ನಾಮಪತ್ರ ಸುರಿಮಳೆ
ಸಿಂಧನೂರು: ವಿಧಾನಸಭೆ ಚುನಾವಣೆಗೆ ಸೋಮವಾರ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಮ್ಮ ಸಾವಿರಾರು ಬೆಂಬಲಿಗರೊಡನೆ, ಪಟಾಕ್ಷಿ ಸುರಿಮಳೆಗಳ ಮಧ್ಯೆ ಕೃಷಿ ಇಲಾಖೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಂಪನಗೌಡ ಬಾದರ್ಲಿ, ಜೆಡಿಎಸ್ ಅಭ್ಯರ್ಥಿ ವೆಂಕಟರಾವ್ ನಾಡಗೌಡ, ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್, ಬಿಎಸ್‌ಆರ್‌ನಿಂದ ಕೆ.ಕರಿಯಪ್ಪ, ಕೆಜೆಪಿ ರಾಜಶೇಖರ ಪಾಟೀಲ್, ಸಿಪಿಐನಿಂದ ಬಾಷುಮಿಯಾ, ಜೆಡಿಯುನಿಂದ ಶಾಂತಗೌಡ ಜಾಗೀರದಾರ ತಮ್ಮ ಅಪಾರ ಬೆಂಬಲಿಗರೊಡನೆ ಆಗಮಿಸಿ ಚುನಾವಣಾಧಿಕಾರಿ ಎ.ಡಿ. ಮೋಮಿನ್‌ಗೆ ನಾಮಪತ್ರ ಸಲ್ಲಿಸಿದರು.
ಬೆಂಬಲಿಗರೊಂದಿಗೆ ನಾಮಪತ್ರ: ಬೆಳಿಗ್ಗೆ 10 ಗಂಟೆಯಿಂದ ಆಯಾಪಕ್ಷದ ಬೆಂಬಲಿಗರು ತಮ್ಮ ತಮ್ಮ ಪಕ್ಷದ ಕಾರ್ಯಾಲಯಗಳಿಂದ ಅಭ್ಯರ್ಥಿಗೆ ಜಯಕಾರ ಹಾಕುವ ಮೂಲಕ ತಹಸೀಲ್ದಾರ್ ಕಚೇರಿಗೆ ಆಗಮಿಸಿದರು. ಮೊದಲಿಗೆ ಬಿಎಸ್‌ಆರ್ ಪಕ್ಷದ ಅಭ್ಯರ್ಥಿ ಕೆ. ಕರಿಯಪ್ಪ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ನಂತರ ಜೆಡಿಯುನಿಂದ ಶಾಂತಗೌಡ ಜಾಗೀರದಾರ, ಕಾಂಗ್ರೆಸ್‌ನಿಂದ ಹಂಪನಗೌಡ ಬಾದರ್ಲಿ ಹೀಗೆ ನಾಮಪತ್ರಗಳನ್ನು ಸಲ್ಲಿಸಿದರು. ಮಧ್ಯಾಹ್ನ 2-30ರ ಸುಮಾರಿಗೆ ಭಾರತ ಕಮ್ಯುನಿಷ್ಟ ಪಕ್ಷದಿಂದ ಬಾಷುಮಿಯಾ ಕೊನೆಗೆ ನಾಮಪತ್ರ ಸಲ್ಲಿಸಿದರು.
ಪ್ರವೇಶಕ್ಕೆ ನಿರ್ಬಂಧ: ಮಧ್ಯಾಹ್ನದವರೆಗೆ ತಹಸೀಲ್ದಾರ್ ಕಚೇರಿಗೆ ಎದುರಗಡೆ ಸಾವಿರಾರು ಸಂಖ್ಯೆಯಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಪೊಲೀಸ್ ಅಧಿಕಾರಿಗಳು, ಅರೆಮಿಲಿಟರಿ ಪಡೆಗಳು ತಹಸೀಲ್ ಕಚೇರಿಯ ಆವರಣದಲ್ಲಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿ ಸೇರಿದಂತೆ ಕೇವಲ 5 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿದ್ದರು. ಕಳೆದ ಅನೇಕ ಚುನಾವಣೆಗಳನ್ನು ಗಮನಿಸಿದಾಗ ಈ ಬಾರಿ ಚುನಾವಣಾ ಆಯೋಗದ ಕಟ್ಟುನಿಟ್ಟಿನ ನಿಯಮಗಳ ಅನ್ವಯ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಯಾವ ಪಕ್ಷದ ಕಾರ್ಯಕರ್ತರಿಗೂ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದನ್ನು ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಶ್ಲಾಘಿಸಿದರು. ನಾಮಪತ್ರ ಸಲ್ಲಿಸಲು ಆಗಮಿಸಿದ್ದ ವಿವಿಧ ಪಕ್ಷಗಳ ಕಾರ್ಯಕರ್ತರು ಬಿಸಿಲಿನ ಧಗೆ ಕಡಿಮೆ ಮಾಡಿಕೊಳ್ಳಲು ಎಳೆನೀರು, ಕಬ್ಬಿನ ಹಾಲು, ಕಲ್ಲಂಗಡಿ ಹಣ್ಣುಗಳನ್ನು ತಿನ್ನುತ್ತಿದ್ದ ದೃಶ್ಯ ಕಂಡು ಬಂತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

