ಹಾವೇರಿ: 66ನೇ ದಿನಕ್ಕೆ ಸಂಗೂರು ಸಕ್ಕರೆ ಕಾರ್ಖಾನೆ ಕಾರ್ಮಿಕರ ಧರಣಿ
ಹಾವೇರಿ: ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಮಿಕರು ನಡೆಸುತ್ತಿರುವ ಧರಣಿ 66ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಇದುವರೆಗೆ ಯಾರೊಬ್ಬರೂ ಸಮಸ್ಯೆಗೆ ಸ್ಪಂದಿಸದೇ ಇರುವುದು ಧರಣಿ ನಿರತ ಕಾರ್ಮಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಆಗಮಿಸಿದ್ದರೂ ಕಾರ್ಮಿಕರ ಸಮಸ್ಯೆ ಅರಿವಿಲ್ಲ ಎಂದು ಹೇಳಿರುವುದು ಕಾರ್ಮಿಕರ ಮುನಿಸಿಗೆ ಕಾರಣವಾಗಿದೆ. ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಜಿಲ್ಲಾಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಒಮ್ಮೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದರೂ ಫಲಪ್ರದವಾಗಿಲ್ಲ. ಅಷ್ಟರ ಬಳಿಕ ಈ ಕಡೆಗೆ ಯಾರೂ ಕಣ್ಣು ಹಾಯಿಸಿಲ್ಲ ಎಂದು ಕಾರ್ಮಿಕ ಮಂಜುನಾಥ ಹೆಗ್ಗಣ್ಣನವರ ಆರೋಪಿಸಿದರು.
ವಿನಾಕಾರಣ ಕಾರ್ಖಾನೆ ಕೆಲಸದಿಂದ ತೆಗೆದು ಹಾಕಿರುವ ಮೂವರು ಕಾರ್ಮಿಕರನ್ನು ಮತ್ತೆ ನೇಮಕ ಮಾಡಿಕೊಳ್ಳಬೇಕು. ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾಯಂ, ಹಂಗಾಮಿ ಇನ್ನುಳಿದ ಕಾರ್ಮಿಕರ 2006-07ರ ಮಾಸಿಕ ವೇತನ ರಿಟೇನಿಂಗ್ ಅಲೌನ್ಸ್ ಬಾಕಿ ಇದ್ದು, ಗುತ್ತಿಗೆ ಒಪ್ಪಂದದಂತೆ ಪ್ರಸಕ್ತ ಸಾಲಿನಲ್ಲಿ ಜಮೆಯಾದ ಹಣವನ್ನು ಯಾವುದೇ ವೆಚ್ಚಗಳಿಗೆ ಬಳಕೆ ಮಾಡದೆ ಕೂಡಲೇ ಕಾರ್ಮಿಕರಿಗೆ ಪಾವತಿಸಬೇಕು ಎಂಬ ಬೇಡಿಕೆ ಇಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯಲಾಗಿದೆ. ಆದರ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಸಚಿವರು ಬಂದಿಲ್ಲ: ಕಳೆದ 66 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ ಇದನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾವೇ ಮನವಿ ನೀಡಿದ್ದೆವು. ಆದರೂ ಸಚಿವರು ಗಮನಿಸಿಲ್ಲ. ಈಗ ಮಾಧ್ಯಮದವರು ಕೇಳಿದರೆ ವಿಷಯವೇ ಗೊತ್ತಿಲ್ಲ ಎನ್ನುತ್ತಾರೆ. ಗೊತ್ತಾದ ಮೇಲೂ ಬಂದು ಭೇಟಿಯಾಗಿ ಸಮಸ್ಯೆ ಬಗೆಹರಿಸುವ ಯತ್ನ ಮಾಡಿಲ್ಲ ಎಂದು ಕಾರ್ಮಿಕರು ದೂರಿದರು.
ಧರಣಿಯಲ್ಲಿ ಕಾರ್ಮಿಕರಾದ ಲೋಹಿತ ಹೊಂಕಳದ, ಜಿ.ಟಿ. ಹಾವಣಗಿ, ಮಾರುತಿರಾವ್ ಒಂಟಿಕರ್, ಎಸ್.ಎ. ಪನೋಸಿ, ಬಿ.ಟಿ. ಹೋತಪೇಟೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

