ಹಾವೇರಿ

ಮಳೆಹಾನಿ ಪ್ರದೇಶಕ್ಕೆ ಬೊಮ್ಮಾಯಿ ಭೇಟಿ

Published On :

ಶಿಗ್ಗಾಂವಿ:  ಅಕಾಲಿಕವಾಗಿ ಬಂದ ಮಳೆ ಮತ್ತು ಬಿರುಗಾಳಿಯಿಂದ ಶಿಗ್ಗಾಂವಿ ಪಟ್ಟಣದಲ್ಲಿ ಅಂದಾಜು 1.62 ಕೋಟಿ ಹಾನಿ ಸಂಭವಿಸಿದೆ. ನೂರಾರು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಜನ ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ. ಆದರೂ, ಜಿಲ್ಲಾಡಳಿತ ತ್ವರಿತ ಪರಿಹಾರ ಕ್ರಮ ಜರುಗಿಸಿಲ್ಲ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ಪಟ್ಟಣದಲ್ಲಿ ಬಿರುಗಾಳಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ನಂತರ ಪುರಸಭೆ ಸಭಾಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಟ್ಟಣದ ಇತಿಹಾಸದಲ್ಲಿ ಇಂತಹ ಘಟನೆ ಮೊದಲನೆಯದಾಗಿದ್ದು, ಇಷ್ಟೊಂದು ಹಾನಿ ಹಿಂದೆಂದೂ ಆಗಿರಲಿಲ್ಲ. ಈ ಘಟನೆಯಿಂದ ಜನತೆ ಈಗ ಚೇತರಿಸಿಕೊಳ್ಳುತ್ತಿದ್ದಾರೆ.  ಪುರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಪ್ರಥಮ ವರದಿ ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ವಿಸ್ತೃತವಾದ ಇನ್ನೊಂದು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿ ಹೆಚ್ಚಿನ ಪರಿಹಾರದ ಅನುದಾನ ಪಡೆಯುವ ನಿಟ್ಟಿನಲ್ಲಿ ಕಂದಾಯ ಸಚಿವರು ಮತ್ತು ಇಲಾಖೆ ಕಾರ್ಯದರ್ಶಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಎಂದರು.
ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಪುರಸಭಾ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷೆ ಶಂಕ್ರಮ್ಮ ಅಂದಲಗಿ, ಸದಸ್ಯರಾದ ಸದಾಶಿವಪ್ಪ ಕಂಕನವಾಡ, ಪರಶುರಾಮ ಸೊನ್ನದ, ಬಿ.ಎಸ್. ನವಲಗುಂದ, ಫಕ್ಕೀರೇಶ ಶಿಗ್ಗಾಂವಿ, ತಾಪಂ ಉಪಾಧ್ಯಕ್ಷ ನಿಂಗಪ್ಪ ಹರಿಜನ ಮತ್ತಿತರರು ಇದ್ದರು.

