ನಗು-ಮಗು ಮರೆತ ಅಧಿಕಾರಿಗಳು
ಕನ್ನಡಪ್ರಭ ವಾರ್ತೆ, ಹಾವೇರಿ, ಜು. 16
ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾದ ಬಾಣಂತಿ ಹಾಗೂ ಶಿಶುವನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯುವ ಉದ್ದೇಶದಿಂದ ಸರ್ಕಾರ ಆರಂಭಿಸಿದ್ದ ನಗು-ಮಗು ಯೋಜನೆ ಜಿಲ್ಲೆಯಲ್ಲಿ ಇನ್ನೂ ಆರಂಭಗೊಂಡಿಲ್ಲ. ಎರಡು ತಿಂಗಳ ಹಿಂದೆ ಬಂದಿದ್ದ ಆ್ಯಂಬುಲೆನ್ಸ್ಗಳು ನಾಪತ್ತೆಯಾಗಿವೆ. ತಾಯಿ ಹಾಗೂ ಶಿಶು ಆಸ್ಪತ್ರೆಯಿಂದ ಅಳುತ್ತಲೇ ಮನೆಗೆ ಹೋಗುವಂತಾಗಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಆದ ಬಾಣಂತಿ ಮತ್ತು ಮಗುವನ್ನು ಸುರಕ್ಷಿತವಾಗಿ ಮನೆಗೆ ಮುಟ್ಟಿಸುವ ದೃಷ್ಟಿಯಿಂದ ಸರ್ಕಾರ 'ನಗು-ಮಗು' ಯೋಜನೆಯನ್ನು ಕಳೆದ ವರ್ಷವೇ ಆರಂಭಿಸಿತ್ತು. ಎರಡು ತಿಂಗಳ ಹಿಂದೆ ತಾಲೂಕಿಗೆ ಒಂದರಂತೆ ಹಾಗೂ ಅಕ್ಕಿಆಲೂರಿಗೆ ಒಂದು ಆ್ಯಂಬುಲೆನ್ಸ್ ಬಂದಿದ್ದವು. ಎರಡು ತಿಂಗಳ ಕಾಲ ಶಿಶು ಹಾಗೂ ತಾಯಿಯನ್ನು ಕರೆದೊಯ್ಯುವ ಬದಲು ಅಧಿಕಾರಿಗಳೇ ತಿರುಗಾಡಲು ಅದನ್ನು ಬಳಸಿದ್ದರು. ಒಂದು ವಾರದಿಂದ ವಾಹನವೇ ನಾಪತ್ತೆಯಾಗಿದೆ!
ಸರ್ಕಾರ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆರಿಗೆಯಾದ ಬಾಣಂತಿ ಮತ್ತು ಮಗುವಿಗೆ ಯಾವುದೇ ರೀತಿಯ ಸೊಂಕು ತಗುಲದೆ ಮನೆಗೆ ತಲುಪಬೇಕೆಂಬ ಸದುದ್ದೇಶದಿಂದ ಪ್ರತಿ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಿಗೆ ನಗು-ಮಗು ಯೋಜನೆಯಲ್ಲಿ ಒಂದು ಆ್ಯಂಬ್ಯುಲೆನ್ಸ್ ನೀಡಿದೆ. ಕೆಲವು ತಿಂಗಳ ಹಿಂದೆಯೇ ಸರ್ಕಾರ ಜಿಲ್ಲಾಸ್ಪತ್ರೆಗೆ ನೀಡಿದ್ದ ವಾಹನಕ್ಕೆ ಚಾಲಕರ ನೇಮಕವಾಗದೇ, ಅಂಬ್ಯುಲೆನ್ಸ್ ಶೆಡ್ನಲ್ಲಿ ನಿಂತಿತ್ತು. ಒಂದು ತಿಂಗಳಿಂದ ಜಿಲ್ಲಾಸ್ಪತ್ರೆಯ ವಿವಿಧ ಕಾರ್ಯಕ್ರಮಗಳಿಗೆ ಅದು ಬಳಕೆಯಾಗುತ್ತಿದೆ.
