ರಾಯಚೂರು

ಚೆಕ್ ಡ್ರಾ ಮಾಡುವಾಗ ಸಿಕ್ಕಿಬಿದ್ದ ಲಿಂಗಸ್ಗೂರು ಕಳ್ಳ

Published On :

ಕ.ಪ್ರ.ವಾರ್ತೆ, ನಾಗಮಂಗಲ, ಏ.30
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿದ್ದ 2 ಲಕ್ಷ ಮೌಲ್ಯದ 10 ಚೆಕ್‌ಗಳನ್ನು ಕದ್ದಿದ್ದ ಕಳ್ಳನೊಬ್ಬ, ಬ್ಯಾಂಕ್‌ನಿಂದ ಹಣ ಡ್ರಾ ಮಾಡುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ಮಂಗಳವಾರ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸ್ಗೂರು ಮೂಲದ ಸೋಮಲಿಂಗೇಶ (21) ಸಿಕ್ಕಿ ಬಿದ್ದ ಕಳ್ಳ. ಆದರೆ, ಈತ ಅಪರಿಚಿತ ವ್ಯಕ್ತಿಯೊಬ್ಬ ಚೆಕ್‌ಗಳನ್ನು ತನಗೆ ನೀಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.
ವಿಧಾನಸಭಾ ಚುನಾವಣಾ ಖರ್ಚು ವೆಚ್ಚ ನಿರ್ವಹಿಸಲು ಜೆಡಿಎಸ್ ಅಭ್ಯರ್ಥಿ ಚಲುವರಾಯಸ್ವಾಮಿ ಪಟ್ಟಣದ ವಿಜಯಾ ಬ್ಯಾಂಕ್‌ನಲ್ಲಿ ಖಾತೆ ತೆರೆದು ವ್ಯವಹಾರ ನಡೆಸಲು ಪಕ್ಷದ ಮುಖಂಡ ಜವರೇಗೌಡ ಅವರಿಗೆ ಅಧಿಕಾರ ನೀಡಿದ್ದರು. ಚುನಾವಣೆ ಪ್ರಚಾರದ ವಾಹನಗಳಿಗೆ ಬಟವಾಡೆ ಮಾಡುವ ಉದ್ದೇಶದಿಂದ ಏ.25 ರಂದು ತಲಾ 20000-22000 ದಂತೆ 10 ಚೆಕ್‌ಗಳನ್ನು ಬರೆದು ವಾಹನ ಮಾಲೀಕರಿಗೆ ನೀಡಲು ಇಟ್ಟಿದ್ದರು.
ಏ.30 ರಂದು ಮಧ್ಯಾಹ್ನ ಟೇಬಲ್‌ನ ಬೀಗ ಮುರಿದು ಚೆಕ್‌ಗಳನ್ನು ಕಳವು ಮಾಡಿರುವುದನ್ನು ಜವರೇಗೌಡ ಸಂಬಂಧಿಸಿದ ವಿಜಯಾ ಬ್ಯಾಂಕ್ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದರು. ಅಷ್ಟೊತ್ತಿಗೆ ಆರೋಪಿ ಮೂರು ಚೆಕ್‌ಗಳನ್ನು ಬ್ಯಾಂಕಿಗೆ ನೀಡಿ 70,100 ಗಳನ್ನು ಪಡೆದಿದ್ದ. ಬ್ಯಾಂಕ್‌ಗೆ ಆಗಮಿಸಿದ ಜೆಡಿಎಸ್ ಮುಖಂಡ ರವಿಕಾಂತ್ ಹಾಗೂ ಮಹೇಶ ಎಂಬವರು ಅನಾಮಧೇಯ ಯುವಕನೊಬ್ಬನ ಬಳಿ ನಾಲ್ಕೈದು ಚೆಕ್‌ಗಳಿರುವುದನ್ನು ಅರಿತು ಆತನನ್ನು ವಿಚಾರಣೆ ನಡೆಸಿದಾಗ ಕಳ್ಳ ಸಿಕ್ಕಿ ಬಿದ್ದಿದ್ದಾನೆ.
ಹಣ ಡ್ರಾ ಮಾಡಿಕೊಡಲು ಸೂಚನೆ: ಪಟ್ಟಣ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಸೋಮಲಿಂಗೇಶ, ಬೆಳ್ಳೂರು ಕ್ರಾಸ್‌ನಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಗಾರೆ ಕೆಲಸ ಮಾಡಿಕೊಂಡಿರುವುದಾಗಿ ಹೇಳಿ ಕೊಂಡಿದ್ದಾನೆ. ಸಿನಿಮಾ ನೋಡಲು ನಾಗಮಂಗಲಕ್ಕೆ ಬಂದಿದ್ದು, ಊರಿಗೆ ಹೋಗಲು ಹಣ ಇಲ್ಲದಿದ್ದಾಗ ಅಪರಿಚಿತರೊಬ್ಬರನ್ನು 100 ನೀಡುವಂತೆ ಕೇಳಿದೆ. ಆ ವ್ಯಕ್ತಿ ನನ್ನ ಕೈಗೆ ಈ ಚೆಕ್‌ಗಳನ್ನು ನೀಡಿ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬಂದರೆ ನಿನಗೆ 500 ಕೊಡುವುದಾಗಿ ಪುಸಲಾಯಿಸಿದರು ಎಂದು ಹೇಳಿಕೆ ನೀಡಿದ್ದಾನೆ.  ಪಟ್ಟಣ ಠಾಣೆ ಸಬ್‌ಇನ್ಸ್‌ಪೆಕ್ಟರ್ ಜಿ.ಜೆ. ಸತೀಶ್ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.