ಮೂರು ವರ್ಷದಲ್ಲಿ ಕರೆಂಟಿಗೆ 29 ಬಲಿ
ಕನ್ನಡಪ್ರಭ ವಾರ್ತೆ, ಹಾವೇರಿ, ಜ.29
ಜಿಲ್ಲೆಯಲ್ಲಿ ವಿದ್ಯುತ್ ಅವಘಡದಿಂದ ಕಳೆದ 3 ವರ್ಷಗಳಲ್ಲಿ 29 ಜನರು ಜೀವ ಕಳೆದುಕೊಂಡಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ಅಳವಡಿಸಿದ ವಿದ್ಯುತ್ ತಂತಿಗಳು ಇಲಾಖೆ ಸಿಬ್ಬಂದಿ ಸೇರಿದಂತೆ ಜಿಲ್ಲೆಯ ಜನ, ಜಾನುವಾರುಗಳನ್ನು ಯಮಲೋಕಕ್ಕೆ ಕಳುಹಿಸುತ್ತಿವೆ.
ವಿದ್ಯುತ್ ಅವಘಡಕ್ಕೆ ಹಳೆಯ ತಂತಿಯೇ ಕಾರಣ ಎಂಬುದನ್ನು ಹೆಸ್ಕಾಂ ಕೂಡ ಒಪ್ಪಿಕೊಳ್ಳುತ್ತಿದೆ. ಸುಮಾರು 25 ವರ್ಷಗಳ ಹಿಂದೆ ಅಳವಡಿಸಿರುವ ವೈರ್ಗಳು ತುಂಡಾಗಿ ಬೀಳುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಹರಿದುಬಿದ್ದ ತಂತಿ ತುಳಿದು ಎಷ್ಟೋ ಜಾನವಾರುಗಳು ಮೃತಪಟ್ಟಿವೆ. ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಅಳವಡಿಸಿರುವ ತಂತಿಗಳನ್ನು ಬದಲಾವಣೆ ಮಾಡದೇ ಎಷ್ಟೋ ವರ್ಷಗಳು ಕಳೆದಿವೆ. ಇದಕ್ಕೆ ಹೆಸ್ಕಾಂ ನಿರ್ಲಕ್ಷ್ಯವೇ ಕಾರಣವಾಗಿದ್ದು, ಜನ ಹಾಗೂ ಜಾನುವಾರುಗಳ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಇಲಾಖೆ ನೀಡುವ ಪರಿಹಾರ ನೋಡಿದರೆ ಜನರ ಪ್ರಾಣಕ್ಕೆ ಸರ್ಕಾರ ನೀಡುವ ಕಿಮ್ಮತ್ತು ಎಷ್ಟು ಎಂಬುದು ಗೊತ್ತಾಗುತ್ತದೆ.
3 ವರ್ಷದಲ್ಲಿ 29 ಜನ ಸಾವು: ಕಳೆದ 2011-12ನೇ ಸಾಲಿನಿಂದ 13-14ನೇ ಸಾಲಿನ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯ 29 ಜನರು ವಿದ್ಯುತ್ ಅವಘಡದಿಂದ ಸತ್ತಿದ್ದಾರೆ. 2011-12ನೇ ಸಾಲಿನಲ್ಲಿ ಹೆಸ್ಕಾಂನ 3 ಜನ ಹಾಗೂ 6 ಜನ ಸಾರ್ವಜನಿಕರು ಮೃತಪಟ್ಟಿದ್ದಾರೆ. 12-13ನೇ ಸಾಲಿನಲ್ಲಿ 10 ಜನ ಹಾಗೂ 13-14ನೇ ಸಾಲಿನಲ್ಲಿ 10 ಜನ ಸೇರಿದಂತೆ 29 ಜನರು ಕರೆಂಟ್ ಶಾಕ್ ತಗಲಿ ಮೃತಪಟ್ಟಿದ್ದಾರೆ. ನಿತ್ಯವೂ ವಿದ್ಯುತ್ ಸಮಸ್ಯೆ ಬಗೆಹರಿಸುವುದರಲ್ಲೇ ನಿರತರಾಗಿರುವ 3 ಲೈನ್ಮನ್ಗಳೂ ಇದರಲ್ಲಿ ಸೇರಿದ್ದಾರೆ.
