ರಾಯಚೂರು

ಜೆಸ್ಕಾಂನಿಂದ ಗ್ರಾಹಕರಿಗೆ ಶಾಕ್

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಏ.5
ಖಾಸಗೀಕರಣ, ಉದಾರೀಕರಣ, ಜಾಗತೀಕರಣ ಯೋಜನೆಗಳನ್ನು ಜಾರಿಗೆ ತರುವ ಭರದಲ್ಲಿ ಅಪೂರ್ಣ ಯೋಜನೆಗಳಿಂದಾಗಿ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯು ಕೋಟ್ಯಂತರ ರು. ಹಾನಿಗೆ ಸಿಲುಕಿದೆ. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಜೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮರ್ಪಕ ಸೇವೆ ಒದಗಿಸದಿದ್ದಲ್ಲಿ ಹೋರಾಟಕ್ಕಿಳಿಯುವುದಾಗಿ ಕರ್ನಾಟಕ ವಿದ್ಯುತ್ ಗ್ರಾಹಕರ ವೇದಿಕೆಯ ವಲಯಾಧ್ಯಕ್ಷ ರಾಜಶೇಖರ್ ಎಚ್ಚರಿಸಿದರು.
ಅವರು ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2005-06ರಲ್ಲಿ ನಗರದ ವಿದ್ಯುತ್ ಪೂರೈಕೆ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಸುಮಾರು 13 ಕೋಟಿ ವೆಚ್ಚದಲ್ಲಿ ಎಲ್ ಆ್ಯಂಡ್ ಟಿ ಕಂಪನಿಗೆ ಕಾಮಗಾರಿ ವಹಿಸಿಕೊಡಲಾಗಿತ್ತು. ಆದರೆ ಆ ಕಾಮಗಾರಿಯಿಂದ ವ್ಯವಸ್ಥೆ ಸುಧಾರಿಸದೇ ಮತ್ತಷ್ಟು ಹದಗೆಟ್ಟಿದೆ ಎಂದು ಟೀಕಿಸಿದರು.
ಗ್ರಾಹಕರಿಗೆ ಹೊರೆ: 2004ರಲ್ಲಿ ಭೂಮಿಯಲ್ಲಿ ವಿದ್ಯುತ್ ತಂತಿ ಅಳವಡಿಕೆ ನೆಪದಲ್ಲಿ ಗ್ರಾಹಕರಿಂದ ಜೆಸ್ಕಾಂ ತಲಾ 5 ಸಾವಿರ ಪಡೆದಿದೆ. ಈ ಕಾಮಗಾರಿಗೆ ಕೇವಲ 500 ವೆಚ್ಚವಾಗುತ್ತಿದ್ದರೂ ಗ್ರಾಹಕರಿಂದ ಹೆಚ್ಚಿನ ಹಣ ಪಡೆಯಲಾಗಿದೆ. 2006-07ರಲ್ಲಿ ಗ್ರಾಹಕರ ಮನೆಯೊಳಗಿನ ವಿದ್ಯುತ್ ಮೀಟರ್‌ಗಳನ್ನು ಮನೆಯ ಮುಂಭಾಗದಲ್ಲಿ ಅಳವಡಿಸಲು ಆದೇಶಿಸಿದ ಜೆಸ್ಕಾಂ ಈ ಕಾರ್ಯಕ್ಕಾಗಿ 50 ಕೋಟಿ ರು. ನಷ್ಟು ಹಣ ವೆಚ್ಚ ಮಾಡಿ ಈ ಹೊರೆಯನ್ನು ಗ್ರಾಹಕರಿಗೆ ಹೊರೆ ಮಾಡಿತೆಂದು ಆರೋಪಿಸಿದರು.
ಗ್ರಾಮೀಣ ಪ್ರದೇಶದಲ್ಲಿ ರಾಜೀವ್‌ಗಾಂಧಿ ವಿದ್ಯುತೀಕರಣ ಯೋಜನೆ ಅಡಿ ವಿವಿಧ ಖಾಸಗಿ ಕಂಪನಿಗಳಿಗೆ ನೂರಾರು ಕೋಟಿ ರು. ವೆಚ್ಚದ ಕಾಮಗಾರಿ ವಹಿಸಿ ಯೋಜನೆ ಸಮರ್ಪಕ ಜಾರಿಯಾಗದೇ ಅನುದಾನ ಕೊಳ್ಳೆ ಹೊಡೆಯಲಾಗಿದೆ. ಕಾಮಗಾರಿಯೂ ಕಳಪೆಯಾಗಿದ್ದು, ಗ್ರಾಮೀಣರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಟೀಕಿಸಿದರು.
