ಬಷೀರುದ್ದೀನ್ ಜತೆ ಚರ್ಚೆಗೆ ಸಿದ್ಧ: ಯಾಸೀನ್
ಕನ್ನಡಪ್ರಭ ವಾರ್ತೆ , ರಾಯಚೂರು , ಏ.13
ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಜಿಪಂ ಮಾಜಿ ಸದಸ್ಯ ಬಷೀರುದ್ದೀನ್ ಅವರೊಂದಿಗೆ ಚರ್ಚಿಸಲು ಸಿದ್ಧ ಎಂದಿರುವ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಯಾಸೀನ್ ಅವರು, ಪಕ್ಷದ ವರಿಷ್ಠರು ಮನವೊಲಿಕೆ ಕಾರ್ಯ ಕೈಗೊಳ್ಳಲಿದ್ದಾರೆಂದು ಹೇಳಿದರು.
ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಪಂ ಮಾಜಿ ಸದಸ್ಯ ಬಷೀರುದ್ದೀನ್ ಅವರಿಗೆ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಸಂದರ್ಭದಲ್ಲಿ ಆದ್ಯತೆ ನೀಡಲಾಗಿದೆ. ಕಳೆದ ಅವಧಿಗೆ ಜಿಪಂ.ನಲ್ಲಿ ಬಷೀರುದ್ದೀನ್ ಅವರ ಪತ್ನಿಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು ಎಂದು ಹೇಳಿದರು.
ಟಿಕೆಟ್ ಕೈತಪ್ಪಿದ್ದಕ್ಕೆ ನಾನು ಕಾರಣನಲ್ಲ: ರಾಯಚೂರು ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಹಳ್ಳಿಗಳು ಬರುತ್ತವೆ. ಆ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವಾಗ ತಾವು ಬಷೀರುದ್ದೀನ್ ಅವರನ್ನು ಸಂಪರ್ಕಿಸಿದ್ದಿದೆ. ಇತ್ತೀಚೆಗೆ ನಡೆದ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಷೀರುದ್ದೀನ್ ಅವರು ಸೂಚಿಸಿದವರಿಗೆ ಟಿಕೆಟ್ ನೀಡಲಿಲ್ಲ ಎಂಬ ಅಸಮಾಧಾನ ಅವರಲ್ಲಿರಬಹುದು. ಆದರೆ ಅದಕ್ಕೆ ತಾವು ಕಾರಣರಲ್ಲ. ಪಕ್ಷದಲ್ಲಿ ಅನೇಕ ಹಿರಿಯರು ಸೇರಿ ಆ ಚುನಾವಣೆಯಲ್ಲಿ ಟಿಕೆಟ್ಗೆ ಹೆಸರು ಅಂತಿಮಗೊಳಿಸಿದ್ದಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷವು ಬಷೀರುದ್ದೀನ್ ಅವರಿಗೆ ಎಲ್ಲ ಹಂತದಲ್ಲೂ ಪ್ರಾಶಸ್ತ್ಯ ನೀಡಿದರೂ ಅವರು ಪಕ್ಷೇತರರಾಗಿ ಸ್ಪರ್ಧಿಸಿದ್ದು ಅಚ್ಚರಿ ತಂದಿದೆ. ಅವರೊಂದಿಗೆ ಅಗತ್ಯ ಬಿದ್ದಲ್ಲಿ ತಾವು ಇಲ್ಲವೇ ಪಕ್ಷದ ಹಿರಿಯರು ಮಾತನಾಡಲಿದ್ದು, ಬಷೀರುದ್ದೀನ್ ಅವರು ತಮ್ಮ ನಾಮಪತ್ರ ಹಿಂಪಡೆಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಗೆಲವಿಗೆ ಪಾಪಾರೆಡ್ಡಿ ಸಹಕಾರಿ: ಪ್ರಸಕ್ತ ಚುನಾವಣೆಯಲ್ಲಿ ತಾವು ಕಳೆದ ಬಾರಿ ಕೈಗೊಂಡ ಅಭಿವೃದ್ಧಿಯ ವಿಷಯಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಾಗಿ ತಿಳಿಸಿದ ಅವರು, ಮಾಜಿ ಶಾಸಕ ಪಾಪಾರೆಡ್ಡಿ ಅವರು ತಮಗೆ ಅನೇಕ ಸಂದರ್ಭದಲ್ಲಿ ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಅವರು ಕಾಂಗ್ರೆಸ್ ಪಕ್ಷವನ್ನು ಸೇರಿರುವುದು ತಮ್ಮ ಗೆಲವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಸದ್ಯದ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳು ತಮಗೆ ಪ್ರತಿಸ್ಪರ್ಧಿಗಳೇ ಹಾಗೂ ತಮಗೆ ಸ್ನೇಹಿತರೂ ಕೂಡ. ಆದರೆ ಪೈಪೋಟಿ ಸಹಜ. ನಗರದಲ್ಲಿ ಕಳೆದ ಬಾರಿ ಕೈಗೊಂಡ ಅಭಿವೃದ್ಧಿಗೆ ಮತದಾರರು ಮನ್ನಣೆ ನೀಡಲಿದ್ದಾರೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಬಸವರಾಜ ರೆಡ್ಡಿ, ರಸೂಲ್, ಇಸ್ಮಾಯಿಲ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