28 ಜಾನುವಾರು ಬಲಿ: ಜಿಲ್ಲೆಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ಜಾನುವಾರುಗಳ ಸಂಖ್ಯೆ ಲೆಕ್ಕಕ್ಕಿಲ್ಲ. ಆದರೆ, ಹೆಸ್ಕಾಂ ದಾಖಲೆಗಳ ಪ್ರಕಾರ 2011ರಿಂದ ಈಚೆಗಿನ 3 ವರ್ಷಗಳಲ್ಲಿ 28 ಜಾನುವಾರು ಬಲಿಯಾಗಿವೆ. 2011-12ನೇ ಸಾಲಿನಲ್ಲಿ 12, 12-13ನೇ ಸಾಲಿನಲ್ಲಿ 9 ಹಾಗೂ 13-14ನೇ ಸಾಲಿನಲ್ಲಿ 7 ಜಾನುವಾರು ಮೃತಪಟ್ಟಿವೆ. ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ಹರಿದು ಬೀಳುವ, ಜೋತಾಡುವ ತಂತಿಗಳು ಮುಗ್ಧ ಪ್ರಾಣಿಗಳನ್ನು ಯಮಲೋಕಕ್ಕೆ ಕಳುಹಿಸುತ್ತಿವೆ. ಇನ್ನೂ ಹೆಚ್ಚಿನ ಸಂಖ್ಯೆಯ ಜಾನುವಾರುಗಳು ಮೃತಪಟ್ಟಿದ್ದರೂ ಅನೇಕರು ದೂರು ನೀಡದ್ದರಿಂದ ದಾಖಲೆಗೆ ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಕನಿಷ್ಠ ಪರಿಹಾರ: ಮೂರು ವರ್ಷಗಳಲ್ಲಿ ವಿದ್ಯುತ್ ಅವಘಡಕ್ಕೆ ಬಲಿಯಾದವರ ಕುಟುಂಬಕ್ಕೆ ವಿತರಿಸಿರುವ ಪರಿಹಾರ ಮೊತ್ತ ನೋಡಿದರೆ ಜನರ ಜೀವಕ್ಕೆ ಹೆಸ್ಕಾಂ ಕಟ್ಟುತ್ತಿರುವ ಬೆಲೆ ಎಷ್ಟು ಎಂಬುದು ಗೊತ್ತಾಗುತ್ತದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜನ, ಜಾನುವಾರು ಹಾಗೂ ಆಸ್ತಿ ನಷ್ಟಕ್ಕೆ ಹೆಸ್ಕಾಂ ರು. 3,32,068 ಪರಿಹಾರ ನೀಡಿದೆ. ಬಹುತೇಕ ಪ್ರಕರಣಗಳಲ್ಲಿ ಗ್ರಾಹಕರದ್ದೇ ತಪ್ಪು ಎಂಬ ತೀರ್ಮಾನ ಕೈಗೊಂಡು ತನ್ನ ನಿರ್ಲಕ್ಷ್ಯವನ್ನು ಹೆಸ್ಕಾಂ ಒಪ್ಪಿಕೊಳ್ಳುತ್ತಿಲ್ಲ. ಇದರಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಗಗನಕುಸುಮವಾಗಿದೆ.
ತಂತಿ ಬದಲಾವಣೆಗೆ ಕ್ರಮ: ಈ ಕುರಿತು ಹೆಸ್ಕಾಂ ಹಾವೇರಿ ವಿಭಾಗದ ಅಧೀಕ್ಷಕ ಎಂಜಿನಿಯರ್ ನಾಗೇಶ ಕಟಕೋಳ ಅವರನ್ನು ಕೇಳಿದಾಗ, ಬಹಳ ವರ್ಷಗಳಿಂದ ತಂತಿ ಬದಲಾವಣೆ ಆಗದಿರುವುದು ಸತ್ಯ. ಅದಕ್ಕಾಗಿ ಈಗ ರು. 66.21 ಕೋಟಿ ವೆಚ್ಚದಲ್ಲಿ ವಿದ್ಯುತ್ ಜಾಲದ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಕಾಮಗಾರಿಯಲ್ಲಿ ಶಿಥಿಲಗೊಂಡಿರುವ 541 ಕಿಮೀ ಉದ್ದದ ಎಚ್ಡಿ ಮಾರ್ಗ ಹಾಗೂ 381 ಕಿಮೀ ಉದ್ದದ ಎಲ್ಟಿ ಮಾರ್ಗದ ತಂತಿ ಬದಲಾವಣೆ ಮಾಡಲಾಗುತ್ತಿದೆ. ವೈರ್ ಶಿಥಿಲಗೊಂಡು ಹರಿದು ಬೀಳುವುದರಿಂದ ಆಗುವ ಅನಾಹುತ ತಪ್ಪಿಸುವುದು, ಪೋಲ್ಟೇಜ್ ಸುಧಾರಿಸುವುದು ಹಾಗೂ ವಿದ್ಯುತ್ ನಷ್ಟವನ್ನು ಕಡಿಮೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೆ, ವ್ಯಕ್ತಿ ಅಥವಾ ಪ್ರಾಣಿಗಳ ಸಾವಿಗೆ ಇಲಾಖೆ ಕಾರಣವಾದರೆ ಪರಿಹಾರ ನೀಡಲಾಗುತ್ತದೆ. ಕೆಲ ಪ್ರಕರಣಗಳಲ್ಲಿ ಇಲಾಖೆ ನಿರ್ಲಕ್ಷ್ಯ ಇರುವುದಿಲ್ಲ ಎಂದರು.
- ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

