ಸರ್ಕಾರಿ ಯೋಜನೆಗಳನ್ನೇ ವೈಯಕ್ತಿಕ ಎಂಬುದು ಮೂರ್ಖತನ
ಕನ್ನಡಪ್ರಭ ವಾರ್ತೆ, ಮುದಗಲ್, ಏ.30
ರಾಜ್ಯದಲ್ಲಿ ಐದು ವರ್ಷ ಉತ್ತಮ ಆಡಳಿತ ನೀಡಿದ ಬಿಜೆಪಿ ಸರ್ಕಾರ ಹಲವು ಜನಪರ ಯೋಜನೆ ಜಾರಿ ಗೊಳಿಸಿದ್ದರೂ ಪಕ್ಷದ್ರೋಹದ ಕೆಲಸ ಮಾಡಿ ನನ್ನ ಸಾಧನೆಗಳು ಎಂದು ಹೇಳಿಕೊಳ್ಳುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಶಾಸಕ ಮಾನಪ್ಪ ವಜ್ಜಲ್ ಮತ್ತು ಯಡಿಯೂರಪ್ಪ ಅವರಿಗೆ ಬಿಜೆಪಿ ಹಿರಿಯ ಮುಖಂಡ ಡಾ. ಜಿ.ಆರ್. ದೇಶಪಾಂಡೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಟಿ.ಆರ್. ನಾಯ್ಕ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಜೆಡಿಎಸ್ ಇಕ್ಕಟ್ಟು, ಕಾಂಗ್ರೆಸ್ ಬಿಕ್ಕಟ್ಟು, ಬಿಜೆಪಿ ಒಗ್ಗಟ್ಟು. ಬಿಜೆಪಿ ಸರ್ಕಾರವಿದ್ದ ಸಮಯದಲ್ಲಿ ಪಟ್ಟಣಕ್ಕೆ ಶಾಶ್ವತ ಕುಡಿವ ನೀರಿನ ಯೋಜನೆ, ಪ್ರಥಮ ದರ್ಜೆ ಕಾಲೇಜು ನೀಡಲಾಗಿದ್ದು, ಮತದಾರ ಪ್ರಭುಗಳು ಸ್ಮರಿಸಬೇಕಾಗಿದೆ ಎಂದರು.
ಹಿಂದಿನ ಶಾಸಕರಾಗಲಿ, ಮಾಜಿ ಮುಖ್ಯಮಂತ್ರಿಗಳಾಗಲಿ ಬಿಜೆಪಿ ಸರ್ಕಾರದ ಮೂಲಕ ತಂದಿರುವ ಯೋಜನೆಗಳನ್ನು ಜಾರಿಗೆಗೊಳಿಸಿದ್ದಾರೆ ವಿನಃ ತಮ್ಮ ಮನೆಯಿಂದಲ್ಲ. ಸರ್ಕಾರದ ಯೋಜನೆಗಳನ್ನು ನಾನು ಮಾಡಿದ್ದೇನೆ, ನಾನು ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದು ಸಮಯೋಚಿತವಲ್ಲ.
ಒಂದು ವೇಳೆ ಅದರ ಗೌರವ ತಮಗೆ ಸಲ್ಲಬೇಕಾಗಿದ್ದರೆ ಬಿಜೆಪಿಯಲ್ಲಿದ್ದು ಚುನಾವಣೆ ಎದುರಿಸಬೇಕಾಗಿತ್ತು. ಪಕ್ಷದ್ರೋಹ, ಉಂಡ ಮನೆಗೆ ಎರಡು ಬಗೆದಂತಹ ಕೆಲಸ ಮಾಡಿದ್ದಾರೆ ಎಂದು ಹರಿಹಾಯ್ದರು.
ಟೀಕಿಸುವ ಮುನ್ನ ಯೋಚಿಸಿ: ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿಗೆ ಸಲ್ಲದ ಆರೋಪ ಮಾಡುತ್ತಿದ್ದಾರೆ. ಮುಸ್ಲಿಂ ಜನಾಂಗ ವಿರೋಧಿ ಪಕ್ಷ, ಕೋಮುಗಲಭೆ ಪಕ್ಷ ಎನ್ನುವವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಮುಸ್ಲಿಂ ಜನಾಂಗದ ಮೇಲೆ ಪ್ರಕರಣಗಳು ದಾಖಲಾಗಿವೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಎಷ್ಟು ಅನುದಾನ ನೀಡಿದೆ, ಅಲ್ಪಸಂಖ್ಯಾತ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ 1000 ನೀಡಲಾಗಿದೆ.
ಆದರೆ ಸ್ವಾತಂತ್ರ್ಯ ನಂತರ ಹೆಚ್ಚು ಅವಧಿಯಲ್ಲಿ ಕೇಂದ್ರ, ರಾಜ್ಯದಲ್ಲಿ ಆಡಳಿತ ನಡೆಸಿ ಕಾಂಗ್ರೆಸ್ಸಿಗರು ಇಂತಹ ಯೋಜನೆಗಳನ್ನೇಕೆ ತರಲಿಲ್ಲ ಎಂದು ಮುಸ್ಲಿಮರು ವಿಚಾರಿಸಬೇಕಾಗಿದೆ ಎಂದು ಹೇಳಿದರು.
ಬಿಜೆಪಿ ತಾಲೂಕಾಧ್ಯಕ್ಷ ರಮೇಶ ಜೋಶಿ, ಮುಖಂಡರಾದ ಡಾ. ಎಂ.ವಿ. ಜೋಶಿ, ಸಿದ್ದಯ್ಯ ಗುರುವಿನ, ಮೋಬಿನ್ಸಾಬ ಮಾತನಾಡಿದರು. ಅಧ್ಯಕ್ಷತೆಯನ್ನು ಮುದಗಲ್ ಬ್ಲಾಕ್ ಬಿಜೆಪಿ ಅಧ್ಯಕ್ಷ ರಾಘವೇಂದ್ರ ಸುರಪುರ, ಅನಂತರಾವ್ ದೇಶಪಾಂಡೆ, ಹನುಮಂತಪ್ಪ ಮೇಗಳಪೇಟೆ, ಮಲ್ಲಪ್ಪ ಹೂಗಾರ, ಡಾ. ರಹೀಮ, ವಿರುಪಾಕ್ಷಪ್ಪ ಸಾಹುಕಾರ, ಜೀವಲೆಪ್ಪನಾಯ್ಕ, ಮನ್ಮಥ, ಟಿ.ಶೇಷಣ್ಣ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

