ಹಾವೇರಿ

ಪ್ರತಿಭಾ ಪುರಸ್ಕಾರ ಜಾತಿಗೆ ಸೀಮಿತವಾಗಬಾರದು

Published On :

ಹಾವೇರಿ: ಪ್ರತಿಭೆ ಜಾತಿ, ಅಂತಸ್ತುಗಳನ್ನು ಮೀರಿದ್ದಾಗಿದ್ದು, ಅದು ಯಾರಿಗೂ ಸೀಮಿತವಾದುದಲ್ಲ. ಅದೇ ಕಾರಣಕ್ಕಾಗಿ ಪ್ರತಿಭಾ ಪುರಸ್ಕಾರಗಳು ಕೇವಲ ಒಂದು ಜಾತಿಗೆ ಸೀಮಿತಗೊಳ್ಳದೇ ಎಲ್ಲ ಜನಾಂಗದ ವಿದ್ಯಾರ್ಥಿಗಳಿಗೂ ಪುರಸ್ಕಾರ ನೀಡುವಂತಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ತರಲು ಸಾಧ್ಯ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಶುಕ್ರವಾರ ನಗರದ ಶಿವಶಕ್ತಿ ಪ್ಯಾಲೇಸ್ನಲ್ಲಿ ಆಯೋಜಿಸಿದ್ದ 2012-13ನೇ ಸಾಲಿನಲ್ಲಿ ಹೆಚ್ಚು ಅಂಕಗಳಿಸಿದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರಿಂದ ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸುತ್ತದೆ. ಅಲ್ಲದೇ ಮುಂದಿನ ಶಿಕ್ಷಣಕ್ಕೆ ಸಹಕಾರಿಯಾಗುತ್ತದೆ. ರಾಜ್ಯದ ಆಯಾ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಅಖಿಲ ಭಾರತ ವೀರಶೈವ ಮಹಾಸಭಾ ಜಾತ್ಯತೀತವಾಗಿ ಪ್ರತಿಭಾ ಪುರಸ್ಕಾರ ನೀಡುತ್ತಿರುವ ಕಾರ್ಯ ಶ್ಲಾಘನೀಯ. ಪಾಲಕರು ಮನೆಯಲ್ಲಿ ಮಕ್ಕಳಿಗೆ ಪುಸ್ತಕ ಓದುವ ಸಂಸ್ಕೃತಿ ಬೆಳೆಸಬೇಕು. ಸಮಾಜದಲ್ಲಿ ಬದುಕುವ ರೀತಿ, ನೀತಿಗಳ ಬಗ್ಗೆ ತಿಳಿಸಬೇಕು. ಪ್ರತಿಯೊಬ್ಬರೂ ಬಸವಣ್ಣನ ಕಾಯಕ ತತ್ವವನ್ನು ರೂಢಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಎಂ.ಎಸ್. ಕೋರಿಶೆಟ್ಟರ್ ಮಾತನಾಡಿ, ದುಡ್ಡಿಗಿಂತ ಪುರಸ್ಕಾರ ಮುಖ್ಯ. ಏಕೆಂದರೆ, ಪುರಸ್ಕಾರಗಳು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಮುಂದೆ ಬರಲು ಪ್ರೋತ್ಸಾಹಿಸಿದಂತಾಗುತ್ತದೆ. ಅಲ್ಲದೇ ಉನ್ನತ ವ್ಯಾಸಂಗ ಮಾಡಲು ಪ್ರೇರಣೆಯಾಗಿವೆ ಎಂದರು.
ಕಾಗಿನೆಲೆ ಕನಕಗುರು ಪೀಠದ ಆಡಳಿತಾಧಿಕಾರಿ ಎಸ್.ಎಫ್.ಎನ್.ಗಾಜಿಗೌಡ್ರ ಮಾತನಾಡಿ, ಪ್ರಶಸ್ತಿ ಮತ್ತು ಪುರಸ್ಕಾರಗಳಿಗೂ ಜಾತಿ ವ್ಯವಸ್ಥೆ ಪಿಡುಗು ಅಂಟಿಕೊಂಡು ಸಮಾಜ ಇಬ್ಭಾಗವಾಗುತ್ತಿದೆ. ಎಲ್ಲರೂ ಕೂಡಿ ಬಾಳುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಉನ್ನತ ಮಟ್ಟದ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಋಣಿಯಾಗಿ ಇರಬೇಕು ಎಂದು ತಿಳಿಸಿದರು.
ಹಿರಿಯರಾದ ಎ.ಎಸ್. ಬಳ್ಳಾರಿ ಮಾತನಾಡಿ, ಮಾಧ್ಯಮಗಳು ಸಮಾಜಕ್ಕೆ ಪೂರಕವಾದ ಮಾಹಿತಿ ನೀಡುವ ಕೆಲಸ ಮಾಡಬೇಕು. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಕೊಟ್ಟು ಬೆಳೆಸಬೇಕು ಎಂದರು.
ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಕಳೆದ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿಯಲ್ಲಿ 8 ಜನ ಹಾಗೂ ದ್ವಿತೀಯ ಪಿಯುಸಿಯ 15 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ ಜಂಬಗಿ, ಸವಣೂರು ತಾಲೂಕು ಅಧ್ಯಕ್ಷ ಮೋಹನ ಮೆಣಸಿನಕಾಯಿ, ಬಿ.ಸಿ.ಕುಬಸದ, ಗಂಗಣ್ಣ ಇತರರು ಇದ್ದರು. ಸೌಭಾಗ್ಯ ಕೋಡಿಹಳ್ಳಿ ಪ್ರಾರ್ಥಿಸಿದರು. ಚಂದ್ರಣ್ಣ ಸೊಪ್ಪಿನ ಸ್ವಾಗತಿಸಿದರು. ಎಸ್.ಎನ್. ದೊಡ್ಡಗೌಡ್ರ ನಿರೂಪಿಸಿದರು. ಬಸವರಾಜ ಗುತ್ತಲ ವಂದಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.