ಹಾವೇರಿ

ದುರ್ಗಾದೇವಿಗೆ 101 ಕುಂಭಜಲಾಭಿಷೇಕ

Published On :

ಗದಗ: ಯುಗಾದಿ ಹಬ್ಬ ಎಂದರೆ ಎಲ್ಲರೂ ಬೇವು-ಬೆಲ್ಲ ಸವಿಯುತ್ತಾರೆ. ಗ್ರಾಮ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆದರೆ, ಗದಗ ತಾಲೂಕಿನ ಕೋಟುಮಚಗಿ ಗ್ರಾಮಸ್ಥರಿಗೆ ಯುಗಾದಿ ಹಬ್ಬ ಬಂತೆಂದರೆ ಸಾಕು, ಮುಂಡರಗಿ ತಾಲೂಕಿನಲ್ಲಿರುವ ಕೊರ್ಲಹಳ್ಳಿಗೆ ಪಾದಯಾತ್ರೆಯ ಮೂಲಕ ತೆರಳಿ ದುರ್ಗಾದೇವಿ ಜಾತ್ರೆ ಮಾಡುತ್ತಾರೆ.
ಕೋಟುಮಚಗಿ ಗ್ರಾಮದ ದುರ್ಗಾದೇವಿ ಪ್ರತಿವರ್ಷ ಯುಗಾದಿ ಅಮಾವಾಸ್ಯೆಯಂದು ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ವರೆಗೆ ಪಾದಯಾತ್ರೆಯಲ್ಲಿ ತೆರಳುತ್ತಾಳೆ. ಪಾದಯಾತ್ರೆ ಕೊರ್ಲಹಳ್ಳಿಯ ಬಳಿ ಇರುವ ತುಂಗಭದ್ರಾ ನದಿಗೆ ತಲುಪಿ ನದಿ ನೀರಿನಿಂದ 101 ಕುಂಭ ಜಲಾಭಿಷೇಕ ನೆರವೇರಲಿದೆ.
200 ವರ್ಷಗಳಿಂದ ಈ ಪದ್ಧತಿ: ಈ ಪದ್ಧತಿ 200 ವರ್ಷಗಳಿಂದ ನಡೆದಿದೆ. ಆರಂಭದಲ್ಲಿ ಕೋಟುಮಚಗಿ ಗ್ರಾಮದ 10-20 ಜನರು ಮಣ್ಣಿನ ತತ್ತರಾಣಿಯಲ್ಲಿ ತುಂಗಭದ್ರಾ ನದಿಯಿಂದ ನೀರನ್ನೊಯ್ದು, ದುರ್ಗಾದೇವಿಗೆ ಅಭಿಷೇಕ ಮಾಡುತ್ತಿದ್ದರು. ಆಮೇಲೆ, ಗ್ರಾಮದ ಹಿರಿಯರು ದುರ್ಗಾದೇವಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು, ಮೆರವಣಿಗೆ ಶುರು ಮಾಡಿದರು. ಮೊದಲು 100-150 ಜನರು ಪಾದಯಾತ್ರೆಯಲ್ಲಿ ಸಾಗುತ್ತಿದ್ದರು. ಈಗ ಈ ಸಂಖ್ಯೆ 15 ಸಾವಿರ ದಾಟಿದೆ.