ಇನ್ಫೋಸಿಸ್ ಬೇಜವಾಬ್ದಾರಿ: ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಒದಗಿಸುವ ನೆಪದಲ್ಲಿ ಕೋಟಿಗಟ್ಟಲೇ ಹಣ ಪಡೆದು ಇದುವರೆಗೆ ಸಮರ್ಪಕ ವಿದ್ಯುತ್ ಒದಗಿಸಿಲ್ಲ. 10 ವರ್ಷಗಳೇ ಕಳೆದರೂ ರೈತರಿಗೆ ವಿದ್ಯುತ್ ಒದಗಿಸಲು ಜೆಸ್ಕಾಂಗೆ ಸಾಧ್ಯವಾಗಿಲ್ಲ. ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಅನಿಯಮಿತವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಹೀಗೆ ಉಳಿತಾಯವಾಗುವ ವಿದ್ಯುತ್ ಬೇರೆ ಬೇರೆ ನಗರಗಳಿಗೆ ಒದಗಿಸುವ ಹುನ್ನಾರವನ್ನು ಜೆಸ್ಕಾಂ ಅಧಿಕಾರಿಗಳು ಮಾಡುತ್ತಿದ್ದಾರೆಂದು ಆರೋಪಿಸಿದರು.
ಜೆಸ್ಕಾಂ ವ್ಯಾಪ್ತಿಯಲ್ಲಿ ಶೇ.32ರಷ್ಟು ವಿದ್ಯುತ್ ಸೋರಿಕೆಯಾಗುತ್ತಿದೆ ಎಂದು ಹೇಳುವ ಅಧಿಕಾರಿಗಳು ಅದರ ಆರ್ಥಿಕ ಹೊರೆಯನ್ನು ಗ್ರಾಹಕರ ಮೇಲೆ ಹೊರಿಸುವುದು ಅದೆಷ್ಟರ ಮಟ್ಟಿಗೆ ಸರಿ ಎಂಬುದನ್ನು ಯೋಚಿಸಬೇಕಿದೆ. ಜೆಸ್ಕಾಂನಲ್ಲಿ ಅಕೌಂಟಿಂಗ್ ವಿಭಾಗದವರು ಇನ್ಫೋಸಿಸ್ ಸಂಸ್ಥೆಗೆ ಬಿಲ್ಲಿಂಗ್ ವ್ಯವಸ್ಥೆ ನಿರ್ವಹಣೆಗೆ ನೀಡಿದ್ದು, ಅದರಿಂದ ಗ್ರಾಹಕರಿಗೆ ಕಳೆದ ಮೂರು ನಾಲ್ಕು ತಿಂಗಳಿನಿಂದ ಸಮರ್ಪಕವಾಗಿ ವಿದ್ಯುತ್ ಬಳಕೆ ಬಿಲ್ ಒದಗಿಸುತ್ತಿಲ್ಲ ಎಂದು ದೂರಿದರು.
ಅಕ್ರಮಗಳ ಸರಮಾಲೆ: 2009ರ ಪ್ರವಾಹ ಸಂದರ್ಭದಲ್ಲಿ ಸರ್ಕಾರದಿಂದ ದೊರೆತ ಅನೇಕ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದು, ಅದರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಗೋಜಿಗೆ ಜೆಸ್ಕಾಂ ಹೋಗಿಲ್ಲ ಎಂದು ಟೀಕಿಸಿದರು.
ಇಲ್ಲಿನ ಜೆಸ್ಕಾಂನಲ್ಲಿ ಕಳೆದ 15 ವರ್ಷಗಳಿಂದ ಅನೇಕರು ಕಾರ್ಯನಿರ್ವಹಿಸುತ್ತಿದ್ದು ಅಂಥವರ ವರ್ಗಾವಣೆಯಾದರೂ ಮರಳಿ ನಗರಕ್ಕೆ ವರ್ಗಾಯಿಸಿಕೊಂಡು ಬರುತ್ತಿದ್ದು, ಅದರಿಂದ ಆಡಳಿತ ಯಂತ್ರ ಕುಸಿತ ಕಂಡಿದೆ. ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಗ್ರಾಹಕರಿಗೆ ತೊಂದರೆಯಾಗಿದೆ ಎಂದು ದೂರಿದರು.
ತಾಂತ್ರಿಕ ಕಾರಣಗಳನ್ನೊಡ್ಡಿ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಮುಖ್ಯ ಕಚೇರಿಯತ್ತಲೇ ದೂರುತ್ತಿದ್ದು, ಅದರಿಂದಾಗಿ ಗ್ರಾಹಕರಿಗೆ ವಿದ್ಯುತ್ ಸಂರ್ಪಕವಿಲ್ಲದೇ ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಈ ಎಲ್ಲ ಅಂಶಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜೆಸ್ಕಾಂ ಆಡಳಿತ ಮುಂದಾಗದಿದ್ದಲ್ಲಿ ಮುಂದಿನ ಒಂದು ವಾರದ ನಂತರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎಂ. ಶಿವಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹಲು ಗಾಜರಾಳ್, ತಾಲೂಕು ಅಧ್ಯಕ್ಷ ಶಾಮಸುಂದರ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.