ಹಾವೇರಿ

ರಾಣಿಬೆನ್ನೂರಿಗೆ ಸಮ್ಮೇಳನ ಸ್ಥಳಾಂತರ ಯತ್ನಕ್ಕೆ ಸಾಹಿತ್ಯಾಸಕ್ತರ ತೀವ್ರ ಆಕ್ರೋಶ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 1
ಶತಮಾನೋತ್ಸವ ಸಂಭ್ರಮದಲ್ಲಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ಸಾಹಿತ್ಯಾಸಕ್ತರ ಭಾವನೆ ಕಡೆಗಣಿಸಿ ಜಿಲ್ಲಾ ಕೇಂದ್ರ ಹಾವೇರಿಯಿಂದ ರಾಣಿಬೆನ್ನೂರಿಗೆ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಕೊಂಡೊಯ್ಯಲು ಸನ್ನದ್ಧವಾಗಿದೆ.
ಇದರಿಂದ ಅಸಮಾಧಾನಗೊಂಡಿರುವ ಕನ್ನಡ ಮನಗಳು ಮುಂದಿನ ನಡೆ ಕುರಿತು ಚರ್ಚಿಸಲು ಮೇ 3ರಂದು ಸಭೆ ನಡೆಸಲು ತೀರ್ಮಾನಿಸಿವೆ.
ಅನೇಕ ವರ್ಷಗಳ ಹೋರಾಟದ ಫಲವಾಗಿ 81ನೇ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ನಡೆಸುವುದಾಗಿ ಮಡಿಕೇರಿಯಲ್ಲಿ ನಡೆದ ಸಮ್ಮೇಳನದಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ, ಏಕಾಏಕಿಯಾಗಿ ಹಾವೇರಿ ಬದಲಾಗಿ ರಾಣಿಬೆನ್ನೂರಿಗೆ ಸಮ್ಮೇಳನ ಸ್ಥಳಾಂತರಿಸಲು ಮುಂದಾಗಿರುವುದು ಜಿಲ್ಲೆಯ ಕನ್ನಡಾಭಿಮಾನಿಗಳಲ್ಲೇ ಬಿರುಕು ಮೂಡಿಸಿದೆ.
ಏ. 25ರಂದು ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸ್ಥಳ ನಿಗದಿ ಕುರಿತು ಚರ್ಚೆ ನಡೆದರೂ ಹೆಸರು ಘೋಷಿಸಿಲ್ಲ. ಸಮ್ಮೇಳನದ ಸ್ಥಳ ನಿಗದಿ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಹಾವೇರಿ ಜಿಲ್ಲಾ ಕಾರ್ಯಕಾರಿ ಸಮಿತಿ ಹಾಗೂ ರಾಜ್ಯಾಧ್ಯಕ್ಷರಿಗೆ ನೀಡಿ ರಾಜ್ಯ ಕಸಾಪ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಆ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಬಹುತೇಕ ರಾಣಿಬೆನ್ನೂರು ಹೆಸರು ಅಂತಿಮಗೊಳಿಸಲಾಗಿದೆ ಎಂದೂ ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಸಭೆ ನಡೆಸದ ಅಧ್ಯಕ್ಷರು: ಹಾವೇರಿ ಬದಲಾಗಿ ರಾಣಿಬೆನ್ನೂರಿಗೆ ಸಮ್ಮೇಳನ ಕೊಂಡೊಯ್ಯಲು ಕಸಾಪ ಜಿಲ್ಲಾಧ್ಯಕ್ಷ ಜಿ.ಎಸ್. ಮಾಸಣಗಿ ತೀವ್ರ ಉತ್ಸುಕತೆ ತೋರುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಸಮ್ಮೇಳನ ಸ್ಥಳ ನಿಗದಿ ಕುರಿತು ಚರ್ಚಿಸಲು ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಕರೆಯಲಾಗಿತ್ತು. ಆದರೆ, ಒಮ್ಮತಕ್ಕೆ ಬರುವಲ್ಲಿ ವಿಫಲವಾದ ಕಾರಣ ಸಭೆ ಮುಂದೂಡಲಾಗಿತ್ತು. ಮತ್ತೊಮ್ಮೆ ಸಭೆ ನಡೆಸಿ ಸಮ್ಮೇಳನ ಸ್ಥಳ ನಿಗದಿ ಮಾಡುವುದಾಗಿ ಜಿಲ್ಲಾಧ್ಯಕ್ಷ ಮಾಸಣಗಿ ತಿಳಿಸಿದ್ದರು. ಆದರೆ, ಇದುವರೆಗೆ ಸಭೆಯನ್ನೇ ನಡೆಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾರ್ವಜನಿಕರ ಸಭೆ ಕರೆದು ಒಮ್ಮತಾಭಿಪ್ರಾಯ ವ್ಯಕ್ತವಾಗುವ ಸ್ಥಳದಲ್ಲಿ ಸಮ್ಮೇಳನ ನಡೆಸೋಣ ಎಂಬ ಸಾಹಿತ್ಯಾಸಕ್ತರ ಮನವಿಗೂ ಜಿಲ್ಲಾಧ್ಯಕ್ಷರು ಕಿವಿಗೊಡಲಿಲ್ಲ. ಕಸಾಪ ಪದಾಧಿಕಾರಿಗಳನ್ನು, ಜಿಲ್ಲೆಯ ಜನಪ್ರತಿನಿಧಿಗಳು, ಮಠಾಧೀಶರು, ಸಾಹಿತಿಗಳು, ಜಿಲ್ಲಾಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸ್ಥಳ ನಿಗದಿಗೆ ತರಾತುರಿ ತೋರುತ್ತಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಮೇ 3ರಂದು ಸಭೆ: ಯಾರ ಅಭಿಪ್ರಾಯವನ್ನೂ ಸಂಗ್ರಹಿಸದೆ ರಾಣಿಬೆನ್ನೂರಿಗೆ ಸಮ್ಮೇಳನ ಕೊಂಡೊಯ್ಯುತ್ತಿರುವ ಮಾಹಿತಿ ತಿಳಿದು ಸಾಹಿತ್ಯಾಸಕ್ತರು ಎಚ್ಚೆತ್ತಿದ್ದಾರೆ. ಮೇ 3ರಂದು ಹಾವೇರಿಯ ಹುಕ್ಕೇರಿ ಮಠದಲ್ಲಿ ಸಾಹಿತಿಗಳು, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಜನಪ್ರತಿನಿಧಿಗಳು, ಮಠಾಧೀಶರ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹುಕ್ಕೇರಿ ಮಠದ ಸದಾಶಿವ ಶ್ರೀ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಒಮ್ಮತದ ಸ್ಥಳದಲ್ಲಿ ಸಮ್ಮೇಳನವಾಗಲಿ: ಹಾವೇರಿಗೆ ಸಮ್ಮೇಳನ ತರಬೇಕು ಎಂಬ ನಿಟ್ಟಿನಲ್ಲಿ ಈ ಹಿಂದೆ ಅನೇಕರು ಹೋರಾಟ ನಡೆಸಿದ್ದರು. ಈ ಬಾರಿ ಆತಿಥ್ಯ ವಹಿಸುವ ಅವಕಾಶ ಸಿಕ್ಕರೂ ಅದನ್ನು ರಾಣಿಬೆನ್ನೂರಿಗೆ ಸ್ಥಳಾಂತರಿಸುತ್ತಿರುವುದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾವೇರಿ, ರಾಣಿಬೆನ್ನೂರು ಅಥವಾ ಜಿಲ್ಲೆಯ ಬೇರೆ ಸ್ಥಳದಲ್ಲಾದರೂ ಸಮ್ಮೇಳನ ನಡೆಯಲಿ. ಆದರೆ, ಕಸಾಪ ಜಿಲ್ಲಾ ಘಟಕವೇ ಸ್ಥಳದ ವಿಚಾರದಲ್ಲಿ ಇನ್ನೂ ಒಮ್ಮತಕ್ಕೆ ಬಂದಿಲ್ಲ. ಎಲ್ಲರೂ ಒಪ್ಪುವ ಸ್ಥಳದಲ್ಲಿ ಸಮ್ಮೇಳನ ನಡೆಯಲಿ ಎಂಬುದು ಕಸಾಪ ಪದಾಧಿಕಾರಿಗಳಾದ ಪ್ರಭು ಹಿಟ್ನಳ್ಳಿ, ಮಾರುತಿ ಶಿಡ್ಲಾಪುರ ಮುಂತಾದ ಸಾಹಿತ್ಯಾಸಕ್ತರ ಆಶಯ. ಇದನ್ನು ಮನಗಂಡು ಜಿಲ್ಲಾಧ್ಯಕ್ಷರು ಸಾರ್ವಜನಿಕರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿ.
ಸಮ್ಮೇಳನ ಕನ್ನಡಿಗರ ಮನ ಬೆಸೆಯುವಂತಾಗಬೇಕೆ ಹೊರತು ಒಡೆಯಬಾರದು ಎಂಬುದು ಸಾರ್ವಜನಿಕರ ಅಭಿಪ್ರಾಯ. ಈ ನಿಟ್ಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ಜಿ.ಎಸ್. ಮಾಸಣಗಿ ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಿದೆ.
- ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.