15 ಸಾವಿರಕ್ಕೂ ಅಧಿಕ ಭಕ್ತರು: ಯುಗಾದಿ ಅಮಾವಾಸ್ಯೆಗೆ ಎರಡು ದಿನ ಮೊದಲು (ಈ ಬಾರಿ ಮಾ. 28ರಂದು ರಾತ್ರಿ 10 ಗಂಟೆಗೆ) ಕೋಟುಮಚಗಿ ಗ್ರಾಮಸ್ಥರೆಲ್ಲ ಒಗ್ಗೂಡಿ ಎತ್ತಿನ ಬಂಡಿಗಳು ಹಾಗೂ ಕಾಲ್ನಡಿಗೆಯಲ್ಲಿ ದುರ್ಗಾದೇವಿ ಪಲ್ಲಕ್ಕಿ ಮೆರವಣಿಗೆ ಮಾಡುವರು. ಮಾ. 29ರಂದು ಕೊರ್ಲಹಳ್ಳಿಗೆ ತಲುಪುತ್ತಾರೆ. ಕೋಟುಮಚಗಿ ಗ್ರಾಮದಿಂದ ನೂರಾರು ಟ್ರ್ಯಾಕ್ಟರ್, ಲಾರಿ, ಬೈಕ್‌ಗಳಲ್ಲಿ 15 ಸಾವಿರಕ್ಕೂ ಹೆಚ್ಚು ಜನ ಬಂದು, ಮಾ. 30ರಂದು ಬೆಳಗ್ಗೆ ಜರಗುವ 101 ಕುಂಭಜಲಾಭಿಷೇಕದಲ್ಲಿ ಪಾಲ್ಗೊಳ್ಳುವರು. ಆಮೇಲೆ ಭಕ್ತರೂ ತುಂಗಭದ್ರಾ ಜಲಾಶಯದಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಬಳಿಕ ದೇವಿಯ ಕಾರ್ಣಿಕ (ಹೇಳಿಕೆ) ಜರುಗಲಿದೆ.
ಉಡಿ ತುಂಬಿಸುವ ಕಾರ್ಯ: ಮಾ. 30ರಂದು ಮಧ್ಯಾಹ್ನ 2 ಗಂಟೆಗೆ ಸುಡುವ ಬಿಸಿಲಿನಲ್ಲೇ ದೇವಿಯ ಪ್ರಸಾದ ಕಾರ್ಯಕ್ರಮ ಜರುಗಲಿದೆ. ಸಂಜೆ 4 ಗಂಟೆಗೆ ದುರ್ಗಾದೇವಿ ಪಾಲಕಿ ಮೆರವಣಿಗೆ ಮೂಲಕ ಕೊರ್ಲಹಳ್ಳಿ ಗ್ರಾಮದಲ್ಲಿ ಸಂಚರಿಸಿ ಉಡಿ ತುಂಬಲಾಗುತ್ತದೆ. ಮೆರವಣಿಗೆಯಲ್ಲಿ ರಾತ್ರಿ 8 ಗಂಟೆಗೆ ಕೊರ್ಲಹಳ್ಳಿಯಿಂದ ಹೊರಡುವ ದುರ್ಗಾದೇವಿ, ಮಾ. 31ರಂದು ಬೆಳಗ್ಗೆ 9 ಗಂಟೆಯ ವೇಳೆಗೆ ಕೋಟುಮಚಗಿ ಗ್ರಾಮಕ್ಕೆ ಆಗಮಿಸುವಳು.
ಪಲ್ಲಕ್ಕಿ ಆಶೀರ್ವಾದ: ಅಂದು ಗ್ರಾಮದೇವತೆಗೆ ವಿಶೇಷ ಪೂಜೆ ಇದೆ. ದುರ್ಗಾದೇವಿ ಬರುವ ರಸ್ತೆಯನ್ನು ತಳಿರು ತೋರಣಗಳಿಂದ ಶೃಂಗರಿಸಲಾಗುತ್ತದೆ. ದೇವತೆ ಬರುವ ಮಾರ್ಗದಲ್ಲಿ ಜನತೆ ಅಡ್ಡಲಾಗಿ ಮಲಗುವುದು ವಿಶೇಷ. ಹೀಗೆ ಮಲಗಿದವರ ಮೇಲೆ ದೇವರ ಪಲ್ಲಕ್ಕಿ ಸಾಗಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಈ ಕಾರ್ಯಗಳೆಲ್ಲ ಜರುಗಿದ ಮೇಲೆ ಭಕ್ತರು ಬೇವಿನ ಎಲೆ, ಹೂವುಗಳನ್ನು ಹಾಕಿ, ಸ್ನಾನ ಮಾಡಿ ಯುಗಾದಿ ಪಾಡ್ಯ ಆಚರಿಸುವುದು ವಿಶೇಷ.


-ಅಜೀಜಅಹ್ಮದ ಬಳಗಾನೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.