ಹಾವೇರಿಯಲ್ಲೇ ಸಮ್ಮೇಳನ ನಡೆಯಲಿ
ಹಾವೇರಿ: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲಾ ಕೇಂದ್ರ ಹಾವೇರಿಯಲ್ಲೇ ನಡೆಯಬೇಕು. ಇಲ್ಲದಿದ್ದರೆ ಬೇರೆ ಜಿಲ್ಲೆಗೆ ಹೋದರೂ ಚಿಂತೆಯಿಲ್ಲ. ಸಮ್ಮೇಳನವನ್ನು ರಾಣಿಬೆನ್ನೂರಿಗೆ ಸ್ಥಳಾಂತರಿಸಿದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ.
ಇದು ಶನಿವಾರ ಹುಕ್ಕೇರಿಮಠದಲ್ಲಿ ಕರೆದಿದ್ದ ಸಾಹಿತ್ಯಾಸಕ್ತರ ಸಭೆಯಲ್ಲಿ ಕೇಳಿ ಬಂದ ಅಭಿಪ್ರಾಯ. 81ನೇ ಸಾಹಿತ್ಯ ಸಮ್ಮೇಳನವನ್ನು ರಾಣಿಬೆನ್ನೂರಿನಲ್ಲಿ ನಡೆಸಲು ಕೇಂದ್ರ ಕಸಾಪ ಕಾರ್ಯಕಾರಿ ಸಮಿತಿ ಏ. 25ರಂದು ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕರೆದಿದ್ದ ಸಭೆಯಲ್ಲಿ ಈ ನಿರ್ಧಾರಕ್ಕೆ ಆಕ್ರೋಶದ ಮಾತುಗಳು ಕೇಳಿ ಬಂದವು. ಕೆಲವರು ಸಮ್ಮೇಳನ ಬೇರೆ ಜಿಲ್ಲೆಗೆ ಹೋಗಬಾರದು. ಆದರೆ, ಹಾವೇರಿಯಲ್ಲೇ ನಡೆಸಲು ಎಲ್ಲ ಪ್ರಯತ್ನ ಮಾಡೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಆರಂಭದಲ್ಲೇ ಹೋರಾಟದ ಹಾದಿ ಹಿಡಿಯುವುದು ಬೇಡ. ನಿಯೋಗದಲ್ಲಿ ತೆರಳಿ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಹಾಗೂ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳನ್ನು ಭೇಟಿಯಾಗಿ ಮನವೊಲಿಸುವ ಪ್ರಯತ್ನ ಮಾಡೋಣ. ಆದಕ್ಕೂ ಮನ್ನಣೆ ನೀಡದಿದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳೋಣ ಎಂಬ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.
ಹೊಸಮಠ ಶ್ರೀ, ಕರ್ಜಗಿ ಶ್ರೀ: ಸಾಹಿತ್ಯ ಯಾರೊಬ್ಬರ ಆಸ್ತಿಯಲ್ಲ, ಎಲ್ಲರ ಆಸ್ತಿ. ಯಾರ ಮನಸ್ಸಿಗೂ ನೋವಾಗದಂತೆ ನೋಡಿಕೊಂಡು ಸಮ್ಮೇಳನ ಯಶಸ್ಸಿಗೆ ಶ್ರಮಿಸಿಬೇಕಿದೆ. ಹಾವೇರಿಯಲ್ಲಿ ಸಮ್ಮೇಳನ ನಡೆಯಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಆದ್ದರಿಂದ ಸಮ್ಮೇಳನವನ್ನು ಇಲ್ಲಿಗೆ ತರಲು ಪ್ರಯತ್ನಿಸೋಣ.
