'ಕೈ' ಭದ್ರಕೋಟೆ ಯಾರ ಮಡಿಲಿಗೆ?
ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರಾವರಿ ಪ್ರದೇಶ. ಆದರೂ ಬೆಳೆಗೆ ಮತ್ತು ಕುಡಿಯುವ ನೀರಿಗೆ ಅಲೆದಾಟ ತಪ್ಪಿಲ್ಲ. ಬರಗಾಲದ ಪ್ರಭಾವ, ನೀರಿನ ಸಮಸ್ಯೆ ಸೇರಿ ಸಮಸ್ಯೆಗಳ ಆಗರವಾಗಿರುವ ಮಾನವಿ ಕ್ಷೇತ್ರ ರಾಜಕೀಯ ಜಿದ್ದಾಜಿದ್ದಿಗೆ ಎಂದಿಗೂ ಹೆಸರುವಾಸಿ. ಕಾಂಗ್ರೆಸ್ ಭದ್ರಕೋಟೆಯೂ ಹೌದು. ಈ ಬಾರಿ ಕಾಂಗ್ರೆಸ್ ಗೆ ಕೆಜೆಪಿ ಪೈಪೋಟಿ ನೀಡಿದ್ದರೂ ಉಳಿದ ಪಕ್ಷಗಳು ತಾವೇನೂ ಕಮ್ಮಿಯಿಲ್ಲ ಎಂದು ಸಾಬೀತು ಮಾಡಲು ಕಾದಿವೆ.
ಮಾನವಿ ವಿಧಾನಸಭೆ ಕ್ಷೇತ್ರದಲ್ಲಿ ಈಗ ರಾಜಕೀಯ ಹಣಾಹಣಿಗೆ ರಂಗ ಸಜ್ಜಾಗಿದೆ. ಕಾಂಗ್ರೆಸ್ ಪಕ್ಷವು ಮೊದಲಿನಿಂದಲೂ ಬಹುಕಾಲ ಇಲ್ಲಿ ಅಧಿಕಾರ ನಡೆಸಿರುವುದು ಭದ್ರಕೋಟೆಯಾಗಿಸಿದೆ. ಹಾಗಾಗಿ ಇಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದವರು ಅನೇಕರಿದ್ದಾರೆ.
ಪ್ರಗತಿ ಅಷ್ಟಕ್ಕಷ್ಟೇ: ಎಸ್ಟಿಗೆ ಮೀಸಲಾಗಿರುವ ಮಾನವಿ ಕ್ಷೇತ್ರದಲ್ಲಿ 284391 ಜನಸಂಖ್ಯೆಯಿದ್ದು, 191179 ಮತದಾರರಿದ್ದಾರೆ. ಮಹಿಳಾ ಮತ ದಾರರ ಸಂಖ್ಯೆಯೇ ಹೆಚ್ಚಾಗಿದೆ. ಮಾಜಿ ಕೇಂದ್ರ ಸಚಿವೆ ಬಸವರಾಜೇಶ್ವರಿ ಅವರನ್ನು ಸತತ ಮೂರು ಬಾರಿ ಆಯ್ಕೆ ಮಾಡಿ ಕಳಿಸಿದ ಕ್ಷೇತ್ರದ ಖ್ಯಾತಿಯಿದೆ.
ಅಭಿವೃದ್ಧಿ ವಿಷಯದಲ್ಲಿ ಕ್ಷೇತ್ರದ ಪ್ರಗತಿ ಅಷ್ಟಕ್ಕಷ್ಟೇ ಎಂಬುದು ಆರೋಪ. ಕುಡಿಯುವ ನೀರು, ವೈದ್ಯಕೀಯ ಸೇವೆಗಳ ಕೊರತೆ ಸೇರಿ ಮೂಲಸೌಲಭ್ಯಗಳ ಸಮಸ್ಯೆಯೂ ಕ್ಷೇತ್ರವನ್ನು ಕಾಡುತ್ತಿದೆ ಎಂಬುದರಲ್ಲಿ ಸಂಶಯವಿಲ್ಲ. ಇನ್ನು ಮಾನವಿ ಕ್ಷೇತ್ರದಲ್ಲಿ ಕಳೆದ 8 ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ಒಮ್ಮೆ ಪಕ್ಷೇತರರು, ಒಮ್ಮೆ ಜನತಾದಳ, ಒಮ್ಮೆ ಕೆಎನ್ಪಿ ಪಕ್ಷ ಗೆದ್ದಿದೆ.
ಈ ಬಾರಿ ಕಾಂಗ್ರೆಸ್ನು ಶತಾಯಗತಾಯ ಸೋಲಿಸಲು ಕೆಜೆಪಿಯಿಂದ ಮಾಜಿ ಶಾಸಕ ಗಂಗಾಧರ ನಾಯಕ, ಜೆಡಿಎಸ್ ನಿಂದ ಜಿಪಂ ಮಾಜಿ ಸದಸ್ಯ ರಾಜಾ ವೆಂಕಟಪ್ಪ ನಾಯಕ ಹಾಗೂ ಬಿಎಸ್ಸಾರ್ ಕಾಂಗ್ರೆಸ್ ನಿಂದ ಬಸನಗೌಡ ದದ್ದಲ ಕಣಕ್ಕಿಳಿದಿದ್ದಾರೆ.