ಗಾಳಿ-ಮಳೆಗೆ ಬೆಳೆ ನಾಶ
ಹಾನಗಲ್ಲ: ತಾಲೂಕಿನಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆಗೆ ಬಾಳೆಗಿಡಗಳ ಫಸಲು ನಾಶಗೊಂಡಿದ್ದು, ಕೆಲವು ಮನೆಗಳು ಜಖಂಗೊಂಡಿದ್ದರಿಂದ ಲಕ್ಷಾಂತರ ಹಾನಿಯಾದ ವರದಿಯಾಗಿದೆ. ಕೃಷಿ ವರ್ಷದ ಆರಂಭಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ರೈತರಿಗೆ ಈಗ ಸುರಿದ ಮಳೆ ಅನುಕೂಲಕರವಾಗಿದೆಯಾದರೂ, ಇನ್ನೊಂದೆಡೆ ಇದ್ದ ಫಸಲನ್ನು ಕೈಗೆ ಬಾರದಂತೆ ನಾಶಗೊಳಿಸಿದೆ ಎಂಬ ನೋವು ಕಾಡುತ್ತಿದೆ. ಏಪ್ರೀಲ್ ತಿಂಗಳ ಕೊನೆಯಲ್ಲಿ ಸುರಿದ ಗುಡುಗು-ಸಿಡಿಲಿನ ಭಾರೀ ಮಳೆಗೆ ತಾಲೂಕಿನ ರಾಮತೀರ್ಥ ಹೊಸಕೊಪ್ಪ ಗ್ರಾಮದ ರೈತನೋರ್ವ ಬಲಿಯಾಗಿದ್ದಾನೆ. ಅಲ್ಲದೆ, ತಾಲೂಕಿನ ಸಿಂಗಾಪೂರ ಗ್ರಾಮದ ದುರ್ಗಾದೇವಿ ದೇವಸ್ಥಾನ ಸಿಡಿಲು ಬಡಿದು ಹಾನಿಗೊಳಗಾಗಿದೆ. ನರೇಗಲ್ಲ, ಯಳವಟ್ಟಿ, ತಿಳವಳ್ಳಿ ಗ್ರಾಮಗಳಲ್ಲಿ ಗಾಳಿ ರಭಸಕ್ಕೆ ಮನೆಗಳ ಮೇಲ್ಚಾವಣಿಗಳು ಹಾರಿಹೋಗಿವೆ. ಇನ್ನು ಕೆಲವೆಡೆ ಮನೆಗಳ ಗೋಡೆ ಬಿದ್ದ ಪರಿಣಾಮ ಲಕ್ಷಾಂತರ ಹಾನಿಯಾಗಿದೆ.
ಅಲ್ಲದೆ, ಹಾನಗಲ್ಲ ಸೇರಿದಂತೆ ತಾಲೂಕಿನ ಅರಿಷಿಣಗುಪ್ಪಿ, ಬಮ್ಮನಹಳ್ಳಿ, ನೆಲ್ಲಿಕೊಪ್ಪ, ಕ್ಯಾಸನೂರು, ಬಮ್ಮನಹಳ್ಳಿ, ನರೇಗಲ್ಲ ಗ್ರಾಮಗಳಲ್ಲಿ ಒಟ್ಟು 40 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾದ ಬಾಳೆ ಗಿಡಗಳು ಬಿರುಗಾಳಿ ಮಳೆಗೆ ನೆಲಕಚ್ಚಿವೆ. ಇದರಿಂದಾಗಿ ಸುಮಾರು ರು. 5 ಲಕ್ಷ ಹಾನಿಯಾಗಿರಬಹುದೆಂದು ಕಂದಾಯ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.
ತಾಲೂಕಿನ ಬಮ್ಮನಹಳ್ಳಿಯ ರೈತರುಗಳಾದ ಹಜರೇಸಾಬ ವಾಲಿಕಾರ, ಸೋಮನಗೌಡ ಕೊಟ್ರಗೌಡ್ರ, ಗ್ವಾಳಪ್ಪನವರ್, ಚಂದ್ರಗೌಡ ಪಾಟೀಲ ಎಂಬುವವರಿಗೆ ಸೇರಿದ ಬಾಳೆ ತೋಟ ಸಂಪೂರ್ಣ ನಾಶಗೊಂಡಿದೆ. ತಾಲೂಕಿನ ಹಲವೆಡೆ ಚಿಕ್ಕು ಗಿಡಗಳೂ ನೆಲಸಮಗೊಂಡಿವೆ. ಕ್ಯಾಸನೂರ ಗ್ರಾಮದ ರೈತರಾದ ಬಿ.ಆರ್. ಪಾಟೀಲ, ಧರ್ಮಣ್ಣ ಸಮ್ಮಸಗಿ, ಶಿವನಗೌಡ ಪಾಟೀಲ ಮುಂತಾದವರ ಬಾಳೆತೋಟ ನೆಲಕಚ್ಚಿವೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಬ್ಬರದ ಮಳೆ-ಗಾಳಿಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಹಾನಗಲ್ಲ ನಗರದಲ್ಲಿ 3 ವಿದ್ಯುತ್(ಟಿಸಿ) ಪರಿವರ್ತಕ ಸುಟ್ಟಿವೆ. ತಾಲೂಕಿನ ಯಳ್ಳೂರು, ಯಳವಟ್ಟಿ, ದಶರಥಕೊಪ್ಪ, ಗಾಜಿಪುರ, ತಿಳವಳ್ಳಿ, ಮಾರಂಬೀಡ, ಮಾಸನಕಟ್ಟಿ, ಕಂಚಿನೆಗಳೂರು, ಆಡೂರು, ಹನುಮನಕೊಪ್ಪ, ಸಾವಿಕೇರಿ, ಹೇರೂರು, ಹಿರೇಹುಲ್ಲಾಳ, ಹಿರೂರು, ಅಕ್ಕಿವಳ್ಳಿ, ಹೋತನಹಳ್ಳಿ, ಬ್ಯಾಗವಾದಿ, ಕೂಸನೂರು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.