ಕೋರಗಲ್ಲ ವಿರೂಪಾಕ್ಷಪ್ಪ: ಕಾಫಿ ನಾಡಿಂದ ಯಾಲಕ್ಕಿ ನಾಡಿಗೆ ಸಮ್ಮೇಳನ ಎಂದು ಹೇಳಿ ಈಗ ಪಿತೂರಿ ನಡೆಸಿ ರಾಣಿಬೆನ್ನೂರಿಗೆ ಸಮ್ಮೇಳನ ಸ್ಥಳಾಂತರಿಸಲಾಗಿದೆ. ಕಸಾಪ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಹಠಮಾರಿ ಧೋರಣೆಯೇ ಇದಕ್ಕೆ ಕಾರಣ. ನಮ್ಮಲ್ಲೇ ಒಡೆದಾಳುವ ನೀತಿ ಅನುಸರಿಸಲಾಗುತ್ತಿದೆ. ಎಲ್ಲರ ಮನವೊಲಿಸಿ ರಾಣಿಬೆನ್ನೂರಿಗೆ ಸ್ಥಳಾಂತರಿಸಿದ್ದರೆ ವಿರೋಧ ಇರುತ್ತಿರಲಿಲ್ಲ. ಅದನ್ನು ಬಿಟ್ಟು ಪಿತೂರಿ ನಡೆಸಿ ರಾಣಿಬೆನ್ನೂರಿನಲ್ಲಿ ಸಮ್ಮೇಳನ ನಡೆಸಿದರೆ ಸಹಕಾರ ನೀಡಲು ಮನಸ್ಸು ಒಪ್ಪುವುದಿಲ್ಲ.
ಎಸ್ಎಫ್ಎನ್ ಗಾಜಿಗೌಡ್ರ: ಹಾವೇರಿಯಲ್ಲೇ ಸಮ್ಮೇಳನ ನಡೆಸುವ ಮೂಲಕ ನಮ್ಮ ಮರ್ಯಾದೆ ಕಾಪಾಡುವ ಜವಾಬ್ದಾರಿ ಶಾಸಕದ್ವಯರಿಗೆ ಬಿಡೋಣ. ಆಗುವುದಿದ್ದರೆ ಹಾವೇರಿಯಲ್ಲೇ ಸಮ್ಮೇಳನ ಆಗಬೇಕು. ಇಲ್ಲದಿದ್ದರೆ ನಮ್ಮ ಸಹಕಾರವಿಲ್ಲ.
ವೈ.ಬಿ. ಆಲದಕಟ್ಟಿ: ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಜಿಲ್ಲಾ ಕಾರ್ಯಕಾರಿ ಸಭೆ ಕರೆದು ನಿರ್ಣಯ ಕೈಗೊಳ್ಳುವುದಾಗಿ ಹೇಳಿ ಈಗ ಸದ್ದಿಲ್ಲದೇ ರಾಣಿಬೆನ್ನೂರಿಗೆ ಒಯ್ಯುತ್ತಿದ್ದಾರೆ. ಎಲ್ಲ ವ್ಯಾವಹಾರಿಕವಾಗಿ ನೋಡಲಾಗುತ್ತಿದೆ. ನೋಡಿ ಸುಮ್ಮನಿರಲು ಸಾಧ್ಯವಿಲ್ಲ.
ರತ್ನಾ ಭಮಕ್ಕನವರ: ಹಾವೇರಿಯಲ್ಲಿ ಸಮ್ಮೇಳನ ನಡೆಸಿದರೆ ಎಲ್ಲ ಸಹಕಾರ ನೀಡಲು ನಗರಸಭೆ ಸಿದ್ಧವಿದೆ. ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆಯಿಂದ ನಿರ್ಣಯ ಕೈಗೊಳ್ಳಲಾಗಿದೆ. ಹಾವೇರಿಯಲ್ಲಿ ಸಮ್ಮೇಳನ ಯಶಸ್ವಿಗೊಳಿಸುವ ದಕ್ಷತೆ ನಮ್ಮಲ್ಲಿದೆ. ರಾಣಿಬೆನ್ನೂರಿಗೆ ಸ್ಥಳಾಂತರವಾದರೆ ಯಾವ ಹೋರಾಟಕ್ಕೂ ಸಿದ್ಧ.
