ಬಿಜೆಪಿಯಿಂದ ಟಿಕೆಟ್ ಮಾರಾಟ: ನಾಯಕ ಆರೋಪ
ರಾಯಚೂರು: ಕಳೆದ ಅನೇಕ ವರ್ಷಗಳಿಂದ ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿಯಲ್ಲಿ ಸಾಕಷ್ಟು ದುಡಿದಿರುವ ತಮಗೆ ಟಿಕೆಟ್ ನಿರಾಕರಿಸಿರುವ ಪಕ್ಷದ ವರಿಷ್ಠರು ಹೊರ ಜಿಲ್ಲೆಯವರಿಗೆ ಟಿಕೆಟ್ ನೀಡಿದ್ದಾರೆ. ಪಕ್ಷದ ವರ್ತನೆಯಿಂದ ಬೇಸತ್ತು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಾಗಿ ಚಿನ್ನಯ್ಯ ನಾಯಕ ತಿಳಿಸಿದರು.
ಅವರು ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಹತ್ತಾರು ಸಮಸ್ಯೆಗಳಿದ್ದು ಅವುಗಳ ಪರಿಹಾರಕ್ಕೆ ತಾವು ನಿರಂತರ ಹೋರಾಟ ನಡೆಸಿದ್ದು, ರೈತರ ಪರ ಕಾಳಜಿ ಪ್ರದರ್ಶಿಸಿದ್ದರೂ ಬಿಜೆಪಿ ತಮಗೆ ಟಿಕೆಟ್ ನೀಡದೇ ಬೇರೆಯವರಿಗೆ ಹಣಕ್ಕೆ ಮಾರಿಕೊಂಡಿದೆ ಎಂದು ಆರೋಪಿಸಿದರು.
ರೈತರಿಂದ ಒತ್ತಡ: ಕಳೆದ ಅನೇಕ ವರ್ಷಗಳಿಂದ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ರೈತರಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ. ಈ ಬಗ್ಗೆ ಅನೇಕ ಸಂದರ್ಭದಲ್ಲಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಇತ್ತೀಚೆಗೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ಬೆಂಬಲಿಸಲು ನಿರ್ಧರಿಸಲಾಗಿತ್ತು. ಆದರೆ ರೈತರು ತಮ್ಮ ಮೇಲೆ ಚುನಾವಣೆ ಕಣಕ್ಕಿಳಿಯುವಂತೆ ಒತ್ತಡ ಹೇರಿದ್ದರಿಂದ ಸ್ಪರ್ಧಿಸಿರುವುದಾಗಿ ಹೇಳಿದರು.
ಮತದಾರರತ್ತ ನಿರ್ಲಕ್ಷ್ಯ: ಎಡದಂಡೆ ಕಾಲುವೆಯಿಂದ ಕಡೆಯ ಭಾಗದ ರೈತರಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ. ಅದೇ ರೀತಿ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಮೂಲ ಸೌಲಭ್ಯಗಳ ಕೊರತೆ ಸಾಕಷ್ಟಿದ್ದರೂ ಕಳೆದ ಬಾರಿ ಶಾಸಕರಾಗಿದ್ದ ಕಾಂಗ್ರೆಸ್ನ ರಾಜಾ ರಾಯಪ್ಪ ನಾಯಕ ತಮ್ಮ ಅಧಿಕಾರವಧಿಯ ಕಡೆಯ ದಿನಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯ ಮಾಡಿದ್ದಾರೆಯೇ ವಿನಾ 4 ವರ್ಷಗಳ ಕಾಲ ಕ್ಷೇತ್ರದ ಮತದಾರರತ್ತ ತಿರುಗಿ ನೋಡಿಲ್ಲ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ರೈತರ ಪರವಾದ ಕಾಳಜಿಯಿರುವ ವ್ಯಕ್ತಿಯ ಅವಶ್ಯಕತೆ ಗ್ರಾಮೀಣ ಕ್ಷೇತ್ರದಲ್ಲಿರುವುದರಿಂದ ರೈತರು ತಮ್ಮನ್ನು ಬೆಂಬಲಿಸಿದ್ದು, ಪ್ರಸಕ್ತ ಚುನಾವಣೆಯಲ್ಲಿ ತಮ್ಮ ಗೆಲವು ನಿಶ್ಚಿತ ಎಂದ ಅವರು, ಮತದಾರರು ಬಿಜೆಪಿ ಹಾಗೂ ಕಾಂಗ್ರೆಸ್ಗೆ ತಕ್ಕಪಾಠ ಕಲಿಸಲಿದ್ದಾರೆಂದು ಹೇಳಿದರು.
ಬೆಂಬಲಿಗರಾದ ನರಸಿಂಹಲು ನಾಯಕ್, ವೆಂಕಣ್ಣ ಮತ್ತಿತರರು ಇದ್ದರು.
ಬಿಜೆಪಿ ಕಚೇರಿ ಉದ್ಘಾಟನೆ
ಮಸ್ಕಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಸ್ಕಿ ಕ್ಷೇತ್ರದ ಅಭಿವೃದ್ಧಿ ಹೆಚ್ಚಿನ ಪ್ರಮಾಣದಲ್ಲಿ ಸಾಧ್ಯವಾಗಿದೆ ಎಂದು ಮಸ್ಕಿ ಕ್ಷೇತ್ರದ ಬಿಜೆಪಿ ಬ್ಲಾಕ್ ಅಧ್ಯಕ್ಷ ಮಲ್ಲಪ್ಪ ಚಿತಾಪುರ ಹೇಳಿದರು. ಪಟ್ಟಣದಲ್ಲಿ ಈಚೆಗೆ ಪಕ್ಷದ ಚುನಾವಣೆ ಕಚೇರಿ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಜನತೆಗೆ ವಿವರಿಸಿ ಪಕ್ಷಕ್ಕೆ ಮತ ಹಾಕಿಸುವಂತೆ ಮನವಿ ಮಾಡಿದರು. ಸಿಂಧನೂರು ತಾಲೂಕು ಬ್ಲಾಕ್ ಬಿಜೆಪಿ ಅಧ್ಯಕ್ಷ ಅಮರೇಗೌಡ ವಿರುಪಾಪುರ, ಜಿಪಂ ಸದಸ್ಯೆ ಬಸಮ್ಮ ಕುಂಟೋಜಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ಶಂಕರ್ ಮ್ಯಾದಾರ್, ಶಿವನಗೌಡ ಗೊರೇಬಾಳ, ಶ್ರೀನಿವಾಸುಲು ಗಂಜಳ್ಳಿ ಕ್ಯಾಂಪ್, ಜಹೀರುದ್ದೀನ್ ತುರವಿಹಾಳ್, ಹನುಮಂತಪ್ಪ ಬುದ್ದಿನ್ನಿ, ವೆಂಕೋಬಯ್ಯ, ವಕೀಲ ಆರ್.ಕೆ. ಹಿರೇಮಠ್, ಹನುಮೇಶ, ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

