾಜಿನಾಮೆ ಕೇಳುವ ಹಕ್ಕಿಲ್ಲ ಎಂದು ಬಣಕಾರ ಚಾಟಿ ಬೀಸಿದರು.
ಸ್ಥಳೀಯ ಸಂಸ್ಥೆಗಳು, ಸಂಘ-ಸಂಸ್ಥೆಗಳ ಚುನಾವಣೆಗಳಲ್ಲೂ ನಮ್ಮ ತಾಕತ್ತೇನು ಎಂದು ತೋರಿಸಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಬಿ.ಸಿ. ಪಾಟೀಲರು ಕಾಂಗ್ರೆಸ್ನಿಂದ ಸ್ಪರ್ಧಿಸಿದರೆ, ಬಿಜೆಪಿ ಅಭ್ಯರ್ಥಿಯಾಗಿ ತಾವು ಕಣಕ್ಕಿಳಿದು, ಸೋಲಿನ ರುಚಿ ತೋರಿಸುವುದಾಗಿ ಸವಾಲು ಹಾಕಿದ್ದಾರೆ.
ಜಿಪಂ ಸದಸ್ಯರಾದ ಬಸಮ್ಮ ಅಬಲೂರು, ಸುಜಾತಾ ಕೊಟಗಿಮನಿ, ತಾಪಂ ಸದಸ್ಯ ಬಸವನಗೌಡ ಕಳ್ಳೇರ, ಪಪಂ ಉಪಾಧ್ಯಕ್ಷ ಮಹೇಂದ್ರ ಬಡಳ್ಳಿ, ಸದಸ್ಯರಾದ ಶಿವು ತಿಪ್ಪಶೆಟ್ಟಿ, ರವಿ ಪುಟ್ಟಪ್ಪಗೌಡ್ರ, ಮುಜೀಬ ರಿಕಾರ್ಟಿ, ಮಮತಾ ಮಳವಳ್ಳಿ, ರತ್ನಾ ತಿಪ್ಪಣ್ಣನವರ, ಕಾರ್ಯಕರ್ತರಾದ ನಿಂಗಪ್ಪ ದಂಡಗಿಹಳ್ಳಿ, ಪ್ರಭು ಮಳವಳ್ಳಿ, ರಾಮು, ಮಳಿಮಠ ಸ್ವಾಮಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