ರವೀಂದ್ರ ಶೆಟ್ಟರ್: ಹಾವೇರಿ ಜಿಲ್ಲೆಗಾಗಿ ಹೋರಾಟ ಮಾಡಿ ಜೈಲಿಗೂ ಹೋಗಿ ಬಂದಿದ್ದೇವೆ. ಅದು ಕಸಾಪ ಜಿಲ್ಲಾಧ್ಯಕ್ಷರಿಗೆ ಗೊತ್ತಿಲ್ಲ. ಹೀಗೆ ಬಿಟ್ಟರೆ ಎಲ್ಲ ಕಾರ್ಯಕ್ರಮ ಬೇರೆ ಕಡೆಗೆ ಹೋಗುತ್ತದೆ. ನಾವು ಕೈಕಟ್ಟಿ ಕುಳಿತುಕೊಳ್ಳಬಾರದು. ಹಾವೇರಿಯಲ್ಲಿ ಸಮ್ಮೇಳನ ಆಗದಿದ್ದರೆ ಬೇರೆ ಕಡೆ ಹೋದರೂ ಚಿಂತೆಯಿಲ್ಲ. ಮುಂದಿನ ಪಾಳಿ ಹಾಗೂ ಬೇರೆ ಅಧ್ಯಕ್ಷರು ಬಂದ ಮೇಲೆ ಹಾವೇರಿಯಲ್ಲಿ ಸಮ್ಮೇಳನ ನಡೆಸೋಣ. ಯಾವ ಹೋರಾಟಕ್ಕೂ ಹಿಂಜರಿಯುವುದಿಲ್ಲ.
ಶಿವಲಿಂಗೇಶ್ವರ ವಿದ್ಯಾಪೀಠದ ಅಧ್ಯಕ್ಷ ಪಿ.ಡಿ. ಶಿರೂರ, ರವೀಂದ್ರ ಶೆಟ್ಟರ್, ಸಂಜೀವ್ ನಿರಲಗಿ, ಜಿಪಂ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ರವೀಶ ಆನವಟ್ಟಿ, ಸಂಜಯ ಗಾಂಧಿ ಸಂಜೀವಣ್ಣನವರ, ಭೋಜರಾಜ ಪಾಟೀಲ, ಸುರೇಶ ಹೊಸ್ಮನಿ, ಬಸವರಾಜ ದೊಡ್ಮನಿ, ಸಿದ್ದುಮತಿ ನೆಲೋಗಿ, ಸತೀಶ ಕುಲಕರ್ಣಿ, ಸಾಹಿತಿಗಳು ವಿರೋಧ ವ್ಯಕ್ತಪಡಿಸಿದರು.
ಪರ್ಯಾಯ ಸಮ್ಮೇಳನದ ಎಚ್ಚರಿಕೆ
ಕಸಾಪ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ಯಾರ ಮಾತಿಗೂ ಮನ್ನಣೆ ನೀಡದೇ ರಾಣಿಬೆನ್ನೂರಿನಲ್ಲೇ ಸಮ್ಮೇಳನ ನಡೆಸಲು ಮುಂದಾದರೆ ಅದಕ್ಕೆ ಪರ್ಯಾಯವಾಗಿ ಮತ್ತೊಂದು ಸಮ್ಮೇಳನ ನಡೆಸುವುದಾಗಿ ಕಸಾಪ ಮಾಜಿ ಪದಾಧಿಕಾರಿ ನಾಗರಾಜ ದ್ಯಾವಣಕೊಪ್ಪ ಎಚ್ಚರಿಸಿದರು. ಪ್ರತಿ ಸಮ್ಮೇಳನದಲ್ಲೂ ಮುಂದಿನ ಬಾರಿ ಎಲ್ಲಿ ಸಮ್ಮೇಳನ ಎಂದು ಘೋಷಿಸಲಾಗುತ್ತದೆ. ಅದರಂತೆ ಮುಂದಿನ ಸಲ ಹಾವೇರಿಯಲ್ಲಿ ಎಂದು ಘೋಷಿಸಲಾಗಿದೆ. ಜಿಲ್ಲಾಧ್ಯಕ್ಷರ ಸ್ವಾರ್ಥಕ್ಕಾಗಿ ಜಿಲ್ಲೆಯ ಜನರನ್ನು ಪ್ರಾದೇಶಿಕವಾಗಿ ಒಡೆಯಲಾಗುತ್ತಿದೆ. ಜನಪ್ರತಿನಿಧಿಗಳು, ಮಠಾಧೀಶರ ಸಹಕಾರ ಅಗತ್ಯವಿಲ್ಲ ಎಂದಾದರೆ ಹೇಳಲಿ. ಕುತಂತ್ರದಿಂದ ರಾಣಿಬೆನ್ನೂರಿಗೆ ಸಮ್ಮೇಳನ ಒಯ್ದರೆ ಪರ್ಯಾಯ ಸಮ್ಮೇಳನ ನಡೆಸಲು ಸಿದ್ಧ ಎಂದು ಅವರು ಎಚ್ಚರಿಕೆ ನೀಡಿದರು.
