ರಾಯಚೂರು

ಬಳಕೆಯಾಗದ ಜಮೀನು ಹಿಂದಿರುಗಿಸಿ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಏ.2
ನಗರದ ಹತ್ತಿ ಮಾರುಕಟ್ಟೆ ಅಭಿವೃದ್ಧಿಗೆ ರೈತರಿಂದ ವಶಪಡಿಸಿಕೊಂಡ 345 ಎಕರೆ ಪ್ರದೇಶದ ಪೈಕಿ 125 ಎಕರೆಯನ್ನು ಉದ್ಯಮಿಗಳಿಗೆ ಹಂಚಿಕೆ ಮಾಡುವ ಕ್ರಮವನ್ನು ವಿರೋಧಿಸಿ ನಗರದಲ್ಲಿ ಮಂಗಳವಾರ ಮಾಜಿ ಶಾಸಕ ಪಾಪಾರೆಡ್ಡಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ನಗರದ ಎಪಿಎಂಸಿ ಮುಂದೆ ಪ್ರತಿಭಟನೆ ನಡೆಸಿದ ರೈತರು ಎಪಿಎಂಸಿ ಅಧ್ಯಕ್ಷ ಆರ್. ತಿಮ್ಮಯ್ಯ ಅವರಿಗೆ ಮನವಿ ಸಲ್ಲಿಸಿ, ಹಿಂದುಳಿದ ಜಿಲ್ಲೆಯ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ನೆರವಾಗುವ ದೃಷ್ಟಿಯಿಂದ ಹತ್ತಿ ಮಾರುಕಟ್ಟೆಯ ಅಭಿವೃದ್ಧಿಗೆ ಈ ಹಿಂದೆ ರೈತರು 345 ಎಕರೆ ಪ್ರದೇಶವನ್ನು ಬಿಟ್ಟುಕೊಟ್ಟಿದ್ದರು.
ರೈತರ ಆಶಯಕ್ಕೆ ಧಕ್ಕೆ: ಈ ಜಮೀನಿನಲ್ಲಿ ಹತ್ತಿ ಮಾರುಕಟ್ಟೆಯ ಅಭಿವೃದ್ಧಿಯ ಕನಸು ರೈತರದ್ದಾಗಿತ್ತು. ಅದರಿಂದ ಕೃಷಿ ಕ್ಷೇತ್ರದ ಪ್ರಗತಿಯಾಗುವ ನಿರೀಕ್ಷೆಯಿತ್ತು. ಆದರೆ ಸದ್ಯ ಈ 345 ಎಕರೆ ಪ್ರದೇಶದ ಜಮೀನಿನಲ್ಲಿ ಬಳಕೆಯಾಗದ 125 ಎಕರೆ ಪ್ರದೇಶವನ್ನು ಉದ್ಯಮಿಗಳಿಗೆ ಹಂಚಿಕೆ ಮಾಡಲು ಯೋಜಿಸಿರುವುದನ್ನು ಪ್ರತಿಭಟನಾಕಾರರು ವಿರೋಧಿಸಿದರು.
35 ವರ್ಷಗಳ ಹಿಂದೆಯೇ ಜಮೀನು ಸ್ವಾಧೀನಪಡಿಸಿಕೊಂಡಿದ್ದು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸದೇ ಬೇರೆ ಬೇರೆ ಉದ್ದೇಶಗಳಿಗೆ ಜಮೀನು ಹಸ್ತಾಂತರಕ್ಕೆ ಮುಂದಾಗಿರುವುದು ರೈತರ ಮೂಲ ಆಶಯಕ್ಕೆ ಧಕ್ಕೆಯಾಗುವಂತೆ ಮಾಡಿದೆ. ಇಂಥ ಯಾವುದೇ ಕ್ರಮಕ್ಕೆ ರೈತರ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
99 ವರ್ಷಕ್ಕೆ ಲೀಸ್: 345 ಎಕರೆ ಪ್ರದೇಶ ಸ್ವಾಧೀನದ ನಂತರದಲ್ಲಿ ಆ ಜಮೀನಿನ 10 ಎಕರೆಯನ್ನು ತರಬೇತಿ ಸಂಸ್ಥೆಗೆ, 25 ಎಕರೆ ಒಪೆಕ್ ಆಸ್ಪತ್ರೆಗೆ, 15 ಎಕರೆ ಉಗ್ರಾಣ ನಿರ್ಮಾಣಕ್ಕೆ, 3 ಎಕರೆ ಬಿಎಸ್ಸೆನ್ನೆಲ್ ಕಚೇರಿಗೆ, 50 ಎಕರೆ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಹಾಗೂ 10 ಎಕರೆಯನ್ನು ಖಾಸಗಿಯವರಿಗೆ ಮುಂದಿನ 99 ವರ್ಷಕ್ಕೆ ಲೀಸ್ ಆಧಾರದಲ್ಲಿ ನೀಡಲಾಗಿದೆ ಎಂದು ಆರೋಪಿಸಿದರು.
ಈ ರೀತಿಯಾಗಿ ಮೂಲ ಉದ್ದೇಶ ಹೊರತುಪಡಿಸಿ ಇನ್ನುಳಿದ ವಿಚಾರಗಳಿಗೆ ಸರ್ಕಾರ ಜಮೀನು ಹಂಚಿಕೆ ಮಾಡಿರುವುದು ಸರಿಯಲ್ಲ. ಜಮೀನು ಕಳೆದುಕೊಂಡ ರೈತರಿಗೆ ಇದರಿಂದ ಸರ್ಕಾರ ಅನ್ಯಾಯ ಮಾಡಿದಂತಾಗಿದೆ. ಹೈದರಾಬಾದ್ ರಸ್ತೆಯಲ್ಲಿ 60 ಎಕರೆ ಜಮೀನಿನಲ್ಲಿ ಬೃಹತ್ ಹತ್ತಿ ಮಾರುಕಟ್ಟೆ ನಿರ್ಮಿಸಲಾಗಿದೆ. ಇನ್ನುಳಿದ 125 ಎಕರೆ ಪ್ರದೇಶವನ್ನು ಖಾಸಗಿ ಉದ್ದಿಮೆಗಳಿಗೆ ಮಾರಾಟ ಮಾಡಲು ಎಪಿಎಂಸಿ ಮುಂದಾಗಿರುವುದು ರೈತ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ ಎಂದು ದೂರಿದರು.
ಎಪಿಎಂಸಿಯಿಂದ ಒಪ್ಪಂದ ಉಲ್ಲಂಘನೆ: ಜಮೀನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ರೈತರೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಎಪಿಎಂಸಿಯು ಉದ್ದೇಶಿತ ಜಮೀನನ್ನು ಸ್ವಂತಕ್ಕೆ ಏಕೆ ಬಳಸಿಲ್ಲ ಎಂದು ಪ್ರಶ್ನಿಸಿದ ರೈತರು, ರೈತರೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಎಪಿಎಂಸಿ ಉಲ್ಲಂಘಿಸಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಎಪಿಎಂಸಿ ಆಡಳಿತವು ಬಳಕೆಯಾಗದೇ ಉಳಿದಿರುವ 125 ಎಕರೆ ಜಮೀನನ್ನು ರೈತರಿಗೆ ಮರಳಿಸಬೇಕು. ಬೇರೆ ಬೇರೆ ಉದ್ದೇಶಗಳಿಗೆ ಜಮೀನು ಹಂಚಿಕೆ ಮಾಡಿದ ಎಪಿಎಂಸಿಯು ಅದರ ಮುಖಬೆಲೆಯನ್ನು ಸಂಬಂಧಿಸಿದ ರೈತರಿಗೆ ಪಾವತಿಸಬೇಕೆಂದು ಆಗ್ರಹಿಸಿದರು.
ಎಪಿಎಂಸಿಗೆ ಜಮೀನು ನೀಡಿದ ಕೃಷಿಕರು ನಿರುದ್ಯೋಗಿಗಳಾಗಿದ್ದು, ಅವರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಅವರ ಬಳಕೆಯಾಗದ ಜಮೀನು ಕೂಡಲೇ ಹಿಂದಿರುಗಿಸುವಂತೆ ಹೋರಾಟಗಾರರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಮಾಜಿ ಶಾಸಕ ಪಾಪಾರೆಡ್ಡಿ ವಹಿಸಿದ್ದರು. ಆರ್‌ಡಿಎ ಸದಸ್ಯ ರವಿ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.