ರಾಯಚೂರು

ನನ್ನದು ಗೂಂಡಾ ಪ್ರವೃತ್ತಿಯಲ್ಲ, ಶೀಘ್ರ ಜನಾಭಿಪ್ರಾಯ ಸ್ಪಷ್ಟ

Published On :

ಕನ್ನಡಪ್ರಭ ವಾರ್ತೆ, ದೇವದುರ್ಗ, ಏ.16
ತಮ್ಮದು ಗೂಂಡಾ ಪ್ರವೃತ್ತಿಯಲ್ಲ. ಮತದಾರರ ಮನವೊಲಿಸಿ ಮತ ಪಡೆಯುವ ಮೂಲಕ ತಮ್ಮ ಬಗ್ಗೆ ಜನರಲ್ಲಿರುವ ಅಭಿಪ್ರಾಯ ಸ್ಪಷ್ಟಪಡಿಸುವುದಾಗಿ ಸವಾಲು ಹಾಕಿದ ಮಾಜಿ ಶಾಸಕ ಪಾಪಾರೆಡ್ಡಿ, ದೇವದುರ್ಗದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಂದು ಆರೋಪಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಶಾಸಕ ಶಿವನಗೌಡರು ತಮ್ಮನ್ನು ಛೋಟಾ ಗೂಂಡಾ ಎಂದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ತಮ್ಮದು ಗೂಂಡಾ ಸಂಸ್ಕೃತಿಯಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಶಿವನಗೌಡರು ಮತದಾರರಲ್ಲಿ ಭಯ ಹುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆಂದು ಟೀಕಿಸಿದರು.
ಅನುದಾನ ದುರ್ಬಳಕೆ ಆರೋಪ: ಬಿಜೆಪಿ ಶಾಸಕರ ದಬ್ಬಾಳಿಕೆಯಿಂದ ರೋಸಿ ಹೋಗಿರುವ ಕ್ಷೇತ್ರದ ಮತದಾರರು ಕಾಂಗ್ರೆಸ್ನತ್ತ ಒಲವು ತೋರುತ್ತಿದ್ದು, ಪ್ರಸಕ್ತ ಚುನಾವಣೆಯಲ್ಲಿ ಶಿವನಗೌಡರಿಗೆ ಸೋಲು ನಿಶ್ಚಿತ. ಕ್ಷೇತ್ರದ ಅಭಿವೃದ್ಧಿಗೆ 2 ಸಾವಿರ ಕೋಟಿ ಅನುದಾನ ತಂದಿದ್ದಾಗಿ ಹೇಳಿರುವ ಶಿವನಗೌಡರು ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟ ಎಂದು ಆರೋಪಿಸಿದರು.
ಪಿತ್ರಾರ್ಜಿತ ಆಸ್ತಿ ಬಹಿರಂಗಪಡಿಸಲಿ: ಶಾಸಕ ಶಿವನಗೌಡ ನಾಯಕ ಕಳೆದ ಐದು ವರ್ಷಗಳಲ್ಲಿ ಕೋಟ್ಯಧಿಪತಿಯಾಗಿರುವುದು ಅವರು ನಾಮಪತ್ರ ಸಲ್ಲಿಕೆ ವೇಳೆ ನೀಡಿರುವ ಆಸ್ತಿ ಕುರಿತ ಮಾಹಿತಿಯಿಂದ ಬಯಲಾಗಿದೆ. ಅವರು ಪಿತ್ರಾರ್ಜಿತ ಆಸ್ತಿ ಎಷ್ಟು ಎಂಬುದನ್ನು ಬಹಿರಂಗಗೊಳಿಸಲಿ ಎಂದು ಸವಾಲು ಹಾಕಿದರು.
ತಾಲೂಕಿನ ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಹಳ್ಳಿಗಳಲ್ಲಿ ಜನರಿಗೆ ಕುಡಿಯಲು ನೀರಿಲ್ಲ. ಆದರೆ ಶಿವನಗೌಡ ನಾಯಕರು ಸಮಸ್ಯೆಗಳ ಪರಿಹಾರಕ್ಕೆ ಮಾತ್ರ ಪ್ರಯತ್ನಿಸಿಲ್ಲ. ಬಹುತೇಕ ಗ್ರಾಮಗಳಲ್ಲಿ ಮದ್ಯದ ಮಾರಾಟ ನಿರಾತಂಕವಾಗಿ ಸಾಗಿದೆ ಅಬಕಾರಿ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಮತ ಖರೀದಿ ಅಸಾಧ್ಯ: ತಾಲೂಕಿನ ಜನತೆ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ವೆಂಕಟೇಶ ನಾಯಕ್ ಅವರಿಗೆ ಬೆಂಬಲಿಸಲಿದ್ದು, ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುವುದು ಖಚಿತ ಎಂದ ಅವರು, ಹಣ ನೀಡಿ ಮತ ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಎ.ವೆಂಕಟೇಶ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಬುಡ್ಡನಗೌಡ ಜಾಗಟಗಲ್, ಭೀಮರಡ್ಡಿ, ಎನ್.ಶೇಖರರಡ್ಡಿ,  ಹರವಿ ನಾಗರಡ್ಡಿ, ಬಿ.ವಿ. ನಾಯಕ, ಬಾಲಪ್ಪ ನಾಯಕ ಮರಡಿ, ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ್, ಶಿವರಾಜಪ್ಪ ದೇವತಗಲ್, ಕೊಪ್ಪರ ಗ್ರಾಪಂ ಮಾಜಿ ಅಧ್ಯಕ್ಷ ಸುಲ್ತಾನ್ ಬಾಬಾ, ಶರಣಗೌಡ ಗೌರಂಪೇಟ್, ಮಹ್ಮದ ರಫೀಕ್ ಜಾನಿ, ಶಿವರಾಜ ರುದ್ರಾಕ್ಷಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.