ಕಾಂಗ್ರೆಸ್ಗೆ ಅಧಿಕಾರ ನಿಶ್ಚಿತ
ಕ.ಪ್ರ. ವಾರ್ತೆ, ಸಿಂಧನೂರು, ಏ.24
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದ್ದು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಪಪೂ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರಾರ್ಥ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಅಲೆ ಎಲ್ಲೆಡೆ ಹೆಚ್ಚಿದೆ. ಬಿಜೆಪಿಯ ದುರಾಡಳಿತ ಜನರಿಗೆ ಬೇಸರ ತಂದಿದೆ. ಹೈ-ಕ ಭಾಗದ 40 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುತ್ತಾರೆ ಎಂದರು.
ರಾಹುಲ್ಗಾಂಧಿ ನುಡಿದಂತೆ ನಡೆದಿದ್ದಾರೆ: ರಾಹುಲ್ ಗಾಂಧಿಯವರು ಗುಲ್ಬರ್ಗಕ್ಕೆ ಬಂದಾಗ ಕೊಟ್ಟ ಮಾತಿನಂತೆ ಕಲಂ 371ನೇ ತಿದ್ದುಪಡಿ ಮಾಡಿಸಲು ಸಹಕರಿಸಿದ್ದಾರೆ. ಇದರ ಲಾಭ ಮುಂದಿನ ದಿನಗಳಲ್ಲಿ ಎಲ್ಲ ರಂಗದ ಜನತೆಗೆ ಲಭಿಸುತ್ತದೆ. ವಿಶೇಷವಾಗಿ ಯುವ ಜನತೆ ಇದರ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಾರೆ ಎಂದು ಖರ್ಗೆ ಹೇಳಿದರು.
ಕಪ್ಪುಚುಕ್ಕೆ: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೇ 5ರಂದು ನಡೆಯುವ ಮಹತ್ವದ ಹಾಗೂ ನಿರ್ಣಾಯಕ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ಗೆ ಸಂಪೂರ್ಣ ಬೆಂಬಲ ನೀಡಬೇಕು. 5 ವರ್ಷದ ಆಡಳಿತದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಜೈಲು ಸೇರಿದ್ದು ರಾಜ್ಯದ ರಾಜಕೀಯ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿದೆ. ಇವರ ಆಡಳಿತದಿಂದ ರಾಜ್ಯ 10 ವರ್ಷ ಹಿಂದಕ್ಕೆ ಹೋಗಿದೆ. ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಕಲಂ 371 ಜಾರಿ ಮಾಡಲು ಸಾಧ್ಯವಿಲ್ಲವೆಂದು ಆಗ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಆ ಎಲ್ಲ ಮುಖಂಡರಿಗೆ ನಾಚಿಕೆಯಾಗುವ ರೀತಿಯಲ್ಲಿ ಯುಪಿಎ ಸರ್ಕಾರ ಕಲಂ 371 ಜಾರಿ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ ಎಂದರು.
ಸ್ಥಿರ ಸರ್ಕಾರಕ್ಕೆ 'ಕೈ' ಬಲಪಡಿಸಿ: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಮಾತನಾಡಿ, ರಾಹುಲ್ ಗಾಂಧಿಯವರ ಭಾಷಣ ಕೇಳಲು ಉರಿಬಿಸಿಲಿನಲ್ಲಿ ಕುಳಿತಿದ್ದೀರಿ. ಕಾಂಗ್ರೆಸ್ ಸ್ಥಿರ ಹಾಗೂ ಬಲಿಷ್ಠ ಸರ್ಕಾರ ನೀಡುವ ಏಕೈಕ ಪಕ್ಷವಾಗಿದೆ. ಇದರ ಮುಂಚೂಣಿ ನಾಯಕ ರಾಹುಲ್ ಗಾಂಧಿ ಯುವಕರ ಆಕರ್ಷಣೆಯಾಗಿದ್ದಾರೆ. ಈ ಬಾರಿ ಅತಿ ಹೆಚ್ಚು ಸ್ಥಾನ ಗೆಲ್ಲಿಸುವ ಮೂಲಕ ಪಕ್ಷಕ್ಕೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ಮದುಸೂಧನ ಮಿಸ್ತ್ರಿ, ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಕಾರ್ಯಕ್ರಮವನ್ನುದ್ದೇಶಿಸಿ ಎಐಸಿಸಿ ಕಾರ್ಯದರ್ಶಿ ವಿ.ಹನುಮಂತರಾವ್, ಜಿಲ್ಲಾ ವೀಕ್ಷಕ ಆನಂದ ಭಾಸ್ಕರ, ಅಭ್ಯರ್ಥಿಗಳಾದ ಹಂಪನಗೌಡ ಬಾದರ್ಲಿ, ಅಮರೇಗೌಡ ಬಯ್ಯಾಪುರ, ಪ್ರತಾಪಗೌಡ ಪಾಟೀಲ್, ಸೈಯದ್ ಯಾಸೀನ್, ಅನಿಲ್ ಲಾಡ್, ಶಿವರಾಜ ತಂಗಡಗಿ, ಮಾಜಿ ಶಾಸಕ ಚಂದ್ರಶೇಖರಯ್ಯಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಬೋಸರಾಜ, ಕೊಪ್ಪಳ ಲೋಕಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾಫರ್ ಜಾಗೀರದಾರ, ಜಿಪಂ ಸದಸ್ಯರಾದ ಚಂದೂಸಾಬ ಮುಳ್ಳೂರು, ಶಿವನಗೌಡ ಎಲೆಕೂಡ್ಲಿಗಿ, ಮುಖಂಡರಾದ ಲಿಂಗರಾಜ ಪಾಟೀಲ್, ಮಲ್ಲನಗೌಡ ಕನ್ನಾರಿ, ಬಸವಂತರಾಯ ಕುರಿ, ಆರ್.ತಿಮ್ಮಯ್ಯ ನಾಯಕ, ಡಾ. ಬಿ.ಎನ್. ಪಾಟೀಲ್, ವಿಜಯಲಕ್ಷ್ಮಿ ರಾಮಕೃಷ್ಣ ಮಾತನಾಡಿದರು.
ಅಭ್ಯರ್ಥಿಗಳಾದ ಎಚ್.ಆರ್. ಶ್ರೀನಾಥ, ಬಿ.ಎಸ್. ಹೂಲಗೇರಿ, ವೆಂಕಟೇಶ ನಾಯಕ, ಟಿ.ಎಂ. ನಾಗರಾಜ, ಹಂಪಯ್ಯ ನಾಯಕ, ಬಸವರಾಜ ರಾಯರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

