ಒಗ್ಗೂಡಿದರೆ ಎಲ್ಲ ಕ್ಷೇತ್ರಗಳಲ್ಲಿ ಗೆಲವು ಖಚಿತ: ಮಾಸ್ತರ್ವಿಶ್ವಾಸ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.3
ಸಿಪಿಎಂಎಲ್ ಪಕ್ಷದ ವಿವಿಧ ಬಣಗಳು ಒಗ್ಗೂಡಿ ರಾಜ್ಯ ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಸ್ಪರ್ಧಿಸಿದಲ್ಲಿ ಏಳೂ ಕ್ಷೇತ್ರ ಗಳಲ್ಲಿ ಗೆಲುವು ನಿಶ್ಚಿತ ಎಂದು ಸಿಪಿಎಂಎಲ್ ಜನಶಕ್ತಿ ಸಂಘಟನೆಯ ಮುಖಂಡ ವಿ.ಎಚ್. ಮಾಸ್ತರ್ ವಿಶ್ವಾಸ ವ್ಯಕ್ತಪಡಿಸಿದರು.
ಅವರು ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಬಾರಿ ಕೇಂದ್ರ ಸರ್ಕಾರದ ಬೆಲೆಯೇರಿಕೆ ನೀತಿ ವಿರುದ್ಧ ಕರೆ ನೀಡಿದ್ದ ಭಾರತ್ ಬಂದ್ ವೇಳೆ ಕಾರ್ಮಿಕ ಸಂಘಟನೆಗಳೆಲ್ಲವೂ ಒಂದಾಗಿದ್ದರಿಂದ ಬಂದ್ ಗೆ ಭಾರೀ ಬೆಂಬಲ ವ್ಯಕ್ತವಾಗಿತ್ತು. ಅದೇ ಮಾದರಿಯಲ್ಲಿ ಸದ್ಯದ ಚುನಾವಣೆ ಎದುರಿಸುವ ಅವಶ್ಯಕತೆಯಿದೆ ಎಂದು ಸಲಹೆ ನೀಡಿದರು.
ಸದ್ಯ ಚುನಾವಣೆಯಲ್ಲಿ ಸಿಪಿಎಂಎಲ್ ಕೆ.ಎನ್. ರಾಮಚಂದ್ರನ್ ಬಣವು 30 ಕ್ಷೇತ್ರ, ಆಚಾರ್ಯ ದೀಪಂಕರ್ ಭಟ್ಟಾಚಾರ್ಯ ಬಣವು 20 ಕ್ಷೇತ್ರಗಳು, ಎಸ್ಯುಸಿಐ 11 ಕ್ಷೇತ್ರಗಳಲ್ಲಿ, ಸಿಪಿಎಂ 10 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಕಾರ್ಮಿಕರ ಹೋರಾಟಕ್ಕೆ ತೀವ್ರ ಹಿನ್ನಡೆಯಾಗಲಿದೆ. ಎಲ್ಲರೂ ಒಗ್ಗೂಡಿ ಕಣಕ್ಕಿಳಿದಲ್ಲಿ ಗೆಲುವು ನಿಶ್ಚಿತ ಎಂದು ಸಲಹೆ ನೀಡಿದರು.
ಪರಸ್ಪರ ಸಮಾಲೋಚನೆಯಿಂದ ಪ್ರತಿಯೊಂದೂ ಪಕ್ಷದ ಅಭ್ಯರ್ಥಿಗಳು ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಪ್ರತಿ ಕ್ಷೇತ್ರದಲ್ಲಿ ಒಬ್ಬರನ್ನು ಕಣಕ್ಕಳಿಸುವುದು ಅವಶ್ಯಕ. ಇದು ಸಾಧ್ಯವಾದಲ್ಲಿ ಗೆಲುವು ಸಿಪಿಎಂ ಪಕ್ಷದ ಪಾಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ನಿಟ್ಟಿನಲ್ಲಿ ತಾವು ಚರ್ಚೆಗೆ ಸಿದ್ಧ ಎಂದು ಘೋಷಿಸಿದರು.
ಅತಂತ್ರ ಸರ್ಕಾರ: ಪ್ರಸಕ್ತ ಚುನಾವಣೆಯಲ್ಲಿ ತಾವು ಆಕಾಂಕ್ಷಿಯಾಗಿದ್ದು ಕಳೆದ ಅನೇಕ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾಗಿ ತಿಳಿಸಿ, ಪಕ್ಷದ ವರಿಷ್ಠರ ಸೂಚನೆಯಂತೆ ಮುನ್ನಡೆಯುವುದಾಗಿ ಹೇಳಿದರು. ರಾಜ್ಯದಲ್ಲಿ ಇದುವರೆಗೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರಕ್ಕೆ ಜಿಲ್ಲೆಯಲ್ಲಿ ತೀವ್ರ ಮುಖಭಂಗವಾಗಲಿದೆ. ಹೀನಾಯ ಸೋಲು ಬಿಜೆಪಿ ನಿಶ್ಚಿತ. ಆದರೆ ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರೆಯುವುದು ಅಸಾಧ್ಯ ಎಂದು ಭವಿಷ್ಯ ನುಡಿದ ಅವರು, ಕೇಂದ್ರದಲ್ಲಿಯೂ ಮುಂದಿನ ದಿನಗಳಲ್ಲಿ ಚುನಾವಣೆ ನಡೆದರೆ ಅತಂತ್ರ ಸರ್ಕಾರ ರಚನೆ ಅನಿವಾರ್ಯ ಎಂದರು.
ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಸಾವಿರಾರು ಮತದಾರರ ಹೆಸರುಗಳು ಪಟ್ಟಿಯಿಂದ ನಾಪತ್ತೆಯಾಗಿದ್ದು, ಅಂಥ ಹೆಸರುಗಳ ಪುನಾ ಸೇರ್ಪಡೆಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ಮತದಾರರಿಗೆ ಫಾರ್ಮ್-6ರ ಸಲ್ಲಿಕೆಗೆ ಸೂಚಿಸಲಾಗುತ್ತಿದೆ. ಜಿಲ್ಲಾಡಳಿತ ಮಾಡಿದ ತಪ್ಪಿಗೆ ಮತದಾರರು ತೊಂದರೆ ಎದುರಿಸುವಂತಾಗಿದೆ ಎಂದು ಟೀಕಿಸಿದರು.
ಮತದಾರರ ಪಟ್ಟಿ: ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರ್ ಅವರೇ ಈ ಪ್ರಮಾದಕ್ಕೆ ಹೊಣೆಯಾಗಿದ್ದು, ಕೂಡಲೇ ಮತದಾರರ ಪಟ್ಟಿ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ರಾಯಚೂರು ಮತ ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಗೆ 1.86 ಲಕ್ಷ ಮತದಾರರ ಹೆಸರು ಪಟ್ಟಿಯಲ್ಲಿರುವಂತೆ ನೋಡಿಕೊಳ್ಳಲು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶ್ರೀನಿವಾಸುಲು, ನರಸಿಂಹಲು, ತಿಮ್ಮಪ್ಪ, ತಿಮ್ಮಕ್ಕ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