ಸಾಹಿತ್ಯಾಸಕ್ತರ ಸಭೆಯಲ್ಲಿ ಕೇಳಿಬಂದ ಮಾತು
ಅನೇಕ ವರ್ಷಗಳ ಹೋರಾಟದ ಫಲವಾಗಿ ಮುಂದಿನ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿದೆ. ಗೊಂದಲವಿಲ್ಲದೇ ಸಮ್ಮೇಳನ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕಿದೆ. ಎಲ್ಲರ ಅಭಿಪ್ರಾಯ ಪಡೆದು ಸಮ್ಮೇಳನ ನಡೆಸಬೇಕು. ಹಾವೇರಿಯಲ್ಲೇ ಸಮ್ಮೇಳನ ಆಗಬೇಕೆಂಬುದು ಜಿಲ್ಲೆಯ ಎಲ್ಲ ಶಾಸಕರ ಅಭಿಪ್ರಾಯ. ಜನರ ಮನಸ್ಸು ಒಡೆದು ಸಮ್ಮೇಳನ ಮಾಡುವುದರಲ್ಲಿ ಅರ್ಥವಿಲ್ಲ. ಆದ್ದರಿಂದ ಹಾವೇರಿಗೆ ತರಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಸಾಧ್ಯವಾಗದಿದ್ದರೆ ಮುಂದಿನ ಹೋರಾಟಕ್ಕೆ ಸಹಕಾರವಿದೆ.
- ಬಸವರಾಜ ಶಿವಣ್ಣನವರ, ಬ್ಯಾಡಗಿ ಶಾಸಕ
ಸಮ್ಮೇಳನ ಹಾವೇರಿಯಲ್ಲೇ ನಡೆಯಬೇಕೆಂಬುದು ನಮ್ಮ ಆಶಯವಾಗಿತ್ತು. ಆದರೆ, ಈಗ ರಾಣಿಬೆನ್ನೂರಿಗೆ ಸ್ಥಳಾಂತರವಾಗಿರುವುದು ವಿಷಾದನೀಯ. ಆದರೆ, ಕಠೋರ ನಿರ್ಧಾರ ಕೈಗೊಂಡು ಪ್ರತಿಭಟನೆ ಮಾಡಿ ಸಮ್ಮೇಳನ ಬೇರೆ ಜಿಲ್ಲೆಗೆ ಹೋಗುವುದು ಬೇಡ. ಹಾವೇರಿಗೆ ಕಳಂಕ ಬಾರದ ರೀತಿಯಲ್ಲಿ ಜನರು ವರ್ತಿಸಬೇಕು. ಹಾವೇರಿಯಲ್ಲೇ ಸಮ್ಮೇಳನ ನಡೆಸುವ ಕುರಿತಂತೆ ಕಸಾಪ ಕೇಂದ್ರ ಸಮಿತಿಯೊಂದಿಗೆ ಮಾತನಾಡೋಣ. ಯಾವುದೇ ಮನಸ್ತಾಪ ಆಗದ ರೀತಿಯಲ್ಲಿ ಸರ್ವರನ್ನೂ ಗಮನಕ್ಕೆ ತೆಗೆದುಕೊಂಡು ನಿರ್ಣಯ ತೆಗೆದುಕೊಳ್ಳಬೇಕು.
