ರಾಯಚೂರು

ವಿಶ್ವಕ್ಕೆ ತಂತ್ರಜ್ಞಾನ ಶಿಕ್ಷಣ ಕಲಿಸಿದ್ದೇ ಭಾರತೀಯರು

Published On :

ಕನ್ನಡಪ್ರಭ ವಾರ್ತೆ,ಸಿಂಧನೂರು,ಏ.7
ಭಾರತದ ತಕ್ಷಶಿಲಾ, ನಲಂದಾ, ಕೋನಾರ್ಕ್‌ನ ಸೂರ್ಯ ದೇವಾಲಯ, ದೆಹಲಿಯ ಕೆಂಪು ಕೋಟೆ, ವಿಜಯ ನಗರ ಅರಸರ ವೈಭವ, ಈ ಎಲ್ಲ ಕಟ್ಟಡಗಳ ನಿರ್ಮಾಣದ ಹಿಂದೆ ತಾಂತ್ರಿಕ ಶಿಕ್ಷಣದ ರೂವಾರಿ ಎಂಜಿನಿಯರ್‌ಗಳಿದ್ದಾರೆ. ಅದಕ್ಕಾಗಿಯೇ ವಿಶ್ವದಲ್ಲಿಯೇ ಭಾರತ ತಾಂತ್ರಿಕ ಶಿಕ್ಷಣದ ತವರೂರು ಎಂದು ಖ್ಯಾತಿ ಪಡೆದಿದೆ ಎಂದು ಎಸ್‌ಡಿಎಂಟಿ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತಾಧಿಕಾರಿ ಶರಣು ಹಿರೇಮಠ ಹೇಳಿದರು.
ನಗರದ ಎಸ್‌ಡಿಎಂಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ತಾಂತ್ರಿಕ ಶಿಕ್ಷಣ ಬೃಹತ್ ನಗರಗಳಿಗೆ ಸೀಮಿತವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಗದಂತಾಗಿತ್ತು. ಸಿಂಧನೂರು ತಾಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಾಪಿಸಿರುವ ಈ ಪಾಲಿಟೆಕ್ನಿಕ್ ಕಾಲೇಜು ನಿಜಕ್ಕೂ ಅರ್ಥಪೂರ್ಣವಾದುದು. ನೀರಿನಂತೆ ಹಣ  ಖರ್ಚು ಮಾಡಿ ಉನ್ನತ ಶಿಕ್ಷಣ ಪಡೆದರೂ ಸರ್ಕಾರಿ ಉದ್ಯೋಗಗಳು ಸಿಗುತ್ತಿಲ್ಲ. ಬದಲಾಗಿ ತಾಂತ್ರಿಕ ಶಿಕ್ಷಣ ಪಡೆದರೆ ಸ್ವಯಂ ಉದ್ಯೋಗಿಗಳಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದರು.
ವಿಶ್ವೇಶ್ವರಯ್ಯ ಮಾದರಿಯಾಗಲಿ: ಪ್ರಪಂಚ ಕಂಡ ಶ್ರೇಷ್ಠ ಅಭಿಯಂತರ ಸರ್. ಎಂ.ವಿಶ್ವೇಶ್ವರಯ್ಯನವರು ಇಂತಹ ಪುಟ್ಟ ಕಾಲೇಜಿನಿಂದಲೇ ಶಿಕ್ಷಣ ಪ್ರಾರಂಭಿಸಿ ಬೆಟ್ಟವಾಗಿ ಬೆಳೆದು ನಿಂತಿದ್ದರು. ಅವರ ಮಾರ್ಗದಲ್ಲೇ ಮುನ್ನಡೆಯಿರಿ ಎಂದು ಸಲಹೆ ನೀಡಿದ ಅವರು, ತಾಂತ್ರಿಕ ಶಿಕ್ಷಣದಲ್ಲಿ ನಾವು ಏನನ್ನು ಕಲಿಯುತ್ತೇವೆಯೋ ಅದೇ ವೃತ್ತಿಯನ್ನು ಮಾಡುತ್ತೇವೆ. ಆದರೆ ಉಳಿದ ಶಿಕ್ಷಣದಲ್ಲಿ ಕಲಿಯುವುದೊಂದು ಮಾಡುವ ಕೆಲಸ ಮತ್ತೊಂದು ಇರುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿ ಜೀವನ ಅಮೂಲ್ಯ: ಕನಕದಾಸ ಪದವಿ ಕಾಲೇಜಿನ ಪ್ರಾಚಾರ್ಯ ತಿರುಪತಿ ವಡ್ಕಿ ಮಾತನಾಡಿ, ಗುರು- ಶಿಷ್ಯರ ಸಂಬಂಧ ಮಹಾ ಭಾರತದ ದ್ರೋಣಾಚಾರ್ಯ ಮತ್ತು ಏಕಲವ್ಯರಂತೆ ಇರಬೇಕು. ವಿದ್ಯಾರ್ಥಿ ಜೀವನ ಬಹು ಅಮೂಲ್ಯವಾದದು. ಪ್ರತಿಯೊಬ್ಬರ ಜೀವನದಲ್ಲಿ ಉತ್ತಮ ಅವಕಾಶಗಳು ಖಂಡಿತವಾಗಿಯೂ ಬರುತ್ತವೆ. ಅದನ್ನು ಸರಿಯಾಗಿ ಬಳಸಿಕೊಂಡು ನಿಮ್ಮ ಮುಂದಿನ ಜೀವನದಲ್ಲಿ ಮುಂದೆ ಬನ್ನಿ.
ಭಾರತದ ಸಂಸ್ಕೃತಿ ವಿಶ್ವದಲ್ಲಿ ತನ್ನದೇಯಾದ ಗೌರವವನ್ನು ಹೊಂದಿದೆ. ಅದನ್ನು ಪ್ರತಿಯೊಬ್ಬ ವಿದ್ಯಾರ್ಥಿ ಕಾಪಾಡಿಕೊಂಡು ಹೋಗಬೇಕು. ಮೌಲ್ಯಯುತ ಹಾಗೂ ಸಂಸ್ಕಾರದ ಶಿಕ್ಷಣದ ಕೊರತೆಯಿಂದಾಗಿ ಪ್ರಸ್ತುತ ದಿನಗಳಲ್ಲಿ ಭಾವನೆಗಳು ಕುಸಿಯುತ್ತಿವೆ. ಸಂಸ್ಕಾರ ಇಲ್ಲದ ಶಿಕ್ಷಣ ಸಮಾಜಕ್ಕೆ ಮಾರಕವಾಗುತ್ತಿದೆ. ಸಂಸ್ಕಾರವುಳ್ಳ  ಶಿಕ್ಷಣ ಈ ನಾಡಿಗೆ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಟ್ರಸ್ಟಿ ರಾಜೇಂದ್ರ ಸೇಠ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಜಿ.ನಾಗರಾಜ, ಹಿರಿಯ ಉಪನ್ಯಾಸಕರಾದ ಟಿ.ಪಂಪಾಪತಿ, ಕರಿಯಪ್ಪ ಸಾಹುಕಾರ, ಪತ್ರಕರ್ತ ಶರಣಪ್ಪ ಗೋನಾಳ, ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಉಪನ್ಯಾಸಕ ವಿಜಯ ಕುಮಾರ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.