ಪ್ಲಸ್ ಪಾಯಿಂಟ್: ಕಾಂಗ್ರೆಸ್ನಿಂದ ಹಾಲಿ ಶಾಸಕ ಹಂಪಯ್ಯ ನಾಯಕ ಎರಡನೇ ಬಾರಿಗೆ ಕಣದಲ್ಲಿದ್ದು, ಅವರ ಕಾರ್ಯವೈಖರಿಯ ಬಗ್ಗೆ ಕ್ಷೇತ್ರದ ಮತದಾರರಲ್ಲಿ ಕಳೆದ ಚುನಾವಣೆಯ ವೇಳೆ ಇದ್ದ ದುಗುಡ, ಆತಂಕ ಈಗ ಮಾಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿಯ ಸಾಧನೆ ಅಷ್ಟಕ್ಕಷ್ಟೇ. ನೀರಾವರಿ ಸೇರಿದಂತೆ ಅನೇಕ ಸಮಸ್ಯೆಗಳು ಈಗಲೂ ಹಾಗೆಯೇ ಇವೆ. ಆದರೆ ಕಾಂಗ್ರೆಸ್ ಅಭ್ಯರ್ಥಿಗೆ ಅವರ ಸರಳ, ಸಜ್ಜನಿಕೆಯ ವ್ಯಕ್ತಿತ್ವವೇ ಪ್ಲಸ್ ಪಾಯಿಂಟ್ ಆಗಲೂಬಹುದು.
ಇನ್ನು ಗಂಗಾಧರ ನಾಯಕ ಮೊದಲು ಜನತಾ ದಳದಿಂದ 1994 ರಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಎರಡು ಬಾರಿ ಜೆಡಿಎಸ್ ನಿಂದ, ಕಳೆದ ಸಲ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದಾರೆ. ಈ ಚುನಾವಣೆಯ ಹೊತ್ತಿಗೆ ಅವರು ಕೆಜೆಪಿಯಿಂದ ಕಣದಲ್ಲಿದ್ದಾರೆ. ಅವರಂತೆಯೇ ಬಿಜೆಪಿಯಲ್ಲಿ ಕಳೆದ ಚುನಾವಣೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಸನಗೌಡ ದದ್ದಲ್ ಆನಂತರದಲ್ಲಿ ಪಕ್ಷಾಂತರ ಮಾಡಿ ಸದ್ಯ ಮಾನವಿಯಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಜಿಪಂ ಮಾಜಿ ಸದಸ್ಯ ರಾಜಾ ವೆಂಕಟಪ್ಪ ನಾಯಕರು ಜೆಡಿಎಸ್ ನಿಂದಲೇ ಎರಡನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಅಯ್ಯಮ್ಮ ಅವರಿಗೆ ಇದು ಮೊದಲ ಚುನಾವಣೆ.
ಪಕ್ಷಾಂತರ: ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಹೊರಹೋದ ಅನೇಕ ಕಾರ್ಯಕರ್ತರು ಹಾಗೂ ಪ್ರಮುಖರು ಈ ಬಾರಿ ಪುನಾ ಕಾಂಗ್ರೆಸ್ ಗೆ ಮರಳಿದ್ದು ಕಾಂಗ್ರೆಸ್ ಅಭ್ಯರ್ಥಿಗೆ ನೆರವಾಗಬಹುದು. ಹಾಲಿ ಶಾಸಕರ ಅವಧಿಯಲ್ಲಿ ಹೇಳಿಕೊಳ್ಳುವಂಥ ಕಾರ್ಯಗಳಾಗದಿದ್ದರೂ, ಶಾಸಕ ಹಂಪಯ್ಯ ನಾಯಕ ಅವರು ಕುಡಿಯುವ ನೀರು, ರೈತರ ಬೆಳೆಗಳಿಗೆ ನೀರು ಕೊಡಿಸುವುದಕ್ಕೆ ನಡೆಸಿದ ಉಪವಾಸ ಸತ್ಯಾಗ್ರಹ, ಹೋರಾಟಗಳು ಹೆಸರಷ್ಟೇ ಮಾಡಿದ್ದು ಸುಳ್ಳಲ್ಲ.
ಇವರಿಗೆ ಮಾಜಿ ಶಾಸಕ ಕಾಂಗ್ರೆಸ್ನ ಹಿರಿಯ ನಾಯಕ ಎನ್.ಎಸ್. ಬೋಸರಾಜ್ ಅವರ ಬೆಂಬಲವಿದೆ. ಎಸ್ಟಿಗಳಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕುರುಬರು ಹಾಗೂ ಲಿಂಗಾಯತ ಮತಗಳೇ ನಿರ್ಣಾಯಕ. ಇವರ ಒಲವು ಗಳಿಸಲು ಜಿದ್ದಾಜಿದ್ದಿ ಆರಂಭವಾಗಿದೆ.
