ಜಲಾಶಯ ಹೂಳೆತ್ತಲು ಆದ್ಯತೆ: ರಾಮುಲು (ಸಂಕ್ಷಿಪ್ತ ಸುದ್ದಿ)
ಸಿಂಧನೂರು: ಬಿಎಸ್ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮುನಿರಾಬಾದನ ಟಿ.ಬಿ. ಜಲಾಶಯದ ಹೂಳೆತ್ತುವುದಕ್ಕೆ ಮೊದಲ ಆದ್ಯತೆ ನೀಡುವುದಾಗಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಬಿ.ಶ್ರೀರಾಮುಲು ಭರವಸೆ ನೀಡಿದರು. ತಾಲೂಕಿನ ಜವಳಗೇರಾ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜ್ ಆವರಣದಲ್ಲಿ ಬುಧವಾರ ರಾತ್ರಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು. ರೈತರ ಸಾಲ ಮನ್ನಾ ಮತ್ತು ಜನಪರ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅವರು ಬಡವ, ಶ್ರೀಮಂತರೆನ್ನದೆ ರಾಜ್ಯದ ಎಲ್ಲ ನಿರುದ್ಯೋಗಿ ಯುವಕರ ಸಮಸ್ಯೆ ನಿವಾರಣೆ, ಸರ್ಕಾರದಿಂದಲೇ ಸಾಮೂಹಿಕ ವಿವಾಹಗಳನ್ನು ಪ್ರತಿವರ್ಷ ಮಾಡುವುದಾಗಿ ತಿಳಿಸಿದರು. 184 ಕ್ಷೇತ್ರಗಳಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಎಲ್ಲ ಅಭ್ಯರ್ಥಿಗಳು ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರಬಲ ಪ್ರಾದೇಶಿಕ ಪಕ್ಷಕ್ಕೆ ಮಾನ್ಯತೆ ನೀಡಲು ಮತದಾರರು ಸಿದ್ದರಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಒದಗಿಸುವ 371 (ಜೆ) ಕಲಂ ತಿದ್ದುಪಡಿಗೆ ಬಿಎಸ್ಆರ್ ಕಾಂಗ್ರೆಸ್ನಿಂದ ನಡೆಸಿದ ಪಾದಯಾತ್ರೆಯ ಒತ್ತಡವೇ ಕಾರಣ ಎಂದು ಹೇಳಿದರು. ಚಲನಚಿತ್ರ ನಟ ಸಿಂದಗಿ ಅಭ್ಯರ್ಥಿ ರಾಜು ತಾಳಿಕೋಟೆ ಮಾತನಾಡಿ, ಕಳೆದ 30 ವರ್ಷಗಳಿಂದ 371ನೇ ಕಲಂ ತಿದ್ದುಪಡಿಗೆ ಈ ಭಾಗದ ರೈತರು, ಪ್ರಗತಿಪರ ಸಂಘಟನೆಗಳು ಅವಿರತವಾಗಿ ಹೋರಾಟ ಮಾಡಿದ ಪ್ರತಿಫಲವಾಗಿ ಜಯ ಸಿಕ್ಕಿದೆ. ಕಾಂಗ್ರೆಸ್ ಪಕ್ಷದವರು ಅದನ್ನೆ ಬಂಡವಾಳವನ್ನಾಗಿ ಮಾಡಿಕೊಂಡು ಮತ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವ್ಯಂಗ್ಯವಾಡಿದರು. ಅಕ್ರಮ ಗಣಿಗಾರಿಕೆಯಲ್ಲಿ ಕೇವಲ ಜನಾರ್ದನರೆಡ್ಡಿ ಕುಟುಂಬವನ್ನು ಮಾತ್ರ ಹೆಸರಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಮುಖಂಡರ ಹಲವಾರು ಹೆಸರುಗಳಿದ್ದರೂ ಅವುಗಳನ್ನು ಮುಚ್ಚಿಡಲಾಗುತ್ತಿದೆ ಎಂದು ಟೀಕಿಸಿದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಬಿ.ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿದ್ದಾಗ ಜಾರಿಗೆ ತಂದ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಿಂದ ಚಾಲನೆಗೊಂಡ 108 ಅಂಬುಲೆನ್ಸ್ ವಾಹನದಿಂದ ಲಕ್ಷ ಲಕ್ಷ ಜನರಿಗೆ ಅನುಕೂಲವಾಗಿದ್ದು, ಅದರ ಲಾಭದಿಂದ ಸಿಂಧನೂರು ಕ್ಷೇತ್ರದ ಬಿಎಸ್ಆರ್ ಪಕ್ಷದ ಅಭ್ಯರ್ಥಿ ಕೆ.ಕರಿಯಪ್ಪ ಅವರಿಗೆ ಜಯ ಸಿಗುವುದು ನಿಶ್ಚಿತ. ಶಾಸಕರಾಗಿದ್ದ ಐದು ವರ್ಷದಲ್ಲಿ ವೆಂಕಟರಾವ್ ನಾಡಗೌಡರ ದುರಾಡಳಿತ ಜನತೆ ಬೇಸತ್ತಿದ್ದಾರೆ. ಸಂಸದ ಫಕೀರಪ್ಪ, ರಹಿಮಾನವುಲ್ಲಾ, ಸಿಂಧನೂರು ಕ್ಷೇತ್ರದ ಬಿಎಸ್ಆರ್ ಪಕ್ಷದ ಅಭ್ಯರ್ಥಿ ಕೆ.ಕರಿಯಪ್ಪ, ಮಸ್ಕಿ ಕ್ಷೇತ್ರದ ಅಭ್ಯರ್ಥಿ ಶೇಖರಪ್ಪ ತಳವಾರ, ರಮೇಶಪ್ಪ ದಿದ್ದಗಿ, ರಾಜಶೇಖರಯ್ಯ ವಕೀಲ, ಅಬ್ದುಲ್ ಗನಿಸಾಬ ವಕೀಲ, ಎಂ.ಎಸ್.ಶ್ರೀನಿವಾಸಗೌಡ, ಎಂ.ದೊಡ್ಡಬಸವರಾಜ, ರಂಗನಗೌಡ ಗೊರೇಬಾಳ ಮತ್ತಿತರರು ಇದ್ದರು. ಜವಳಗೇರಿಗೆ ಆಗಮಿಸುವ ಪೂರ್ವದಲ್ಲಿ ದಢೇಸ್ಗೂರು, ಆಯನೂರು, ಅಲಬನೂರ, ತಿಮ್ಮಾಪುರ, ಯದ್ದಲದೊಡ್ಡಿ ಮತ್ತಿತರ ಗ್ರಾಮಗಳಲ್ಲಿ ರಾಮುಲು ಬಿರುಸಿನ ಪ್ರಚಾರ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

