ಕಲಂ 371(ಜೆ) ಅನುಷ್ಠಾನಕ್ಕಾಗಿ ಕಾಂಗ್ರೆಸ್ ಗೆಲ್ಲಿಸಿ: ಖರ್ಗೆ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.20
ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಕೇಂದ್ರ ಸರ್ಕಾರ ನೀಡಿದ ಕೊಡುಗೆ 371(ಜೆ)ನೇ ಕಲಂ ಸಮರ್ಪಕ ಜಾರಿಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಅವಶ್ಯ.
ಈ ನಿಟ್ಟಿನಲ್ಲಿ ಹೈ.ಕ. ಭಾಗದಿಂದ ಕನಿಷ್ಠ 40 ಜನ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಕಳಿಸುವಂತೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದರು.
ನಗರದ ಮಹಿಳಾ ಸಮಾಜದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದ ನಗರ ಮತ್ತು ಗ್ರಾಮೀಣ ಕ್ಷೇತ್ರಗಳ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ರಾಜ್ಯದ ಹೈ.ಕ. ಭಾಗದ ಸಮಗ್ರ ಅಭಿವೃದ್ಧಿಗೆ 371(ಜೆ)ನೇ ಕಲಂ ಜಾರಿಗೆ ತಂದಿದೆ. ಆದರೆ ಅದರ ಅನುಷ್ಠಾನಕ್ಕಾಗಿ ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರದ ಅವಶ್ಯಕತೆಯಿದೆ ಎಂದರು.
ಕಾಂಗ್ರೆಸ್ಸಿಂದ ಮಾತ್ರ ಸರ್ವರ ಅಭಿವೃದ್ಧಿ: ರಾಜ್ಯದಲ್ಲಿ ಕಳೆದ 60 ವರ್ಷಗಳ ಅವಧಿಯಲ್ಲಿ 20 ವರ್ಷ ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರ ನಡೆಸಿವೆ. ಆದರೆ ಆಯಾ ಪಕ್ಷಗಳಿಂದ ರಾಜ್ಯದ ಪ್ರಗತಿ ಸಾಧ್ಯವಾಗಿಲ್ಲ. ಆಂತರಿಕ ಕಚ್ಚಾಟ, ರಾಜಕೀಯ ಹಪಾಹಪಿತನದಿಂದಾಗಿ ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಿಲ್ಲ.
ಕೇವಲ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸರ್ವ ಜಾತಿ, ಜನಾಂಗದ ಅಭಿವೃದ್ಧಿ ಸಾಧ್ಯ ಎಂಬುದು ಸಾಬೀತಾಗಿದೆ ಎಂದು ಹೇಳಿದರು.
ಕಳೆದ ಐದು ವರ್ಷಗಳ ಅಧಿಕಾರವಧಿಯಲ್ಲಿ ಬಿಜೆಪಿ ಸರ್ಕಾರ ಕೇವಲ ಸ್ವಾರ್ಥ ಸಾಧನೆಯಲ್ಲಿ ಕಾಲಹರಣ ಮಾಡಿದೆ. ಭ್ರಷ್ಟಾಚಾರ, ಕೇಂದ್ರದ ಅನುದಾನದ ದುರ್ಬಳಕೆಯಿಂದಾಗಿಯೇ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ರಾಜ್ಯಕ್ಕೆ ಸದ್ಯದ ಸ್ಥಿತಿಯಲ್ಲಿ ಸುಭದ್ರ ಹಾಗೂ ಸುಸ್ಥಿರ ಸರ್ಕಾರದ ಅಗತ್ಯತೆಯಿದೆ. ಜನತೆ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸುವಂತೆ ಮನವಿ ಮಾಡಿದರು.
ಬಿಜೆಪಿ ಮೂರು ಹೋಳು: ಬಿಜೆಪಿಯ ನಾಯಕರು ಜಾತಿಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕಾರ್ಯ ಮಾಡಿದ್ದಾರೆ. ಹೀಗಾಗಿ ಸದ್ಯ ಅವರ ಪಕ್ಷವೇ ಮೂರು ಹೋಳಾಗಿದೆ. ಬಿಜೆಪಿ ನಾಯಕರ ಕಿತ್ತಾಟದ ಫಲವಾಗಿ ಕೆಜೆಪಿ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳು ಹುಟ್ಟಿಕೊಂಡಿವೆ. ಈ ಪಕ್ಷಗಳಿಗೆ ಸೋಲು ಖಂಡಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಚುನಾವಣೆಯಲ್ಲಿ ಬಹಮತ ಸಾಬೀತು ಮಾಡಲು ಬಿಜೆಪಿ ಆಪರೇಷನ್ ಕಮಲ ಎಂಬ ಶಾಸಕರ ಖರೀದಿಸುವ ತಂತ್ರಕ್ಕೆ ಮೊರೆ ಹೋಗಿದ್ದರಿಂದ ರಾಜ್ಯದ ಅಭಿವೃದ್ಧಿಗೆ ಧಕ್ಕೆಯಾಯಿತು. ಶಾಸಕರ ಮನವೊಲಿಕೆಯಲ್ಲಿಯೇ ಸಿಎಂ ಕಾಲಹರಣ ಮಾಡಿದ್ದರಿಂದ ಜನರ ಸಮಸ್ಯೆಗಳು ಪರಿಹಾರ ಕಂಡಿಲ್ಲ ಎಂದು ಆರೋಪಿಸಿದರು.