ಜನತೆಗೆ ತಲುಪದ ಯೋಜನೆ: ಸರ್ಕಾರವೇನೋ ವಾಹನ ನೀಡಿತು. ಆದರೆ ಚಾಲಕರಿಲ್ಲದೆ ಯೋಜನೆ ಉದ್ದೇಶ ಈಡೇರಿಲ್ಲ. ಸಂಬಂಧಪಟ್ಟ ಇಲಾಖೆ ಬೇಜವಾಬ್ದಾರಿ ಹಾಗೂ ನಿರಾಸಕ್ತಿಯಿಂದ ಉದ್ದೇಶಿತ ಕಾರ್ಯಕ್ಕೆ ವಾಹನ ಬಳಕೆಯಾಗಿಲ್ಲ. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಸಾರ್ವಜನಿಕ ಆಸ್ಪತ್ರೆಗೆ ಬರುವ ಜನತೆಯ ಗೋಳು ತಪ್ಪಿಲ್ಲ.
ಮಾರ್ಪಾಡಿಗೆ ಕಳಿಸಿದ್ದೇವೆ
ಜಿಲ್ಲೆಗೆ ಒಟ್ಟು 8 ನಗು-ಮಗು ವಾಹನ ಬಂದಿವೆ. ಚಾಲಕರನ್ನು ನೇಮಿಸಲಾಗಿದೆ. ಆದರೆ ವಾಹನದಲ್ಲಿ ತಾಯಿ, ಶಿಶುವನ್ನು ಕರೆದೊಯ್ಯಲು ಮಾರ್ಪಾಡು ಮಾಡಬೇಕಾದ ಹಿನ್ನೆಲೆಯಲ್ಲಿ ವಾಹನಗಳನ್ನು ಕಳುಹಿಸಲಾಗಿದೆ. ಯಾವಾಗ ವಾಪಸ್ ಬರುತ್ತವೋ ಗೊತ್ತಿಲ್ಲ.
ವೈದ್ಯರು ಉಪಯೋಗಿಸುತ್ತಿದ್ದಾರೆ
ನಾವು ಬಾಳ ಬಡವ್ರು ಇದ್ದೀವಿ. ನಮಗ ಖಾಸಗಿ ಗಾಡಿ ಮಾಡಿಕೊಂಡು ಬಾಣಂತಿ, ಹಸಗೂಸನ್ನ ಮನಿಗೆ ಕರಕೊಂಡು ಹೋಗಾಕ ಬಾಳ ಖರ್ಚ ಬರತೈತ್ರೀ. ಸರ್ಕಾರ ನಗು ಮಗು ಯೋಜನೆಯನ್ನ ತಂದಿದ್ದು ಬಾಳ ಚೊಲೋ ಆಗೈತಿ, ಆದ್ರ ಈ ಆಸ್ಪತ್ರೆಗೆ ಕೊಟ್ಟ ಗಾಡಿನ ಡಾಕ್ಟರ್ ಹತ್ತಿಕೊಂಡ ಅಡ್ಡಾಡಕತ್ತಾರ್ರಿ. ಇಲ್ಲಿವರ್ಗೂ ಒಂದು ಹಸುಗೂಸನ್ನು ಆ ಗಾಡಿಯಾಗ ಕರಕೊಂಡು ಹೋಗಿದ್ದು ನೋಡಿಲ್ರೀ. ಕೇಳಿದರೆ ಆಸ್ಪತ್ರೆ ವೈದ್ಯರು ಗಾಡಿ ಇಲ್ಲ ಎಂಬ ಉತ್ತರ ನೀಡ್ತಾರ್ರಿ.
-ಯಲ್ಲಪ್ಪ ಬಾರ್ಕಿ, ಯಲಗಚ್ಚ ಗ್ರಾಮಸ್ಥ
-ವೀರೇಶ ಮಡ್ಲೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