- ಹುಕ್ಕೇರಿ ಮಠದ ಸದಾಶಿವ ಶ್ರೀ
ಸಾಹಿತ್ಯದಲ್ಲಿ ರಾಜಕೀಯ ಬೆರೆಸುವುದು ಇಷ್ಟವಿಲ್ಲದ್ದರಿಂದ ಸುಮ್ಮನಿದ್ದೆವು. ಹಾವೇರಿಯಲ್ಲಿ ಸಮ್ಮೇಳನ ಎಂದು ಘೋಷಿಸಿ ಈಗ ರಾಣಿಬೆನ್ನೂರಿಗೆ ಸ್ಥಳಾಂತರಿಸುವ ಅಗತ್ಯವಾದರೂ ಏನಿದೆ? ಹಾವೇರಿಯಲ್ಲಿ ಯಾಕೆ ಬೇಡ ಎಂಬುದನ್ನು ಮನವರಿಕೆ ಮಾಡಿಕೊಡಲಿ. ಅದನ್ನು ಬಿಟ್ಟು ಯಾವುದೇ ಕಾರಣವಿಲ್ಲದೆ ಸ್ಥಳಾಂತರಿಸಬಾರದು. ಜಿಲ್ಲೆಯ ಶಾಸಕರೆಲ್ಲರೂ ಹಾವೇರಿಯಲ್ಲೇ ಸಮ್ಮೇಳನ ಆಗಬೇಕೆಂದು ಪತ್ರ ಕೊಟ್ಟಿದ್ದೇವೆ. ಅದಕ್ಕೂ ಬೆಲೆ ಇಲ್ಲದಿದ್ದರೆ ಸಮ್ಮೇಳನಕ್ಕೆ ನಮ್ಮ ಸಹಕಾರ ಬೇಡವೇ? ಹಾಲಂಬಿ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಳ್ಳೋಣ. ಮನ್ನಣೆ ನೀಡದಿದ್ದರೆ ಹೋರಾಟ ಬಗ್ಗೆ ನಿರ್ಧರಿಸೋಣ.
- ರುದ್ರಪ್ಪ ಲಮಾಣಿ, ಶಾಸಕ
ಹಾವೇರಿಗೆ ಸಮ್ಮೇಳನ ನಡೆಸುವ ಅವಕಾಶ ಕೊಡಬೇಕು ಎಂದು ಅನೇಕ ವರ್ಷಗಳಿಂದ ಹಾವೇರಿ ಜಿಲ್ಲೆಯ ಜನತೆ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದ್ದರಿಂದ ಹಾವೇರಿಯಲ್ಲೇ ಸಮ್ಮೇಳನ ನಡೆಯಬೇಕು. ಇನ್ನೂ ಪರಿಸ್ಥಿತಿ ಕೈಮೀರಿಲ್ಲ. ಸಂವಿಧಾನ ತಿದ್ದುಪಡಿಗೆ ಅವಕಾಶ ಇರುವಾಗ ಕನ್ನಡ ಸಾಹಿತ್ಯ ಪರಿಷತ್ ಕೈಗೊಂಡಿರುವ ನಿರ್ಣಯ ಬದಲಿಸಲು ಅವಕಾಶವಿದೆ. ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ರಾಣಿಬೆನ್ನೂರು ಎಂದು ಕಸಾಪದ ಕೇಂದ್ರ ಸಮಿತಿ ನಿರ್ಣಯ ಕೈಗೊಂಡಿದ್ದರೂ ಅದನ್ನು ಬದಲಿಸುವಂತೆ ಕೇಳಿಕೊಳ್ಳೋಣ. ಇಲ್ಲದಿದ್ದರೆ ಮುಂದಿನ ಹೋರಾಟದ ನಿರ್ಣಯಕ್ಕೆ ಹೋಗೋಣ.
- ಎಂ.ಎಸ್. ಕೋರಿಶೆಟ್ಟರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