ಸ್ವಾರ್ಥ ಸಾಧನೆಗೆ ಪ್ರತ್ಯೇಕ ಪಕ್ಷ: ಬಿಜೆಪಿ, ಕೆಜೆಪಿ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳಿಗೆ ಅವರದ್ದೇ ಆದ ತತ್ವ ಸಿದ್ಧಾಂತಗಳಿಲ್ಲ. ಕೇವಲ ಸ್ವಾರ್ಥ ಸಾಧನೆಗೆ ಪ್ರತ್ಯೇಕ ಪಕ್ಷಗಳ ಸ್ಥಾಪನೆಯಾಗಿದೆ. ಆದರೆ ಪ್ರಸಕ್ತ ಚುನಾವಣೆಯಲ್ಲಿ ಈ ಮೂರೂ ಪಕ್ಷಗಳು ಮುಗ್ಗರಿಸುವುದರಲ್ಲಿ ಸಂಶಯವಿಲ್ಲ ಎಂದರು.
ಕಾಂಗ್ರೆಸ್ನಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ವಿವಿಧ ಕಾರಣಗಳಿಗೆ ಮೂಡಿರುವ ಭಿನ್ನಾಭಿಪ್ರಾಯ ಬದಿಗಿರಿಸಿ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿ ಪರ ಎಲ್ಲರೂ ಒಂದಾಗಿ ಪ್ರಚಾರ ಮಾಡಿ ಗೆಲ್ಲಿಸಬೇಕು. ಮುಂದಿನ ದಿನಗಳಲ್ಲಿ ಪಕ್ಷವು ಟಿಕೆಟ್ ವಂಚಿತರಿಗೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಿದೆ ಎಂದು ಕರೆ ನೀಡಿದರು.
ಬಿಜೆಪಿಗೆ ಹಿನ್ನಡೆ: ಮತ್ತೊಬ್ಬ ಮುಖಂಡ ಸಗೀರ್ ಅಹ್ಮದ್ ಮಾತನಾಡಿ, ಬಿಜೆಪಿ ನಾಯಕರು ಶ್ರೀರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳುತ್ತಲೇ ಮತದಾರರನ್ನು ವಂಚಿಸಿದ್ದಾರೆ. ರಾಮಮಂದಿರದ ಕುರಿತ ಸುಪ್ರೀಂಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆಯೇ ಬಿಜೆಪಿಯ ಎಲ್ಲ ಉದ್ದೇಶಗಳಿಗೆ ಹಿನ್ನಡೆಯಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ದೇಶದ ಪ್ರಗತಿಯ ಜತೆಜತೆಗೆ ವಿವಿಧ ಸಮಾಜಗಳ ಪ್ರಗತಿಗೆ ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಕಾರಣಗಳಿಗೆ ಭ್ರಷ್ಟಾಚಾರದಲ್ಲಿ ಸಿಲುಕಿ ಅನೇಕರು ಕಾರಾಗೃಹ ವಾಸ ಅನುಭವಿಸಿದ್ದಾರೆ. ಕಾಂಗ್ರೆಸ್ನಲ್ಲಿ ಇಂಥ ಯಾವುದೇ ಉದಾಹರಣೆಗಳಿಲ್ಲ ಎಂದರು.ಸಮಾರಂಭದಲ್ಲಿ ಕಾಂಗ್ರೆಸ್ ನಗರ ಕ್ಷೇತ್ರದ ಅಭ್ಯರ್ಥಿ ಸೈಯದ್ ಯಾಸೀನ್, ಗ್ರಾಮೀಣ ಕ್ಷೇತ್ರದ ಶಾಸಕ ರಾಜಾ ರಾಯಪ್ಪ ನಾಯಕ, ಎಐಸಿಸಿ ವೀಕ್ಷಕರಾದ ಹನುಮಂತರಾವ್, ಆನಂದ ಭಾಸ್ಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