ಗುಡಿಗಳಿಗೆ ಅನುದಾನದ ಭರವಸೆ: ಎಲ್ಲ ಅಭ್ಯರ್ಥಿಗಳು ಈಗಾಗಲೇ ಭರಾಟೆಯ ಪ್ರಚಾರ ಆರಂಭಿಸಿದ್ದು, ಮತದಾನದ ದಿನ ಸಮೀಪಿಸುತ್ತಿದ್ದಂತೆಯೇ ರಾಜಕೀಯ ರಂಗೇರುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಮದ್ಯ ಮತ್ತು ಹಣದ ಹೊಳೆಯೂ ಹರಿಯಲಿದೆ ಎಂಬುದು ಸುಳ್ಳಲ್ಲ. ಮತದಾರರಿಗೆ ಕ್ಷೇತ್ರದಲ್ಲಿ ವಿವಿಧ ಆಸೆ, ಆಮಿಷಗಳನ್ನೊಡ್ಡಲಾಗುತ್ತಿದೆ. ಜಾತಿ ಮತಗಳ ಸೆಳೆಯಲು ಗುಡಿ ಗುಂಡಾರಗಳಿಗೆ ಅನುದಾನದ ಭರವಸೆ ನೀಡಲಾಗುತ್ತಿದೆ.
ಸದ್ಯ ಮೇಲ್ನೋಟಕ್ಕೆ ಕಾಂಗ್ರೆಸ್ ಮತ್ತು ಕೆಜೆಪಿ ಅಭ್ಯರ್ಥಿಗಳ ಮಧ್ಯೆಯೇ ನೇರ ಹಣಾಹಣಿಯಿದ್ದರೂ ಇನ್ನುಳಿದ ಅಭ್ಯರ್ಥಿಗಳು ತಾವೇನೂ ಕಮ್ಮಿಯಿಲ್ಲ ಎಂಬಂತೆ ಪೈಪೋಟಿ ನೀಡುತ್ತಿದ್ದಾರೆ. ಇನ್ನು ಬಿಜೆಪಿ ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿ ಬಂದಿದ್ದು ಬಿಟ್ಟರೆ, ಆ ಪಕ್ಷಕ್ಕೆ ಇಲ್ಲಿ ಗೆಲವು ಮಾತ್ರ ಇದುವರೆಗೆ ದಕ್ಕಿಲ್ಲ.
ಅಂದು-ಇಂದು: 2008 ರ ಚುನಾವಣೆಯಲ್ಲಿ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ನಾಯಕ ಅವರು ಗೆಲವು ಕಂಡಿದ್ದರು. ಇವರಿಗೆ ಆಗ ಬಿಜೆಪಿಯಿಂದ ಗಂಗಾಧರ ನಾಯಕ ಪ್ರತಿಸ್ಪರ್ಧಿಯಾಗಿ ಸೋತಿದ್ದರು. ಅದೇ ಗಂಗಾದರ ನಾಯಕರು ಕೆಜೆಪಿಯಿಂದ ಕಣಕ್ಕಿಳಿ ದಿದ್ದಾರೆ. ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲು ತಂತ್ರ ಹೂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗೆ ಆ ಪಕ್ಷದ ಹಿರಿಯ ನಾಯಕ ಹಾಗೂ ಕ್ಷೇತ್ರದ ಪ್ರಭಾವಿ ರಾಜಕಾರಣಿಯಾಗಿರುವ ಬೋಸರಾಜ್ ಶ್ರೀರಕ್ಷೆಯಿದೆ. ಹಾಗೆಯೇ ಶಾಸಕ ಹಂಪಯ್ಯ ನಾಯಕ ತಮ್ಮ ಅವಧಿಯ ಕಡೆಯ ಗಳಿಗೆಯಲ್ಲಿ ಗುಡಿ ಗುಂಡಾರಗಳಿಗೆ ಕೊಡ ಮಾಡಿದ ಅಭಿವೃದ್ಧಿ ಅನುದಾನ ಈ ಚುನಾವಣೆಯಲ್ಲಿ ಕೈಹಿಡಿವ ನಂಬಿಕೆಯಲ್ಲಿದ್ದಾರೆ. ಒಟ್ಟಾರೆ ಮಾನವಿ ಕಣದಲ್ಲಿ ಕಾಂಗ್ರೆಸ್ ಗೆ ಪ್ರಬಲ ಸ್ಪರ್ಧೆ ನೀಡಲು ಕೆಜೆಪಿ ಸಜ್ಜಾಗಿದೆ. ಜತೆಗೆ ಜೆಡಿಎಸ್, ಬಿಎಸ್ಸಾರ್ ನಿಂದಲೂ ಪೈಪೋಟಿಯಿದೆ. ಮತದಾರರ ಯಾರತ್ತ ಒಲವು ತೋರುತ್ತಾನೆಂಬುದು ಇನ್ನೂ ನಿಗೂಢ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

