ಹಾವೇರಿ

ಪಕ್ಷ ಸೂಚಿಸಿದರೆ ಹಾವೇರಿಯಿಂದ ರಾಹುಲ್ ಕಣಕ್ಕೆ: ಶ್ರೀನಿವಾಸ ಮಾನೆ

Published On :

ಬ್ಯಾಡಗಿ: ಪಕ್ಷ ಸೂಚಿಸಿದರೆ ರಾಹುಲ್ ಗಾಂಧಿಯವರು ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 9 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ 8ರಲ್ಲಿ ಕಾಂಗ್ರೆಸ್ ಶಾಸಕರೇ ಆಯ್ಕೆಯಾಗಿದ್ದಾರೆ. ಶೇ. 39ರಷ್ಟು ಮತ ಕಾಂಗ್ರೆಸ್‌ಗೆ ಬಂದಿದೆ. ರಾಹುಲ್ ಗಾಂಧಿ ಹಾವೇರಿ ಕ್ಷೇತ್ರದಿಂದ ಕಣಕ್ಕಿಳಿದರೂ ಆಶ್ಚರ್ಯವಿಲ್ಲ ಎಂದರು.
ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದಾರೆಯೇ ಹೊರತು, ಜೆಡಿಎಸ್ ಹಾಗೂ ಬಿಜೆಪಿಯ ತಪ್ಪಿನಿಂದಲ್ಲ ಎಂದರು.
ಆಕಸ್ಮಿಕ ಮುಖ್ಯಮಂತ್ರಿ ಅಲ್ಲ
ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಆಕಸ್ಮಿಕ ಮುಖ್ಯಮಂತ್ರಿ ಎಂದಿದ್ದಾರೆ. ಆದರೆ, 20 ತಿಂಗಳಿಗಾದರೂ ಮುಖ್ಯಮಂತ್ರಿಯಾಗಬೇಕೆಂಬ ಮಹದಾಸೆಯಿಂದ ಬಿಜೆಪಿಯೊಂದಿಗೆ ಕೈಜೋಡಿಸಿದರು. ಅಂದು ಜೆಡಿಎಸ್ ಮಾಡಿದ ತಪ್ಪಿನಿಂದ ಆಮೇಲೆ ಬಿಜೆಪಿ ಅಧಿಕಾರಕ್ಕೆ ಬಂತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ವರ್ಗದ ಜನರಿಗೆ ಅನುಕೂಲ ಕಲ್ಪಿಸಿದೆ. ಸ್ವತಃ ಆರು ಬಾರಿ ಬಜೆಟ್ ಮಂಡಿಸಿ ಅನುಭವ ಹೊಂದಿರುವ ಸಿದ್ದರಾಮಯ್ಯ, ರಾಜ್ಯ ಕಂಡ ಅಪೂರ್ವ ಮುಖ್ಯಮಂತ್ರಿ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಶಿಕ್ಷಕರ ಕಾಲ್ಪನಿಕ ವೇತನದ ಕುರಿತು ರಾಜ್ಯದ ಖಜಾನೆ ಹಿತದೃಷ್ಟಿಯಿಂದ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಸಿದ್ಧವಾಗಿತ್ತು. ಆದರೆ, ಸುಪ್ರೀಂ ಕೋರ್ಟ್ ಆದೇಶ ಪಾಲಿಸಲು ಈಗಲೂ ಬದ್ಧವಾಗಿದೆ. ಅನ್ನಭಾಗ್ಯ ಯೋಜನೆ ಒಂದೆರಡು ಪ್ರಕರಣ ಹೊರತುಪಡಿಸಿ ಎಲ್ಲಿಯೂ ವಿಫಲವಾಗಿಲ್ಲ ಎಂದರು.
ವಸತಿ ಅನುದಾನ ಬಾಕಿ: ಆಶ್ರಯ ಯೋಜನೆಯಲ್ಲಿ ಹಿಂದಿನ ಸರ್ಕಾರ ಮಾಡಿದ ಎಡವಟ್ಟಿನಿಂದ ವಸತಿ ಸಚಿವ ಅಂಬರೀಶ್ ಹೈರಾಣಾಗಿದ್ದಾರೆ. ಮನೆ ಹಂಚಿಕೆ ವಿಷಯದಲ್ಲಿ ಆತುರದ ನಿರ್ಧಾರಗಳಿಂದ ರು. 600 ಕೋಟಿ ಸಹಾಯಧನ ಪಾವತಿ ಬಾಕಿ ಉಳಿದಿತ್ತು. ಈಗಿನ ಸರ್ಕಾರಕ್ಕೆ ಇದೇ ದೊಡ್ಡ ತಲೆನೋವಾಗಿದೆ ಎಂದು ಮಾನೆ ವಿವರಿಸಿದರು.
ಬರಪೀಡಿತ ತಾಲೂಕು: ಜಿಲ್ಲೆಯ 6 ತಾಲೂಕುಗಳಲ್ಲಿ ಬರಪೀಡಿತ ಎಂದು ಘೋಷಿಸಲಾಗಿದೆ. ಕಳೆದ ಅಧಿವೇಶನದಲ್ಲಿ ಬ್ಯಾಡಗಿ ತಾಲೂಕನ್ನೂ ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯಿಸಿದ್ದೇನೆ. ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ, ಇನ್ನೊಮ್ಮೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು. ಎಸ್.ಸಿ. ಶಿಡೇನೂರ, ಹುಸೇನ್‌ಸಾಬ್ ದೊಡ್ಮನಿ, ರಮೇಶ್ ಸುತ್ತಕೋಟಿ, ಬಸವರಾಜ ಸವಣೂರ, ರುದ್ರಪ್ಪ ಹೊಂಕಣ, ಮಾರುತಿ ಅಚ್ಚಿಗೇರಿ, ಮಾಲತೇಶ್ ಜಾಧವ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.