ರೈತರು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಿ
ಹಾನಗಲ್ಲ: ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಕಾರ್ಯ ಕೈಗೊಂಡರೆ ಅತ್ಯುತ್ತಮ ಲಾಭ ಸಾಧ್ಯ ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಡಾ. ವಿ.ಐ. ಬೆಣಗಿ ರೈತರಿಗೆ ಸಲಹೆ ನೀಡಿದರು.
ಬುಧವಾರ ಹಾನಗಲ್ಲ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ, ಹನುಮನಮಟ್ಟಿ ಕೃಷಿ ಸಂಶೋಧನ ಕೇಂದ್ರ, ರಾಷ್ಟ್ರೀಯ ತೋಟಗಾರಿಕೆ ಮಂಡಳಿ, ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ ಉತ್ತಮ ಗುಣಮಟ್ಟದ ಮಾವು ಉತ್ಪಾದನೆ ಹಾಗೂ ರಫ್ತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಲಾಭದಾಯಕ ಮಾವು ಕೃಷಿಗಾಗಿ ರೈತ ಶ್ರಮವಹಿಸಬೇಕು. ಗುಣಮಟ್ಟದ ಮಾವು ಬೆಳೆಯಬೇಕು. ಅದಕ್ಕಾಗಿ ಹೊಸ ತಂತ್ರಜ್ಞಾನ ಬಳಸಿಕೊಳ್ಳಬೇಕು. ಗುತ್ತಿಗೆ ಆಧಾರದ ನೆಪದಲ್ಲಿ ಮಾವು ತೋಟಗಳನ್ನು ಮಾರುವುದೆಂದರೆ ಕೃಷಿಯನ್ನೇ ಮಾರಾಟ ಮಾಡಿದಂತೆ ಎಂದು ರೈತರನ್ನು ಎಚ್ಚರಿಸಿದರು. ಉತ್ತಮ ಬೆಲೆಗಾಗಿ ಒಂದಷ್ಟು ಕಷ್ಟಪಟ್ಟು ಸರಿಯಾದ ಮಾರುಕಟ್ಟೆಯಲ್ಲಿ ಮಾವು ಫಸಲು ಮಾರಿದರೆ ಅತಿ ಹೆಚ್ಚು ಲಾಭ ಸಾಧ್ಯ ಎಂದು ತಿಳಿಸಿದರು.
ಬೆಂಗಳೂರಿನ ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮದ ಉಪ ಮಹಾ ಪ್ರಬಂಧಕ ಡಾ. ರವೀಂದ್ರ ಮಾತನಾಡಿ, ಮಾವು ಬೆಳೆದರೆ ಸಾಲದು, ಅದರ ಹೆಚ್ಚು ಅಗತ್ಯ ಹಾಗೂ ಬೇಡಿಕೆ ಇರುವಲ್ಲಿ ವೈಜ್ಞಾನಿಕ ಮಾದರಿಯಲ್ಲಿ ರಫ್ತು ಮಾಡಲು ರೈತ ಸಿದ್ಧನಾಗಬೇಕು. ಗುಣಮಟ್ಟದ ಫಸಲು ತೆಗೆಯುವುದೆಂದರೆ ಉತ್ತಮ ಹಣ ಸಂಪಾದಿಸುವುದು ಎಂದೇ ಅರ್ಥ. ಇದಕ್ಕಾಗಿ ಕೃಷಿಕ ವರ್ಷವಿಡೀ ತೋಟದ ಬೆಳೆಗಳನ್ನು ಕಾಳಜಿ ಮಾಡಬೇಕು. ಸಕಾಲಿಕವಾಗಿ ಔಷಧೋಪಚಾರ ಹಾಗೂ ಪೋಷಕಾಂಶಗಳನ್ನು ನೀಡಿದರೆ ಮಾತ್ರ ಉತ್ತಮ ಬೆಳೆ ಸಾಧ್ಯ. ಇದರೊಂದಿಗೆ ಬದಲಾದ ವಾತಾವರಣ ಹಾಗೂ ವಾಣಿಜ್ಯ ವ್ಯವಸ್ಥೆಗೆ ಹೊಂದಿಕೊಂಡು ರೈತ ಲಾಭದತ್ತ ನೋಡಬೇಕು. ಇದರಲ್ಲಿ ಸಾಮೂಹಿಕ ಜವಾಬ್ದಾರಿಯೂ ಬೇಕು. ಕೃಷಿ ವಿಶ್ವವಿದ್ಯಾಲಯ ರೈತರಿಗಾಗಿ ಸಕಾಲಿಕವಾಗಿ ನೀಡುವ ಸೂಚನೆ ಹಾಗೂ ಮಾಹಿತಿಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ಕೃಷಿ ಹಾಗೂ ಉತ್ತಮ ಲಾಭ ಖಂಡಿತ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ವಿಶೇಷಾಧಿಕಾರಿ ಡಾ. ಎ.ಕೆ. ರೋಕಡೆ, ರೈತ ಅರಿತು ಕೃಷಿಗೆ ವಿಜ್ಞಾನ ಅಳವಡಿಸಿದರೆ ಉತ್ತಮ ನಿರ್ವಹಣೆ ಮಾಡಿದರೆ ಸಹಜವಾಗಿಯೇ ಉತ್ತಮ ಫಸಲು ಸಾಧ್ಯ. ಸಾಗುವಳಿ ಕ್ರಮಗಳನ್ನು ಬದಲಾಯಿಸಿಕೊಳ್ಳಬೇಕು. ಸದೃಢ ಕೃಷಿಗಾಗಿ ಶ್ರಮವಹಿಸಬೇಕು. ಭೂಮಿ ಬೆಳೆಯುವುದಿಲ್ಲ. ಇದ್ದ ಭೂಮಿಯನ್ನು ಕಾಪಾಡಿಕೊಳ್ಳದಿದ್ದರೆ ದೊಡ್ಡ ಹಾನಿ ಎದುರಿಸಬೇಕಾದೀತು. ಕೃಷಿ ಭೂಮಿಯ ಸಂರಕ್ಷಣೆ ನಿರ್ವಹಣೆಗೆ ಬೇಕಾಗುವ ಬೇಸಾಯ ಕ್ರಮ ಅಳವಡಿಸಿಕೊಳ್ಳುವ ಶಕ್ತಿ ಮತ್ತು ಬುದ್ಧಿಮತ್ತೆ ರೈತನಿಗಿದೆ. ನಿಷ್ಕಾಳಜಿ ಮಾಡದೆ ಕೃಷಿಯನ್ನು ಉತ್ತಮ ಲಾಭದ ಉದ್ಯಮವನ್ನಾಗಿ ಮಾರ್ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಹಾಗೂ ಸಂಯೋಜಕ ಡಾ. ಎಂ.ವಿ.ನಾಗರಾಜ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವ್ಯವಹಾರ ಮತ್ತು ರಫ್ತು ಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎನ್.ಆರ್. ಮಾಮಲೆದೇಸಾಯಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಅಜಿತಕುಮಾರ, ಹನುಮನಮಟ್ಟಿ ಕೃಷಿ ಸಂಶೋಧನ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಎಸ್.ಟಿ. ಪ್ರಭು, ಧಾರವಾಡ ಕೃಷಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಎಸ್.ಜಿ. ಅಂಗಡಿ, ಪೂನಾ ರೇನ್ಬೋ ಇಂಟರ್ನ್ಯಾಶನಲ್ ಸಂಸ್ಥೆಯ ಸಿ.ಜಿ.ಬಸಾಳೆ, ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಡಾ.ಬಿ.ಆರ್. ಜಗದೀಶ, ಡಾ. ಯಶಸ್ವಿನಿ ಶರ್ಮಾ, ಸಹಾಯಕ ತೋಟಗಾರಿಕೆ ಅಧಿಕಾರಿ ಆರ್.ಎಲ್. ಮೇಗಳಮನಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

