ಸರ್ಕಾರ ರಚನೆಗೆ ಅವಕಾಶ ನೀಡಿ
ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.30
ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುವಂತೆ ಜನತೆ ಆಶೀರ್ವಾದ ಮಾಡಿ ಸರ್ಕಾರ ರಚಿಸಲು ಅವಕಾಶ ನೀಡಿದರೆ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ 65 ಸಾವಿರ ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆಗಳಿಗೆ ಮೊದಲಾದ್ಯತೆ ನೀಡುವುದಾಗಿ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ನಗರದ ಆರ್ಜಿಎಂ ಶಾಲಾ ಮೈದಾನದಲ್ಲಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಸಿಂಧನೂರು ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ವೆಂಕಟರಾವ ನಾಡಗೌಡರ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ರೈತರ ಬೆಳೆಗೆ ವೈಜ್ಞಾನಿಕ ಬೆಲೆ, ವಯೋವೃದ್ಧರು, ಮಹಿಳೆಯರು, ಗರ್ಭಿಣಿಯರು, ಹಿರಿಯ ನಾಗರೀಕರು, ಅಂಗವಿಕಲರು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು ಸೇರಿದಂತೆ ಪ್ರತಿಯೊಬ್ಬರು ಒಪ್ಪುವಂತ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪಕ್ಷವು ಸಿದ್ಧವಾಗಿದೆ. ಮುಖ್ಯವಾಗಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಎಲ್ಲ ಸಾಲಗಳ ಮನ್ನಾ ಮಾಡಲು ಜೆಡಿಎಸ್ ನಿರ್ಧರಿಸಿದೆ ಎಂದರು.
ಕೈಗಾರಿಕೋದ್ಯಮಿಗಳ ಹಿತ ಕಾದಿವೆ: ಕೇಂದ್ರ ಸರ್ಕಾರ ಅನೇಕ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳಿಗೆ 5 ಲಕ್ಷ ಕೋಟಿ ತೆರಿಗೆ ವಿನಾಯಿತಿ ಮಾಡಿದೆ. ಆದರೆ ಬಡ ರೈತರ ಸಾಲ ಮನ್ನಾ ಮಾಡಲು ತಯಾರಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಕೈಗಾರಿಕೋದ್ಯಮಿಗಳ ಹಿತ ಕಾಯುವ ಪಕ್ಷಗಳಾಗಿವೆ ಎಂದು ಆಪಾದಿಸಿದರು.
ಕಾಂಗ್ರೆಸ್, ಬಿಜೆಪಿ ದೇಶವನ್ನು ಲೂಟಿ ಹೊಡೆಯುವ ಪಕ್ಷಗಳಾಗಿವೆ. ಕೆಜೆಪಿ ಹಾಗೂ ಬಿಎಸ್ಸಾರ್ ಕಾಂಗ್ರೆಸ್ ತಮ್ಮ ಹಳೆಯ ಭ್ರಷ್ಟಚಾರವನ್ನು ಮುಂದುವರೆಸಲು ಸಂಚು ಮಾಡುವಂತ ಕುತಂತ್ರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಾವ ಮುಖ್ಯಮಂತ್ರಿಯೂ ಮಾಡದಂತಹ ಸಾಧನೆಯನ್ನು ಯಡಿಯೂರಪ್ಪ ಪರಪ್ಪನ ಆಗ್ರಹಾರಕ್ಕೆ ಹೋಗುವ ಮೂಲಕ ಸಾಧನೆ ಮಾಡಿದ್ದಾರೆ. ಇಂತಹ ಪಕ್ಷಗಳನ್ನು ಧಿಕ್ಕರಿಸುವ ಮೂಲಕ ಸುಭದ್ರ ಆಡಳಿತ ನೀಡುವ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಗಣಿ ಅಕ್ರಮದಲ್ಲಿ ಕಾಂಗ್ರೆಸ್ಸಿಗರು: ರಾಜ್ಯದಲ್ಲಿ ಕಾಂಗ್ರೆಸ್ನಲ್ಲಿ ನಾಯಕರೇ ಇಲ್ಲವೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಸೋನಿಯಾ, ರಾಹುಲ್, ಮನಮೋಹನ ಸಿಂಗ್ ಅವರ ಫೋಟೋ ಹಾಕಿಸಿ ಕಾಂಗ್ರೆಸ್ಗೆ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ. ಬಿಜೆಪಿಯವರ ಅಕ್ರಮ ಗಣಿಗಾರಿಕೆ ಬಗ್ಗೆ ಕಾಂಗ್ರೆಸ್ ಮುಖಂಡರು ಎಂದೂ ವಿಧಾನಸಭೆಯಲ್ಲಿ ಗಟ್ಟಿಯಾಗಿ ಪ್ರತಿಭಟಿಸಲಿಲ್ಲ. ಏಕೆಂದರೆ- ಅವರ ಪಕ್ಷದ ಅನೇಕ ಮುಖಂಡರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ಕಳೆದ ಅವಧಿಯಲ್ಲಿ ಕ್ಷೇತ್ರ ಜನ ಆಶೀರ್ವಾದದಿಂದ ತಾವು ಶಾಸಕರಾಗಿ ಕೊಟ್ಟ ಮಾತಿನಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಆದರೆ ಇತ್ತೀಚೆಗೆ ಮಾಜಿ ಶಾಸಕ ಬಾದರ್ಲಿ ಹಂಪನಗೌಡರು ಹಾಗೂ ಮಾಜಿ ಸಂಸದ ಕೆ.ವಿರೂಪಾಪಕ್ಷಪ್ಪನವರು ತಮ್ಮ ಅವಧಿಯಲ್ಲಿ ತಾಲೂಕಿನಲ್ಲಿ ಅಭಿವೃದ್ಧಿಯ ಕಾರ್ಯಗಳನ್ನು ಮಾಡಿದ್ದೇವೆ. ನಾಡಗೌಡರ ಶಾಸಕಾರಾದಾಗಿನಿಂದ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳ ಶೂನ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಜಾತಿ ಜಗಳಕ್ಕೆ ಕಾರಣರು: ಆದರೆ 15 ವರ್ಷ ಶಾಸಕರಾಗಿದ್ದ ಹಂಪನಗೌಡರು, 5 ವರ್ಷ ಸಂಸದರು, 5 ವರ್ಷ ಶಾಸಕರಾಗಿದ್ದ ವಿರೂಪಾಕ್ಷಪ್ಪನವರು ತಮ್ಮ ಅವಧಿಯಲ್ಲಿ ಅಧಿಕಾರಕ್ಕಾಗಿ ಜನರ ಮಧ್ಯೆ ಜಾತಿಯ ಕಿಡಿಯಿಟ್ಟು ಜಾತಿ ಜಗಳಗಳಿಗೆ ಕಾರಣರಾಗಿದ್ದನ್ನು ತಾಲೂಕಿನ ಜನತೆ ಇನ್ನೂ ಮರೆತಿಲ್ಲ ಎಂದು ಟೀಕಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಹಾಂತೇಶ ಪಾಟೀಲ್, ಮುಖಂಡರಾದ ಮಾಜಿ ನಗರಸಭೆ ಸದಸ್ಯ ಜೀಲಾನಿಪಾಷಾ, ಜಿ.ಸತ್ಯನಾರಾಯಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಎಂ, ಲಿಂಗಪ್ಪ ದಢೇಸ್ಗೂರು, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಪ್ರಧಾನ ಕಾರ್ಯದರ್ಶಿ ಸಾಯಿರಾಮಕೃಷ್ಣ, ನೀಲಕಂಠರಾವ್ ಜಾಗೀರದಾರ, ತಡಕಲ್, ಜಹಿರುಲ್ಲಾ ಅಹ್ಮದ್, ಸಣ್ಣ ವೀರಭದ್ರಪ್ಪ ಕುರಕುಂದಿ, ಶರಣಬಸವ ಗೊರೇಬಾಳ, ಎಂ.ಮಹಿಬೂಬ್, ವೀರೇಶ ಹಟ್ಟಿ, ವೆಂಕಟೇಶ ನಂಜಲದಿನ್ನಿ ಸೇರಿದಂತೆ ಮಸ್ಕಿ, ಲಿಂಗಸ್ಗೂರು, ಮಾನ್ವಿ ಕ್ಷೇತ್ರದ ಅಭ್ಯರ್ಥಿಗಳು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಎಪಿಎಂಸಿ ಗಣೇಶ ದೇವಸ್ಥಾನದಿಂದ ಕುಮಾರಸ್ವಾಮಿಯವರನ್ನು ಮೆರವಣಿಗೆ ಮೂಲಕ ಆರ್ಜಿಎಂ ಶಾಲಾ ಮೈದಾನಕ್ಕೆ ಕರೆತರಲಾಯಿತು. ಹೊರೆಹೊತ್ತ ಮಹಿಳೆಯ ವೇಷಧಾರಿ ವೇದಿಕೆಯ ಮೇಲೆ ಎಲ್ಲರ ಗಮನ ಸೆಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

